Advertisement

Desi Swara: ಕನ್ನಡ ಕಟ್ಟುವುದನ್ನು ಮುಂದುವರೆಸಿ-ಟಿಎಸ್ ನಾಗಾಭರಣ

11:22 AM Jun 01, 2024 | Team Udayavani |

ಲಾಸ್‌ ಏಂಜಲೀಸ್‌: ಕನ್ನಡ ಸಂಘ ಲಾಸ್‌ಏಂಜಲೀಸ್‌ / ಕನ್ನಡ ಕಲ್ಚರಲ್‌ ಅಸೋಸಿಯೇಶನ್‌ ಸದರ್ನ್ ಕ್ಯಾಲಿಫೋರ್ನಿಯಾ ವತಿಯಿಂದ ಯುಗಾದಿ ಹಬ್ಬದ ಆಚರಣೆ ಸಲುವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಆಡಿಟೋರಿಯಂ ಪ್ರವೇಶಿಸುವ ಮುನ್ನವೇ ಮುರಳಿ ಬಿ.ಎಲ್‌. ಅವರು ಸ್ವಾಗತ ಭಾಷಣದ ಜತೆಗೆ ಈ ಬಾರಿಯ ಯುಗಾದಿ ಆಚರಣೆ ಒಂದು ಬಗೆಯ ನೂತನ ಪ್ರಯತ್ನದೊಂದಿಗೆ ಶುಭಾರಂಭ ಮಾಡುತ್ತಿರುವ ವಿಷಯ ತಿಳಿಸಿದರು.

Advertisement

ಸೊಗಸಾದ ಊಟದೊಂದಿಗೆ, ಬಯಲೂಟದ ಜತೆ ಬಯಲಾಟ ಎನ್ನುವ ಹೊಸ ಪರಿಕಲ್ಪನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಬಯಲಿನಲ್ಲಿ ಊಟ ಸವಿಯುತ್ತಲೇ ಹಲವಾರು ಕಾರ್ಯಕ್ರಮಗನ್ನು ವೀಕ್ಷಿಸುವಂತೆ ರೂಪಿಸಲಾಗಿತ್ತು.

ಬಸವರಾಜ್‌ ಹುಕ್ಕೇರಿ ತಂಡದೊಂದಿಗೆ ಕೊಡವ ಹಾಡು ಸೇರಿದಂತೆ ವಿವಿಧ ಜಾನಪದ ಹಾಡುಗಳ ನೃತ್ಯ ಪ್ರದರ್ಶನವಾಯಿತು. ಅನಂತರ ನಡೆದ ಫ್ಯಾಷನ್‌ ಶೋನಲ್ಲಿ ಸಂಘದ ಹಿರಿಯರು ವಿವಿಧ ಜಿಲ್ಲೆಗಳನ್ನು ಪ್ರತಿನಿಧಿಸಿ ನಲಿದು ರಂಜಿಸಿದರು. ಈ ಬಾರಿ ನಾಗಾಭರಣ ದಂಪತಿ ಕೂಡ ಈ ಫ್ಯಾಷನ್‌ ಶೋನಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

ರಘುರಾಮ್‌ ಶೆಟ್ಟಿ ತಂಡದಿಂದ ರಾಕ್ಷಸ ರಾಜರು ಎಂಬ ಪ್ರಸಂಗ ನಡೆಯಿತು. ಅದರಲ್ಲಿ ಹಿರಣ್ಯ ಕಶಿಪು, ಪ್ರಹ್ಲಾದ, ಬಲಿ ಮುಂತಾದ ರಾಜರುಗಳು ಬಂದು ಹೋದರು. ಅನಂತರದ ಸರದಿ ಸುಷ್ಮಾಚಾರ್‌ ನೃತ್ಯ ನಿರ್ದೇಶನದ ಫ್ಯಾಷನ್‌ ಮಾಬ್‌ ಕಾರ್ಯಕ್ರಮ. ಯುಗಾದಿ ಹಾಡುಗಳ ಮೆಡ್ಲೆ ನೃತ್ಯವನ್ನು ಇವರ ತಂಡ ಪ್ರದರ್ಶಿಸಿತು.

Advertisement

ಘಲ್ಲು ಘಲ್ಲೆನುತಾ, ಏನು ಚೆಂದ, ರಾರಾ ರುಕ್ಕಮ್ಮ ಮುಂತಾದ ಹಾಡುಗಳು ವೀಕ್ಷಕರನ್ನು ಕುಳಿತಲ್ಲೇ ನೃತ್ಯ ಮಾಡುವಂತೆ ಮಾಡಿತು. ಈ ನೃತ್ಯದಿಂದ ಪ್ರೇರಿತರಾದ ನಮ್ಮ ಸಂಘದ ಪುರುಷರು ಕೂಡ ಕೆಲವು ಹಾಡುಗಳಿಗೆ ಹೆಜ್ಜೆ ಹಾಕಿದರು. ಬಯಲೂಟದ ಜತೆ ಬಯಲಾಟದ ಅನಂತರ ಎಲ್ಲರೂ ಆಡಿಟೋರಿಯಂನತ್ತ ಹೆಜ್ಜೆ ಹಾಕಿದರು. ಅಲ್ಲಿ ಕುಮುದ ಸರಾಫ್‌ ಅವರು ಸುಶ್ರಾವ್ಯವಾಗಿ ವಂದಿಸುವುದಾದಿಯಲ್ಲಿ ಗಣನಾಥನ ಹಾಡಿನೊಂದಿಗೆ ಮುಂದಿನ ಕಾರ್ಯಕ್ರಮಗಳಿಗೆ ನಾಂದಿ ಹಾಡಿದರು.

ಅಂದಿನ ಮುಖ್ಯ ಅತಿಥಿಗಳಾದ ನಾಗಾಭರಣ ದಂಪತಿ ಉಪಸ್ಥಿತರಿದ್ದರು. ನಾಗಾಭರಣ ಮಾತನಾಡಿ ಸ್ವಾತಂತ್ರ್ಯೋತ್ಸವದ ಬಗ್ಗೆ, ಸುವರ್ಣ ಕರ್ನಾಟಕದ ಬಗ್ಗೆ ಹೇಳಿದರು. ಹಾಗೆಯೇ ರಂಜಿಸಿದ ಸುರ ಸುಂದರರು ಸುಂದರಿಯರ ಬಗ್ಗೆಯೂ ಮಾತನಾಡಿದರು. ಇಲ್ಲಿ ಕನ್ನಡದ ಮನಸ್ಸುಗಳೆಲ್ಲ ಒಂದಾಗಿವೆ. ಎಲ್ಲಾದರೂ ಇರು ಎಂತಾದರು ಇರು ಎಂದೆಂದೂ ನೀ ಕನ್ನಡಿಗನಾಗಿರು ಎಂಬಂತೆ ನೀವೆಲ್ಲ ಇಲ್ಲಿ ಸೇರಿದ್ದೀರಿ. ಜತೆಗೆ ಕನ್ನಡಿಗರ ಔದಾರ್ಯ ಕನ್ನಡಿಗರ ಹೆಮ್ಮೆ, ನಾವು ಯಾರಿಗೂ ಕಮ್ಮಿ ಇಲ್ಲ ಎಂಬ ಅಹಂ ಇರಬೇಕು ಎಂದರು.

ಅನಾದಿ ಕಾಲದಿಂದಲೂ ಅಂದರೆ ಕದಂಬರ ಕಾಲದಿಂದಲೂ ಕನ್ನಡಿಗರಿಗೆ ಒಗ್ಗಟ್ಟು, ಅಭಿಮಾನ ಕಮ್ಮಿ ಎಂದು ಚಾಟಿ ಬೀಸಿದರು. ಅದೇ ಉಸಿರಿನಲ್ಲಿ ಬಂದವರು ಸ್ವಾಭಿಮಾನವನ್ನು ಪ್ರತಿನಿಧಿಸುತ್ತಾರೆ, ಕನ್ನಡ ಕಟ್ಟುವುದನ್ನು ಮುಂದುವರೆಸಿ ಎಂದು ಸಲಹಿದರು.

ಕನ್ನಡ ಕಲ್ಚರಲ್‌ ಅವಾರ್ಡ್‌ ಹಾಗೂ ಕನ್ನಡ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನಾಗಾಭರಣ ದಂಪತಿಗೆ ನೆನಪಿನ ಕಾಣಿಕೆಯೊಂದಿಗೆ ಸಮ್ಮಾನಿಸಲಾಯಿತು.

ಸಂಘದ ಅಧ್ಯಕ್ಷರಾದ ಅನಂತ್‌ ಪ್ರಸಾದ್‌ ಅವರು ಸಂಘದ ಜನರಲ್‌ ಬಾಡಿ ಮೀಟಿಂಗ್‌ ಅನ್ನು ಯುಗಾದಿಯ ಶುಭಾಶಯಗಳೊಂದಿಗೆ ಆರಂಭಿಸಿ ಕನ್ನಡ ಸಂಸ್ಕೃತಿ, ಸಂರಕ್ಷಣೆ, ಉತ್ತರ, ದಕ್ಷಿಣ ಕರ್ನಾಟಕದ ಬಗ್ಗೆ ಮಾತನಾಡಿದರು. ಹಾಗೆಯೇ ಹೊಸ ಸದಸ್ಯರನ್ನು ಸ್ವಾಗತಿಸಿ, ಸದಸ್ಯತ್ವ ನೋಂದಣಿಯಲ್ಲಿ ಏರಿಕೆಯಾಗಿರುವ ಬಗ್ಗೆಯೂ ತಿಳಿಸಿದರು. ನಮ್ಮ ಕೆಸಿಎ ಸುಮಾರು ಮೈಲಿಗಳವರೆಗೂ ವಿಸ್ತರಿಸುವುದರ ಬಗ್ಗೆಯೂ ತಿಳಿಸಿ, ಮುಂತಾದ ಕಾರ್ಯಕ್ರಮಗಳ ಬಗ್ಗೆ ಮಾತನಾಡಿದರು.

ಕಾರ್ಯದರ್ಶಿ ರಾಜೀವ್‌ ಸೀತಾರಾಮ್‌ ಅವರು ಮಾತನಾಡಿದರು. ಖಜಾಂಚಿ ದಿವ್ಯಾನಂದ ಅವರು ವರದಿ ಒಪ್ಪಿಸಿದರು. ಹೊರ ಹೋಗುವ ಸದಸ್ಯರನ್ನು ಅವರ ಸೇವೆಯನ್ನು ನೆನೆದು, ಹೊಸ ಸದಸ್ಯರನ್ನು ಅರುಣ್‌ ಮಾಧವ್‌ ಸ್ವಾಗತಿಸಿದರು.

ಅಂತ್ಯಾಕ್ಷರಿ
ಕೆಸಿಎ-ಅಂತ್ಯಾಕ್ಷರಿಯ ಸೀಸನ್‌ 1 ಫೈನಲ್ಸ್‌ ಅನ್ನು ಶ್ರೀಧರ್‌ ರಾಜಣ್ಣ ಲವಲವಿಕೆಯಿಂದ ನಡೆಸಿಕೊಟ್ಟರು. ಪ್ರತಿಯೊಂದು ಸುತ್ತು ಅತ್ಯಂತ ಕಠಿನವಾಗಿ, ಸ್ಪರ್ಧಾತ್ಮಕವಾಗಿ ರೂಪಿಸಿದ್ದರು. ಸುಮಾರು 14 ತಂಡಗಳೊಂದಿಗೆ ಶುರುವಾಗಿ, 9 ತಿಂಗಳ ಕಾಲ ನಡೆದು, ಸುಮಾರು ಸುತ್ತುಗಳನ್ನು ದಾಟಿ ಫೈನಲ್ ಸುತ್ತು ತಲುಪಿದ್ದು ಚಂದವಳ್ಳಿಯ ತೋಟ, ಗಂಧದ ಗುಡಿ 1, ಗಂಧದ ಗುಡಿ 2 ಹಾಗೂ ಸ್ವರ್ಣ ಲಹರಿ ತಂಡಗಳು. ಈ ಅಂತ್ಯಾಕ್ಷರಿ ಸ್ಪರ್ಧೆಯನ್ನು ಗೆದ್ದದ್ದು ಅಪ್ಪ ಮಗಳ (ಆದ್ವಿಕಾ ಹಾಗೂ ಮಧು) ಚಂದವಳ್ಳಿಯ ತೋಟ ತಂಡ.

ಸಂಗೀತ ಸಂಜೆ
ಆ ದಿನದ ಮುಖ್ಯ ಆಕರ್ಷಣೆ ಪ್ರೀತ್ಸೇ ಪ್ರೀತ್ಸೇ ಖ್ಯಾತಿಯ ಹೇಮಂತ್‌ ಕುಮಾರ್‌ ಮತ್ತು ತಂಡದ ಸಂಗೀತ ಸಂಜೆ ಅದ್ಭುತವಾಗಿ ಶುರುವಾಯಿತು. ಶರಣು ಶರಣು ಗಣಪಯ್ಯ ದೊಂದಿಗೆ ಶ್ರೀಗಣೇಶ ಹೇಳಿದರು. ನಾವು ಕನ್ನಡಕ್ಕಾಗಿ ಬಂದಿದ್ದೀವಿ, ನೀವು ಕನ್ನಡ ಉಳಿಸ್ತಿದ್ದೀರಿ, ಸಿರಿಗನ್ನಡಂ ಗೆಲ್ಗೆ ಎಂದು ಹೇಳಿ, ಹಾಡುಗಳನ್ನು ಹಾಡಿದರು. ಸರಿಗಮಪ ಖ್ಯಾತಿಯ ಹರ್ಷ, ರಂಜನಿ ಅವರು ತಮ್ಮ ಸಂಗೀತದಿಂದ ರಂಜಿಸಿದರು. ಪಂಜಾಬಿ ಹಾಡುಗಳ ವಾದ್ಯವಾದನವು ಮಧ್ಯೆ ಮಧ್ಯೆ ರಂಜಿಸಿದರು. ಪ್ರೇಕ್ಷಕರು ಕೂಡ ಅಷ್ಟೇ ಅದ್ಭುತವಾಗಿ ಸ್ಪಂದಿಸಿ ಸ್ಟೇಜ್‌ ಮುಂದೆ ನೆರೆದು ಜತೆಯಲ್ಲೇ ಹಾಡಿ, ಕುಣಿದು, ಶಿಳ್ಳೆ ಹೊಡೆದು ಸಂಭ್ರಮಿಸಿದರು. ಒಟ್ಟಿನಲ್ಲಿ ಆ ದಿನ ಸುಂದರವಾಗಿ ಕಳೆಯಿತು. ಅರವಿಂದ್‌ ರಾಮಸ್ವಾಮಿ ಅವರು ಸರ್ವರಿಗೂ ವಂದಿಸಿದರು.

ವರದಿ: ಉಮಾ ರಾಮಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next