Advertisement

Desi Swara: ಜರ್ಮನಿ-ಕನ್ನಡ ಕಲೆಗಳ ಸಂಗಮ

12:54 PM Jul 13, 2024 | Team Udayavani |

ಕಳೆದ ಹಲವಾರು ತಿಂಗಳುಗಳಿಂದ ನಾವಿಕೋತ್ಸವದ ತಯಾರಿಗಾಗಿ ಜರ್ಮನಿಯ ಕನ್ನಡ ಸಂಘಗಳು ಒಟ್ಟುಗೂಡಿ ಕಾರ್ಯನಿರ್ವಹಿಸುತ್ತಿತ್ತು. ಇದರ ಹೃದಯ ಭಾಗವಾಗಿ “ಕನ್ನಡ ಸಾಹಿತ್ಯ ವೇದಿಕೆ’ ಎಲ್ಲರ ಗಮನ ಸೆಳೆದಿತ್ತು. ವೇದಿಕೆಯ ಅಧ್ಯಕ್ಷರಾಗಿ ಪ್ರೊ| ಕೃಷ್ಣೇಗೌಡರವರು ಮತ್ತು ಮುಖ್ಯ ಅಭ್ಯಾಗತರಾಗಿ ನಾಡೋಜ ಡಾ| ಮಹೇಶ್‌ ಜೋಶಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Advertisement

ವೇದಿಕೆಯ ಮುಖ್ಯ ಚುಕ್ಕಾಣಿ ಹಿಡಿದ ಸಿರಿಗನ್ನಡ ಕೂಟ ಮ್ಯೂನಿಕ್‌ನ ಕಮಲಾಕ್ಷ ಎಚ್‌.ಎ. ಆರ್‌ಎಂಕೆಎಸ್‌ನ ಅಧ್ಯಕ್ಷರು ವೇದಕುಮಾರ್‌, ಉಪಾಧ್ಯಕ್ಷರಾದ ರಿಯಾಜ್‌ ಶಿರಸಂಗಿ, ಸಹ ಕಾರ್ಯದರ್ಶಿ ಪ್ರದೀಪ್‌ ಶೆಟ್ಟಿ , ನಾವಿಕೋತ್ಸವದ ಸಂಚಾಲಕರಾದ ವಿಶ್ವನಾಥ ಬಾಳಕಾಯಿ, ಕಾರ್ಯದರ್ಶಿ ಲೋಕನಾಥ್‌, ಖಜಾಂಚಿ ಅಕ್ಷಯ್‌, ಪಿಆರ್‌ಒ ಜಯಂತ್‌ ಮತ್ತು ಮಾಗ್ಡೆಬರ್ಗ್‌ನ ರವೀಂದ್ರ ಕುಲ್ಕರ್ಣಿಯವರು ಉಪಸ್ಥಿತರಿದ್ದರು.

ನೀನಮ್ಮ ಗೆಲುವಾಗಿ ಬಾ ಎಂದು ಗಜಮುಖನನ್ನು ಸ್ನಿಗ್ಮಾ, ಆರಭಿ, ಆದಿಶೇಷ ಪ್ರಾರ್ಥಿಸಿ ನೆರೆದ ಗಣ್ಯರಿಂದ ಜೋತಿ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರಕಿತು. ಕಾರ್ಯಕ್ರಮದ ಅಂಗವಾಗಿ ಕನ್ನಡ ಸಾಹಿತ್ಯ ಹೊರನಾಡಿನಲ್ಲಿದ್ದೂ ತಮ್ಮ ಬಲವನ್ನು ಉಳಿಸಿಕೊಂಡು ಕೊಡುಗೆ ನೀಡುತ್ತಿರುವ ಸಿರಿಗನ್ನಡ ಕೂಟ ಮ್ಯೂನಿಕ್‌, ನೆದರ್‌ಲ್ಯಾಂಡ್ಸ್‌ ಕನ್ನಡ ಕಲಾ ಸಮಿತಿ ರೈನ್‌ಮೈನ್‌ ಕನ್ನಡ ಸಂಘಗಳಿಗೆ ಪ್ರೊ| ಕೃಷ್ಣೇಗೌಡ ಹಾಗೂ ಮಹೇಶ್‌ ಜೋಶಿಯವರು ಮೆಚ್ಚುಗೆ ವ್ಯಕ್ತಪಡಿಸಿ ಸಮ್ಮಾನಿಸಿದರು. ಇದೇ ವಿಭಾಗದಡಿಯಲ್ಲಿ ರಾಘವೇಂದ್ರ ಪ್ರಸಾದ್‌, ಲಕ್ಷ್ಮಣ್‌, ರವೀಂದ್ರ ಕುಲ್ಕರ್ಣಿ, ಉಷಾರಾಣಿ ಕಾಂತಿಮಠ, ಸೌಮ್ಯ ಭಟ್‌ರವರನ್ನು ಸಮ್ಮಾನಿಸಲಾಯಿತು.

ಸಿರಿಗನ್ನಡ ಕೂಟ ಮ್ಯೂನಿಕ್‌ ತ್ತೈಮಾಸಿಕವಾಗಿ ನಡೆಸುವ “ಮನನ ಮಥನ ನಮನ’ದ “ಕನ್ನಡ ಕಹಳೆ ಸಾಹಿತ್ಯ ಸಂಜೆ’ ಕಾರ್ಯಕ್ರಮದಲ್ಲಿ ಕ್ರಿಯಾಶೀಲ ಹಾಗೂ ನಿರಂತರವಾಗಿ ಭಾಗವಹಿಸುವುದರ ಪ್ರೋತ್ಸಾಹವಾಗಿ ಶೋಭಾ ಚೌಹಾØಣ್‌ರವರನ್ನು ಮತ್ತು ವಿಶ್ವಮಟ್ಟದ “ಥಟ್‌ ಅಂತ ಹೇಳಿ’ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ ಮ್ಯೂನಿಕ್‌ ವೈಷ್ಣವಿ ಕುಲಕರ್ಣಿ, ಕಾರ್ತಿಕ್‌ ಮಂಜುನಾಥ್‌ರವರನ್ನು ವಿಶೇಷವಾಗಿ ಅಭಿನಂದಿಸಲಾಯಿತು.

Advertisement

ಕನ್ನಡ ಸಾಹಿತ್ಯ ವೇದಿಕೆಯಲ್ಲಿ ಭಾವಸಾಗರದಲ್ಲಿ ವಿಭಾ ಕಟ್ಟಿ ಹಾಗೂ ಸ್ವಾತಿ ಪ್ರಭು, ಕಾಣದ ಕಡಲಿಗೆ ಹಂಬಲಿಸಿದ ಮನವನ್ನು, ಮೋಹನ ಮುರಳಿಯಿಂದ ದೂರ ತೀರಕ್ಕೆ ಕರೆದೊಯ್ದರೆ, ಪೂಜಾ ಬಿ.ಎಲ್‌., ಸುಮ ಶ್ರೀನಿವಾಸ್‌, ಶೋಭಾ, ಸಿಂಚನಮೂರ್ತಿ ಇವರು ತಮ್ಮ ಸ್ವರಚಿತ ಕವನಗಳಿಂದ ನೆರೆದವರನ್ನು ಕಾವ್ಯದೆಲೆಯಲ್ಲಿ ತೇಲಿಸಿದರು.

ಇಷ್ಟೇ ಅಲ್ಲದೆ ಯುರೋಪಿನಲ್ಲಿ ಕನ್ನಡ ಸಾಹಿತ್ಯದ ಬೆಳವಣಿಗೆ ಮತ್ತು ಪ್ರಾಮುಖ್ಯ ಹಾಗೂ ಯುರೋಪಿನಲ್ಲಿ ಕನ್ನಡ ಭಾಷೆ ಅಭಿವೃದ್ಧಿ ಮತ್ತು ಕುಂದುಕೊರತೆಗಳಲ್ಲಿ ಜರ್ಮನಿ ಮತ್ತು ಕರ್ನಾಟಕ ಸರಕಾರದ ಸಹಕಾರದ ಅಗತ್ಯತೆ ಎಷ್ಟಿದೆ ಎಂಬುದರ ಬಗ್ಗೆ ಅರವಿಂದ್‌, ಅಶೋಕ್‌ ಕಟ್ಟಿಮನಿ, ರವೀಂದ್ರ ಕುಲ್ಕರ್ಣಿ, ಸುಮಂತ್‌ ಸತ್ಯ, ವಿಜಯ್‌ ಕುಮಾರ್‌ ಅವರು ತಮ್ಮ ತಮ್ಮ ವಿಚಾರಗಳನ್ನು ಮಂಡಿಸಿದರು.

ಹಿರಿಯರಿಗೆ ಸಾಹಿತ್ಯ ವೇದಿಕೆಯ ಅಂಗವಾಗಿ ಏರ್ಪಡಿಸಿದ್ದ ಸ್ವರಚಿತ ಕವನ ಸ್ಪರ್ಧೆ, ಮಕ್ಕಳಿಗಾಗಿ ಕವನ ವಾಚಿಸುವ ಸ್ಪರ್ಧೆ ಮತ್ತು ಬದುಕಿನ ಬುತ್ತಿ ಕಗ್ಗ ವಾಚನ ಸ್ಪರ್ಧೆಗಳಲ್ಲಿ ಭಾಗವಹಿಸಿದವರಿಗೆ ಮತ್ತು ವಿಜೇತರಿಗೆ ಪ್ರಶಸ್ತಿ ಪತ್ರಗಳನ್ನು ನೀಡಿ ಕನ್ನಡ ಸಾಹಿತ್ಯದ ಮೊಳಕೆಯನ್ನು ಮುಂದಿನ ತಲೆಮಾರಿಗೂ ಚಿಗುರಿಸುವ ಪ್ರಯತ್ನ ಶ್ಲಾಘನೀಯ.

ಇದೇ ಸಂದರ್ಭದಲ್ಲಿ ನಾವಿಕೋತ್ಸವದ ಸ್ಮರಣಿಕೆಯನ್ನು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಹಗಲಿರುಳು ಶ್ರಮಿಸಿದವರಿಗೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರಾದ ನಾಡೋಜ ಮಹೇಶ್‌ ಜೋಶಿಯವರು ಭಾಷೆ ಎನ್ನುವುದು ಬಹಳ ಶ್ರೇಷ್ಟವಾದ ಸೃಷ್ಟಿ ಹಲವು ಭಾಷೆಗಳು ಅಳಿವಿನ ಅಂಚಿನಲ್ಲಿದ್ದರೆ, ಹಲವು ಭಾಷೆಗಳಿಗೆ ಲಿಪಿಯೇ ಇಲ್ಲ. ತನ್ನದೇ ಲಿಪಿ ವ್ಯಾಕರಣ ಹಾಗೂ ಬರೆದಂತೆ ಉಚ್ಚರಿಸುವ ಪರಿಪೂರ್ಣ ಭಾಷೆಗಳಲ್ಲಿ ಕನ್ನಡವೂ ಒಂದು. ಎಂಟು ಜ್ಞಾನಪೀಠ ಪ್ರಶಸ್ತಿಗಳು ಪಡೆದ ಭಾಷೆ ನಮ್ಮ ಕನ್ನಡ ಎಂದು ನಮ್ಮ ಭಾಷೆಯ ಮಹತ್ವವನ್ನು ತಿಳಿಸಿದರು.

ಪ್ರೊ| ಕೃಷ್ಣೇಗೌಡರವರು ಅಧ್ಯಕ್ಷರ ನುಡಿಗಳಲ್ಲಿ ಮುಂದಿರುವವರ ಮನಸ್ಸನ್ನು ಹಿಡಿದಿಡುತ್ತಾ ಕೇಳಿದಷ್ಟು ಮತ್ತಷ್ಟು ಕೇಳುತ್ತಲೇ ಇರಬೇಕೆನ್ನುವಂತೆ ಮೈಯೆಲ್ಲ ಕವಿಯಾಗಿಸಿದರು. ಭಾಷೆಯಿಂದ ಭಾವವನ್ನು ಪ್ರಚೋದಿಸಬಹುದು ಮತ್ತು ಅಂದುಕೊಂಡದ್ದನ್ನೆಲ್ಲ ಭಾಷೆಯಲ್ಲಿ ಹೇಳಿ ಮುಗಿಸುವಷ್ಟು ಯಾವ ಭಾಷೆಯೂ ಸಮರ್ಥವಾಗಿಲ್ಲ. ಕವಿ ಹಾಗೂ ಕಲಾವಿದರು ತಾವು ಹೇಳಿದ್ದನ್ನು ಕೇಳಿದವರು ಹೌದು ಎನಿಸುವಷ್ಟು ಪ್ರಭಾವಿಸಬಹುದು. ಕನ್ನಡ ಪ್ರಪಂಚದ ಅದ್ಭುತ, ಅನನ್ಯವಾದ ಭಾಷೆ, ಜನಪದ ಸಾಹಿತ್ಯ ಎಷ್ಟು ಶ್ರೀಮಂತವಾಗಿದೆ ಎಂದರೆ ಪ್ರಪಂಚದ ಯಾವ ಭಾಷೆಯಲ್ಲೂ ಇಷ್ಟು ಶ್ರೀಮಂತ ಜನಪದ ಸಾಹಿತ್ಯವಿಲ್ಲ ಎಂದು ಕನ್ನಡದ ಶ್ರೀಮಂತಿಕೆಯ ಬಗೆಗೆ ಹೆಮ್ಮೆ ವ್ಯಕ್ತಪಡಿಸಿದರು.

ಒಂದು ಅರ್ಥಪೂರ್ಣ ಸಾಹಿತ್ಯ ವೇದಿಕೆ ಇದಾಗಿದ್ದು ಪಾಲ್ಗೊಂಡವರ ಮನದಲ್ಲಿ ಸಾರ್ಥಕ್ಯವನ್ನು ಮೂಡಿಸಿತು. ಕಮಲಾಕ್ಷರವರ ಅರವಿಂದ್‌, ಶೋಭಾ, ದಿವ್ಯ ಎಚ್‌.ಎನ್‌. ಮತ್ತು ಹಲವು ಸ್ವಯಂಸೇವಕರು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೈ ಜೋಡಿಸಿದರು. ಕಾರ್ಯಕ್ರಮದಲ್ಲಿ ಶೋಭಾ ಚೌಹಾØಣ್‌ರವರು ಎಲ್ಲರನ್ನು ಸ್ವಾಗತಿಸಿ, ನವ್ಯರವರು ಉತ್ತಮವಾಗಿ ನಿರೂಪಣೆ ಮಾಡಿ ಕಾರ್ಯಕ್ರಮದ ಗತಿಯನ್ನು ಮುಂದುವರೆಸಿದರು.

ಗಿರೀಶ್‌ ರಾವಂದೂರ್‌ರವರು ಎಲ್ಲರಿಗೂ ವಂದಿಸುವುದರೊಂದಿಗೆ ಕಾರ್ಲುಡೆ ನಲ್ಮೆಯ ಕನ್ನಡಿಗರು ವತಿಯಿಂದ ವಿಜಯ್‌ ಮಹದೇಶ್‌, ನಂದಿನಿಯವರಿಗೂ ಸ್ವೀಡನ್‌ ಕನ್ನಡಕೂಟರವರಿಗೂ ಗೌರವಪೂರ್ವಕ ವಂದನೆಗಳನ್ನು ತಿಳಿಸಿ ಕನ್ನಡ ಸಾಹಿತ್ಯ ವೇದಿಕೆಯ ಮುಖ್ಯ ಪ್ರಾಯೋಜಕರಾದ DVAG Deutsche Vermogensberalong ಸಂಸ್ಥೆಗೆ ವಿಶೇಷ ಕೃತಜ್ಞತೆಗಳನ್ನು ಸಲ್ಲಿಸಿದರು. ಸಿರಿಗನ್ನಡಕೂಟದ ಮುಖ್ಯ ಕಾರ್ಯಕಾರಿ ಸಮಿತಿಯ ಮಹೇಂದ್ರ ಭದ್ರಣ್ಣನವರ್‌ ನವರಿಗೂ ಸಾಹಿತ್ಯ ವೇದಿಕೆಗೆ ಅವರ ಕೊಡುಗೆಗಾಗಿ ಧನ್ಯವಾದ ಅರ್ಪಿಸಿದರು.


*ಶೋಭಾ ಚೌಹ್ಹಾಣ್‌, ಫ್ರಾಂಕ್‌ಫ‌ರ್ಟ್‌

Advertisement

Udayavani is now on Telegram. Click here to join our channel and stay updated with the latest news.

Next