Advertisement

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

12:00 PM Apr 13, 2024 | Team Udayavani |

ಶ್ರೀಕೃಷ್ಣ ಯಾದವ ವಂಶದಲ್ಲಿ ಹುಟ್ಟಿದವನು. ಯಾದವ ವಂಶದ ಇತಿಹಾಸವೂ ಸಹ ಅಪೂರ್ವವೆನಿಸಿದೆ. ತುಂಬಾ ಹಿಂದೆ ಈ ವಂಶದಲ್ಲಿ ಅಹುಕ ಎಂಬ ರಾಜ ಇದ್ದ. ಈ ರಾಜನಿಗೆ ಉಗ್ರಸೇನ, ದೇವಕ ಎಂಬ ಇಬ್ಬರು ಗಂಡು ಮಕ್ಕಳು. ಉಗ್ರಸೇನನ ಮಗ ಕಂಸ. ದೇವಕನಿಗೆ ದೇವಕಿ ಎಂಬ ಹೆಣ್ಣು ಮಗಳು ಜನಿಸಿದಳು. ಯಾದವ ವಂಶದ ಅರಸರ ರಾಜಧಾನಿ ಆಗ ಮಥುರಾ ಪಟ್ಟಣ ಆಗಿತ್ತು.

Advertisement

ಉಗ್ರಸೇನ ರಾಜನ ಮಗನಾದ ಕಂಸ ಸ್ವಭಾವತಃ ಕ್ರೂರಿ, ದುರುಳ ಹಾಗೂ ದುಷ್ಟ. ರಾಜನಾಗುವ ಅತ್ಯಾಸೆಯಿಂದ ತಂದೆಯಾದ ಉಗ್ರಸೇನನನ್ನೇ ಕಾರಾಗೃಹದಲ್ಲಿ ಕೊಳೆ ಹಾಕಿ, ಸ್ವತಃ ಸಿಂಹಾಸನವನ್ನೇರಿದ. ಸ್ವೇಚ್ಛಾಚಾರಿ ಆದ ಇವನು ಪ್ರಜಾಪಾಲನೆಯ ಕಡೆಗೆ ಗಮನ ಹರಿಸುತ್ತಿರಲಿಲ್ಲ. ಇವನ ಕೀಟಲೆಗಳಿಗೆ ತತ್ತರಿಸಿದ ನಂದಗೋಪ ಎಂಬ ಗೊಲ್ಲರ ಮುಖಂಡ, ಇವನಿಂದ ದೂರವಾಗಿ ರಾಜಧಾನಿಯಿಂದ ದೂರದ ಗೋಕುಲದಲ್ಲಿ ತನ್ನ ಪರಿಜನರೊಂದಿಗೆ ವಾಸಿಸುತ್ತಿದ್ದ. ಇವನ ಮಡದಿಯೇ ಯಶೋದಾದೇವಿ.

ಕಂಸ ತನ್ನ ತಂಗಿಯಾದ ದೇವಕಿಯನ್ನು ತುಂಬಾ ಪ್ರೀತಿಸುತ್ತಿದ್ದ. ವಾತ್ಸಲ್ಯ ಭಾವದೊಂದಿಗೆ ಕಾಣುತ್ತಿದ್ದ. ಸ್ವತಃ ಅವಳ ಮದುವೆಯನ್ನು ಯೋಗ್ಯ ರಾಜನೊಂದಿಗೆ ಸಂಭ್ರಮದಿಂದ ನಡೆಸಲು ಯೋಚಿಸುತ್ತಿದ್ದ. ಈ ಸಂದರ್ಭದಲ್ಲಿ ಶೂರರಾಜನ ಮಗನಾದ ವಸುದೇವ ಅವನ ಗಮನ ಸೆಳೆದ. ಈಗಾಗಲೇ ವಸುದೇವನಿಗೆ ರೋಹಿಣಿ ಎಂಬ ಮಡದಿ ಇದ್ದಳು.

ಗೋಕುಲದಲ್ಲಿ ವಾಸಿಸುತ್ತಿದ್ದಳು. ವಸುದೇವ ಸುಂದರನೂ, ಸುಯೋಗ್ಯನೂ ಆಗಿದ್ದುದರಿಂದ, ಅವನೊಂದಿಗೇ ದೇವಕಿಯ ಮದುವೆಯನ್ನು ಸಂಭ್ರಮೋತ್ಸಾಹದಿಂದ ನೆರವೇರಿಸಿದ. ವಧು-ವರರ ಮೆರವಣಿಗೆ ರಾಜಬೀದಿಯಲ್ಲಿ ಹೊರಟಾಗ, ಅವರು ಆರೂಢರಾಗಿದ್ದ ರಥವನ್ನು ಸಂತೋಷದಿಂದ ಕಂಸನೇ ಸಾರಥಿಯಾಗಿ ನಡೆಸಿಕೊಂಡು ಬಂದ.

Advertisement

ಈ ಸಂದರ್ಭದಲ್ಲಿ ಅವನಿಗೆ ಆಕಾಶವಾಣಿ ಕೇಳಿಸಿತು: “ಎಲವೋ ದುರುಳ, ನಿನ್ನ ಸಂಭ್ರಮದ ಸಂತೋಷವನ್ನು ಸಾಕುಮಾಡು. ನಿನ್ನ ಇದೇ ತಂಗಿಯ ಗರ್ಭದಲ್ಲಿ ಜನಿಸುವ ಎಂಟನೆಯ ಮಗುವಿನಿಂದಲೇ ನಿನಗೆ ಮೃತ್ಯು ಸಂಭವಿಸುವುದು!’ ಆಕಾಶವಾಣಿಯು ಕಂಸನ ಕಿವಿಗಳನ್ನು ಕರ್ಣಕಠೊರ ರೀತಿಯಲ್ಲಿ ಬಡಿಯಿತು. ತಂಗಿ ಎಂಬ ವಾತ್ಸಲ್ಯ ಮಾಯವಾಯಿತು. ಸೊಂಟದಲ್ಲಿದ್ದ ಕತ್ತಿಯನ್ನು ಹೊರಗೆಳೆದ. ಅವಳನ್ನು ಕೊಲ್ಲಲು ಮುಂದಾದ. ಮದುವಣಗಿತ್ತಿಯಾದ ದೇವಕಿ ಅಣ್ಣನ ಕೋಪಾಗ್ನಿಯಲ್ಲಿ ಗಡಗಡನೆ ನಡುಗ ತೊಡಗಿದಳು. ಬಿರುಗಾಳಿಗೆ ಸಿಕ್ಕಿದ ಬಾಳೆಯ ಗಿಡದಂತಾದಳು.

ವಸುದೇವ ಮುಂದೆ ಬಂದು, ತನ್ನ ಎರಡೂ ಕೈಗಳನ್ನು ಜೋಡಿಸುತ್ತಾ ಪ್ರಾರ್ಥಿಸಿದ. ಕಂಸನೇ, ಆತುರ ಪಡಬೇಡ. ಕೋಪಾವೇಶದಲ್ಲಿ ವಿವೇಕವನ್ನೇ ಕಳೆದುಕೊಳ್ಳಬೇಡ. ದೇವಕಿ ಎಷ್ಟಾದರೂ ನಿನ್ನ ಅಕ್ಕರೆಯ ತಂಗಿ. ಅವಳ ಗರ್ಭದಲ್ಲಿ ಜನಿಸುವ ಎಂಟನೆಯ ಮಗು ತಾನೇ ನಿನ್ನನ್ನು ಕೊಲ್ಲುವುದು? ಈಗ ಅವಳನ್ನು ಉಳಿಸು. ಅವಳಿಗೆ ಜನಿಸುವ ಎಲ್ಲ ಮಕ್ಕಳನ್ನೂ ಹುಟ್ಟಿದ ಕೂಡಲೇ ನಾನೇ ನಿನಗೆ ತಂದೊಪ್ಪಿಸುವೆ. ಅವನ್ನು ನಿನ್ನಿಷ್ಟ ಬಂದಂತೆ ಏನು ಬೇಕಾದರೂ ಮಾಡು. ಕಂಸ ಈಗಲೂ ಒಲ್ಲದ ಮನದಿಂದಲೇ ಒಪ್ಪಿದ. ಮದುವೆಯ ಮೆರವಣಿಗೆ ಅಲ್ಲಿಗೇ ನಿಂತಿತು. ದೇವಕಿ ಮೊದಲ ಮಗುವಿಗೆ ಜನ್ಮ ನೀಡಿದಳು.

ವಸುದೇವ ಕೊಟ್ಟ ಮಾತಿಗೆ ತಪ್ಪದೆ ಆ ಮಗುವನ್ನು ತಂದು, ಕಂಸನಿಗೆ ಒಪ್ಪಿಸಿದ. ಅವನಿಗೆ ಅದೇನನ್ನಿಸಿತೋ! ಕೈಗೆ ತೆಗೆದುಕೊಂಡು ಆ ಮುದ್ದು ಮಗುವನ್ನು ವಸುದೇವನಿಗೇ ಹಿಂದಿರುಗಿಸುತ್ತಾ ಹೇಳಿದ: “ವಸುದೇವ, ನನ್ನನ್ನು ಕೊಲ್ಲುವುದು ಅವಳ ಎಂಟನೆಯ ಮಗು ತಾನೇ? ಈ ಮಗುವನ್ನು ನೀನೇ ತೆಗೆದುಕೊಂಡು ಹೋಗು’. ಹೀಗೆಯೇ ಆರು ಮಕ್ಕಳನ್ನು ವಸುದೇವ ಹುಟ್ಟಿದ ಕೂಡಲೇ ಕಂಸನ ಬಳಿಗೆ ತಂದೊಪ್ಪಿಸಿದ. ಅವೆಲ್ಲವನ್ನೂ ಉದಾಸಮನದಿಂದ ದುರುಳ ಕಂಸ ಹಿಂದಿರುಗಿಸಿದ. ದೇವಕಿಯೇ ಅಣ್ಣನ ಔದಾರ್ಯವನ್ನು ಕಂಡು ಹಿಗ್ಗಿ ಹೋದಳು. ಈ ಮಧ್ಯೆ ನಾರದ ಮಹರ್ಷಿ ಕಂಸನ ಬಳಿಗೆ ಬಂದರು. ಅವನ ಕಿವಿಯಲ್ಲಿ ಹೇಳಿದರು:ಕಂಸಾಸುರಾ, ಯಾರನ್ನೂ ನಂಬಬೇಡ.

ಅಶರೀರವಾಣಿಯ ಮಾತು ಎಂದಿಗೂ ಸುಳ್ಳಾಗದು. ದೇವಕಿಯ ಅಷ್ಟಮ ಗರ್ಭದಲ್ಲಿ ಜನಿಸುವ ಮಗು ನಿನ್ನ ಪಾಲಿಗೆ ಮೃತ್ಯುದೇವತೆ ಎಂದೇ ತಿಳಿ. ಕಂಸನಿಗೆ ನಾರದರ ಮಾತುಗಳು ಕಿವಿಯೊಳಗೆ ಹೋಗುತ್ತಿದ್ದಂತೆ ಕಾದ ಸೀಸವನ್ನೇ ಕಿವಿಯೊಳಗೆ ಸುರಿದಂತಾಯಿತು. ಕೂಡಲೇ ವಸುದೇವನಿಗೆ ಆರು ಮಕ್ಕಳನ್ನು ತಂದೊಪ್ಪಿಸಲು ಆಜ್ಞೆ ಮಾಡಿದ. ತಂದೊಪ್ಪಿಸಿದ ಕೂಡಲೇ ಅವನ್ನು ಅಗಸನು ಬಟ್ಟೆಗಳನ್ನು ಬಂಡೆಯ ಮೇಲೆ ಒಗೆಯುವಂತೆ, ನಿಮಿಷ ಮಾತ್ರದಲ್ಲಿ ಬಡಿದು, ಕೊಂದು ಮುಗಿಸಿದ. ಇಷ್ಟೇ ಅಲ್ಲ. ವಸುದೇವ-ದೇವಕಿಯರೀರ್ವರನ್ನೂ ಸೆರೆಮನೆಯಲ್ಲಿರಿಸಿದ.

ನಾರದರು ಹೇಳಿದ “ಯಾರನ್ನೂ ನಂಬಬೇಡ’ ಎಂಬ ಮಾತು ಅವನ ಮನಮಸ್ತಿಷ್ಕದಲ್ಲಿ ಮರುಕಳಿಸುತ್ತಲೇ ಇತ್ತು. ತನ್ನ ಯಾದವ ಪ್ರಜೆಗಳಲ್ಲಿ ಎಲ್ಲಿ ಯಾರು ತನ್ನ ಹಿತಶತ್ರು ಆಗಿದ್ದಾರೋ! ಎಂದು ಕಣ್ಣಲ್ಲಿ ಕಣ್ಣಿಟ್ಟು ಗಮನಿಸತೊಡಗಿದ. ತನ್ನ ಉಪಟಳದಿಂದ ಗೋಕುಲಕ್ಕೆ ಓಡಿಹೋಗಿರುವ ನಂದಗೋಪನ ಮೇಲೂ ಈಗ ಕಳ್ಳನ ಮನಸ್ಸು ಹುಳ್ಳುಳ್ಳಗೆ ಎಂಬಂತೆ ಕೆಟ್ಟ ದೃಷ್ಟಿ ಬಿತ್ತು. ದೇವಕಿಯ ಏಳನೆಯ ಗರ್ಭದಲ್ಲಿ ಆದಿಶೇಷನೇ ಹುಟ್ಟಿದ.

ವಿಷ್ಣು ಪರಮಾತ್ಮನ ಅಣತಿಯಂತೆ ಮಾಯೆ ಆ ಮಗುವನ್ನು ದೇವಕಿಯ ಗರ್ಭದಿಂದ ತೆಗೆದು ಯಾರಿಗೂ ತಿಳಿಯದಂತೆ, ಗೋಕುಲದಲ್ಲಿದ್ದ ವಸುದೇವನ ಮೊದಲ ಹೆಂಡತಿ, ರೋಹಿಣಿಯ ಗರ್ಭದಲ್ಲಿಟ್ಟು ಬಂದಳು. ಕಂಸ ವಿಷ್ಣು ಮಾಯೆಯನ್ನು ಅರಿಯದೆ ಈ ಬಾರಿ ದೇವಕಿಗೆ ಗರ್ಭಪಾತ ಆಯಿತೆಂದೇ ಭ್ರಮಿಸಿದ. ದೇವಕಿ ಮತ್ತೆ ಗರ್ಭವತಿ ಆದಳು. ಶ್ರಾವಣ ಬಹುಳ ಅಷ್ಟಮಿಯ ದಿನದ ರೋಹಿಣೀ ನಕ್ಷತ್ರದಲ್ಲಿ ಎಂಟನೆಯ ಮಗುವಿಗೆ ಜನ್ಮ ನೀಡಿದಳು. ಮಗು ಹುಟ್ಟಿದ್ದು ಸೆರೆಮನೆಯಲ್ಲಿಯೇ.

ಮುದ್ದಾದ ಮಗುವನ್ನು ವಸುದೇವ, ದೇವಕಿಯರು ನೋಡುತ್ತಿದ್ದಂತೆಯೇ ಆ ಮಗು ಮಹಾವಿಷ್ಣುವಿನ ರೂಪ ತಾಳಿತು. ಕೊರಳಲ್ಲಿ ವೈಜಯಂತಿ ಮಾಲೆ, ನಾಲ್ಕು ಭುಜಗಳು ನಾಲ್ಕು ಕೈಗಳಲ್ಲಿಯೂ ಶಂಖ, ಚಕ್ರ ಹಾಗೂ ಗದೆ. ಇನ್ನೊಂದು ಕೈ ಅಭಯ ಹಸ್ತ. ತಲೆಯ ಮೇಲೆ ರತ್ನದ ಕಿರೀಟ. ಮುಗುಳುನಗೆಯ ಮುಖ. ನೋಡುತ್ತಿದ್ದಂತೆ ವಸುದೇವ, ದೇವಕಿಯರು ಪುಳಕಿತರಾದರು. ಭಕ್ತಿಯಿಂದ ಆನಂದದ ಕಣ್ಣೀರು ಸುರಿಸುತ್ತಾ, ಎರಡು ಕೈಗಳನ್ನು ಜೋಡಿಸಿ ನಮಿಸಿದರು.

ಅವರ ಬಾಯಿಂದ ಮಾತೇ ಹೊರಬರಲಿಲ್ಲ. ಪ್ರತ್ಯಕ್ಷನಾದ ವಿಷ್ಣು ಪರಮಾತ್ಮ ನಗುನಗುತ್ತಲೇ ಹೇಳಿದ: ಭಯಪಡಬೇಡಿ. ಗೋಕುಲದಲ್ಲಿ ನಂದಗೋಪನ ಹೆಂಡತಿ, ಯಶೋದೆ, ಈಗ ತಾನೇ ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿ¨ªಾಳೆ. ಈ ಕೂಡಲೇ ನನ್ನನ್ನು ಅಲ್ಲಿಗೆ ತೆಗೆದುಕೊಂಡು ಹೋಗಿ. ಆ ಮಗುವಿನ ಜಾಗದಲ್ಲಿ ನನ್ನನ್ನಿಟ್ಟು, ಆ ಮಗುವನ್ನು ಇಲ್ಲಿಗೆ ತಂದುಬಿಡಿ – ರೋಹಿಣಿಗೆ ಈಗಾಗಲೇ ಒಂದು ಗಂಡು ಮಗು ಹುಟ್ಟಿದೆ. ಹೀಗೆ ಹೇಳುತ್ತಿದ್ದಂತೆ ಮತ್ತೆ ವಿಷ್ಣು ಪರಮಾತ್ಮ ಆಗ ತಾನೆ ಹುಟ್ಟಿದ ಮಗುವಾಗಿ ನೆಲದ ಮೇಲೆ ಕೈಕಾಲು ಆಡಿಸತೊಡಗಿದ.

ವಸುದೇವ ಮಗುವನ್ನು ಆನಂದದಿಂದ ಕೈಗೆತ್ತಿಕೊಂಡ. ಸೆರೆಮನೆಯ ಬಾಗಿಲುಗಳು ತಾವಾಗಿ ತೆರೆದುಕೊಂಡುವು. ಕಾವಲುಗಾರರು ಎಂದೂ ಇಲ್ಲದ ಗಾಢನಿದ್ರೆಯಲ್ಲಿ ಮುಳುಗಿದ್ದಾರೆ. ಬೇಗ ಬೇಗ ನಡುರಾತ್ರಿಯ ಕಾರ್ಗತ್ತಲಲ್ಲೇ ಮಗುವಿನೊಂದಿಗೆ ವಸುದೇವ ಹೊರಬಂದ. ಹೊರಗೆ ಒಂದೇ ಸಮನೆ ಮಳೆ. ಮಗು ಹಾಗೂ ವಸುದೇವನ ರಕ್ಷಣೆಗಾಗಿ ಆದಿಶೇಷನೇ ಕೊಡೆಯಂತೆ ತನ್ನ ಹೆಡೆಯನ್ನು ಬಿಚ್ಚಿ, ರಕ್ಷಣೆ ನೀಡಿದ. ಯಮುನಾ ನದಿಯನ್ನು ದಾಟಿ, ಕತ್ತಲಲ್ಲಿಯೇ ವಸುದೇವ ಗೋಕುಲಕ್ಕೆ ಬಂದ. ತಾನು ತಂದಿದ್ದ ಮಗುವನ್ನು ನಿದ್ರಾವಸ್ಥೆಯಲ್ಲಿದ್ದ ಯಶೋಧೆಯ ಮಗ್ಗುಲಲ್ಲಿ ಮಲಗಿಸಿ, ಅಲ್ಲಿದ್ದ ಹೆಣ್ಣು ಮಗುವಿನ ರೂಪದ ಮಾಯೆಯನ್ನು ಎತ್ತಿಕೊಂಡು ಕರಾಳ ರಾತ್ರಿಯಲ್ಲೇ ತನ್ನ ಸೆರೆಮನೆ ಸೇರಿದ.

ಸೇರುತ್ತಿದ್ದಂತೆ ಬಾಗಿಲುಗಳು ಮುಚ್ಚಿಕೊಂಡು ಬೀಗಗಳು ಭದ್ರ ಆದುವು. ಕಾವಲುಗಾರರೂ ಎಚ್ಚೆತ್ತು ಕುಳಿತರು. ಮಗು ಅಳುವ ಧ್ವನಿ ಕೇಳಿಸಿತು. ಕೂಡಲೇ ಆ ಮಗುವನ್ನು ಕಾವಲುಗಾರರೇ ಎತ್ತಿಕೊಂಡು, ಕಂಸನಿಗೆ ತಂದೊಪ್ಪಿಸಿದರು. ಅದನ್ನು ಬಂಡೆಗೆ ಬಡಿಯಲು ಕಂಸ ಕೈಯಲ್ಲಿ ಭದ್ರವಾಗಿ ಹಿಡಿದು, ಮೇಲೆತ್ತುತ್ತಿದ್ದಂತೆಯೇ ಅದು ಕೈತಪ್ಪಿಸಿಕೊಂಡು ಅಂತರಿಕ್ಷಕ್ಕೆ ಹಾರಿತು. ಶಕ್ತಿದೇವಿಯ ರೂಪದಲ್ಲಿ ಕಾಣಿಸಿಕೊಂಡು ಹೇಳಿತು: “ಎಲವೋ ಮೂಢ, ನಿನ್ನನ್ನು ಕೊಲ್ಲುವ ಮಗು ಬೇರೊಂದು ಕಡೆ ಬೆಳೆಯುತ್ತಿದೆ. ದೊಡ್ಡದಾಗುತ್ತಿದ್ದಂತೆ ಬಂದು, ನಿನ್ನನ್ನು ಮೃತ್ಯುಲೋಕಕ್ಕೆ ಅಟ್ಟುತ್ತದೆ.’ ಹೀಗೆ ಹೇಳುತ್ತಿದ್ದಂತೆ ಅಂತರ್ಧಾನವಾಯಿತು. ಕಂಸನಿಗೆ ದಿಕ್ಕೇ ತೋಚಲಿಲ್ಲ. ತಾನೊಂದು ಬಗೆದರೆ ದೈವವೊಂದು ಬಗೆದಂತೆ ಚಿಂತಿತನಾಗಿ ನೆಲಕ್ಕೆ ಕುಸಿದ. ಅವನ ಕೈಗಳು ಆಯಾಸದಿಂದ ಅವನ ತಲೆ ಮೇಲೆರಗಿದುವು…….ಹೀಗೆ ಕಿಲಕಿಲ ನಗುತ್ತಾ ಪಿಳಿಪಿಳಿ ಕಣ್ಣು ಬಿಡುತ್ತಾ ಭಗವಂತ ಕೃಷ್ಣ ದೇವಕಿಯ ಗರ್ಭದಲ್ಲಿ, ಪುಟ್ಟ ಕಾಲುಗಳನ್ನು ಅಲ್ಲಾಡಿಸುತ್ತಾ, ಭೂಮಿಗೆ ಅವತಾರ ತಾಳಿದನು.

*ಮಹಾಲಕ್ಷ್ಮೀ ಸುಬ್ರಹ್ಮಣ್ಯ, ಶಾರ್ಜಾ

Advertisement

Udayavani is now on Telegram. Click here to join our channel and stay updated with the latest news.

Next