Advertisement

‌Desi Swara: ಯಕ್ಷಗಾನ ಕಲೆಯನ್ನು ಉಳಿಸಿ, ಬೆಳೆಸಿ-ಮಿಚಿಗನ್‌ ನಲ್ಲಿ ಸತೀಶ್‌ ಪಟ್ಲ

12:06 PM Aug 31, 2024 | Team Udayavani |

ಮಿಚಿಗನ್: ನಮ್ಮ ಸಂಸ್ಕೃತಿ, ಕನ್ನಡ ಭಾಷೆ ಧಾರ್ಮಿಕ ಚಿಂತನೆಗಳ ಶ್ರೀಮಂತಿಕೆಯನ್ನು ಪ್ರಚುರಪಡಿಸುವುದಕ್ಕೆ ಯಕ್ಷಗಾನ ಉತ್ತಮವಾದ ಕಲಾಪ್ರಕಾರ. ರಾಮಾಯಣ, ಮಹಾಭಾರತ, ಭಾಗವತ ಇತ್ಯಾದಿ ಪುರಾಣಗಳ ಪರಿಚಯ ಮತ್ತು ಅಧ್ಯಯನವು ಮನೋರಂಜನಾತ್ಮಕವಾಗಿ ಸಾಮಾನ್ಯರಲ್ಲಿ ಸಾಮಾನ್ಯರಿಗೂ ಸಹ ಜ್ಞಾನಾರ್ಜಿಸುವಲ್ಲಿ ಯಕ್ಷಗಾನದ ಪಾತ್ರ ಬಹಳ ದೊಡ್ಡದು. ಯಕ್ಷಗಾನದ ನಿಯಮಿತ ಅಭ್ಯಾಸ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ವೃದ್ಧಿಗೂ ಸಹಕಾರಿಯಾಗುತ್ತದೆ.

Advertisement

ಸಾಮಾನ್ಯವಾಗಿ ಗಂಡು ಕಲೆ ಎಂದು ಪರಿಗಣಿಸಲ್ಪಟ್ಟ ಕರಾವಳಿಯ ಈ ಕಲೆ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ನೆಲೆಯಲ್ಲಿಯೂ ತನ್ನದೇ ರೀತಿಯಲ್ಲಿ ಸಾಮಾಜಿಕ ಸಂದೇಶವನ್ನು ನೀಡುತ್ತಾ ಬಂದಿದೆ. ಇಂತಹ ಸಮೃದ್ಧ ಕಲೆ ಯಕ್ಷಗಾನದ ಗಂಧವನ್ನು ಅಮೆರಿಕದ ಮಿಚಿಗನ್‌ವರೆಗೂ ವಿಸ್ತರಿಸಿ ಯಕ್ಷಗಾನವನ್ನು ಕಲಿಯೋಣ, ಕಲೆಯನ್ನು ಉಳಿಸೋಣ ಎಂಬ ಮಹಾತ್‌ ಚಿಂತನೆಯು “ಮಿಚಿಗನ್‌ ಯಕ್ಷಗಾನ ಸಂಘ’ ಎಂಬ ಕಲಾಸಕ್ತ ಸಂಸ್ಥೆಯ ಹುಟ್ಟಿಗೆ ಮುನ್ನುಡಿ ಬರೆಯಿತು.

ಇದರ ಉದ್ಘಾಟನೆಯನ್ನು “ಯಕ್ಷಧ್ರುವ ಪಟ್ಲ ಫೌಂಡೇಶನ್‌’ನ ಸ್ಥಾಪಕರಾದ ಪಟ್ಲ ಸತೀಶ್‌ ಶೆಟ್ಟಿಯವರು, ಉಡುಪಿ ಎಂಜಿಎಂ ಕಾಲೇಜಿನ ಮಾಜಿ ಪ್ರಾಂಶುಪಾಲರು, ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ, ಹವ್ಯಾಸಿ ಯಕ್ಷಕಲಾವಿದರಾದ ಎಂ.ಎಲ್‌.ಸಾಮಗ ಮತ್ತು ಯಕ್ಷಧ್ರುವ ಪಟ್ಲ ಫೌಂಡೇಶನ್‌ ತಂಡದ ಇನ್ನಿತರ ಕಲಾವಿದರು ಹಾಗೂ ಯಕ್ಷಹೆಜ್ಜೆಯ ಗುರುಗಳಾದ ಡಾ| ರಾಜೇಂದ್ರ ಕೆದ್ಲಾಯರೊಡಗೂಡಿ ಮಿಚಿಗನ್‌ನ ಸ್ಥಳೀಯ ಕಲಾಪೋಷಕರ ಸಮ್ಮುಖದಲ್ಲಿ ಜ್ಯೋತಿ ಬೆಳಗಿಸುವುದರ ಮೂಲಕ ಆ.10ರಂದು ನೆರವೇರಿಸಲಾಯಿತು.

ಸಾಮಗರು “ಪಟ್ಲ ಫೌಂಡೇಶನ್‌ ಟ್ರಸ್ಟ್‌ ಇದರ ಮುಖ್ಯ ಉದ್ದೇಶ, ಸಂಸ್ಥೆಯು ಈವರೆಗೆ ಮಾಡಿದ ಚಾರಿಟಿ ಕೆಲಸದ ಬಗ್ಗೆ ಸಭಾಸದರಿಸ್ಯಗೆ ತಿಳಿಸಿದರು. ಸತೀಶ್‌ ಪಟ್ಲರವರು ತಮ್ಮ ಸಂಸ್ಥೆಯ ಮುಂದಿನ ಚಟುವಟಿಕೆಗಳ ಬಗ್ಗೆ ತಿಳಿಸುವುದರ ಜತೆಗೆ ಮಿಚಿಗನ್‌ ಯಕ್ಷಗಾನ ಸಂಘವು ಮುಂದಿನ ದಿನಗಳಲ್ಲಿ ಯಕ್ಷ ಕಲಾವಿದರನ್ನು ಅಮೆರಿಕಕ್ಕೆ ಆಹ್ವಾನಿಸಿ ಇಲ್ಲಿ ಯಕ್ಷಗಾನವನ್ನು ಮಾಡಿಸುವದರ ಮೂಲಕ ಕಲೆಯನ್ನು ಉಳಿಸಿ ಬೆಳೆಸಲಿ, ಹಾಗೆಯೇ “ಪಟ್ಲ ಫೌಂಡೇಶನ್‌ ಟ್ರಸ್ಟ್‌’ಗೆ ಮುಂದೆಯೂ ಇದೇ ರೀತಿ ತಮ್ಮ ಸಹಕಾರವನ್ನು ಮುಂದುವರಿಸಲಿ ಎಂದು ಹಾರೈಸಿದರು.

Advertisement

ಡಾ|ರಾಜೇಂದ್ರ ಕೆದ್ಲಾಯರು ತಮ್ಮ ಶಿಷ್ಯರು ಆರಂಭಿಸಿದ ಮಿಚಿಗನ್‌ ಯಕ್ಷಗಾನ ಸಂಘಕ್ಕೆ ಶುಭ ಹಾರೈಸಿದರು. ಸಂಘದ ಅಧ್ಯಕ್ಷರಾದ ಪ್ರಶಾಂತ್‌ ಕುಮಾರ್‌ ಮಟ್ಟುರವರು ಮುಂದಿನ ದಿನಗಳಲ್ಲಿ ತೆಂಕುತಿಟ್ಟಿನ ಯಕ್ಷಗಾನ ಕಲಿಯುವಿಕೆಯ ಬಗ್ಗೆ “ಪಟ್ಲ ಫೌಂಡೇಶನ್‌’ನ ಸಹಕಾರವನ್ನು ಕೋರುತ್ತಾ, ಮಿಚಿಗನ್‌ನಲ್ಲಿ ವಾಸಿಸುತ್ತಿರುವ ಯಕ್ಷ ಕಲಾರಾಧಕರ ಬಳಿ ನಮ್ಮ ನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಮೇರುಕಲೆ ಯಕ್ಷಗಾನವನ್ನೂ ಬೆಳೆಸೋಣ, ಯಕ್ಷಗಾನ ಕಲಾವಿದರನ್ನು ನಮ್ಮಿಂದ ಸಾಧ್ಯವಾದ ರೀತಿಯಲ್ಲಿ ಪ್ರೋತ್ಸಾಹಿಸೋಣವೆಂದು ವಿನಂತಿಸಿಕೊಂಡರು.

ಈ ಸಂದರ್ಭದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್‌ ತಂಡದ ಕಲಾವಿದರಿಂದ ದೇವಿ ಮಹಾತ್ಮೆಯ ಉತ್ತರಾರ್ಧ “ಶಾಂಭವಿ ವಿಜಯ’ ಎಂಬ ಕಥಾನಕವನ್ನು ಆಡಿ ತೋರಿಸಲಾಯಿತು. ಹಿಮ್ಮೇಳದಲ್ಲಿ ಎಂದಿನಂತೆ ಪಟ್ಲರು ತಮ್ಮ ಗಾನಸುಧೆಯ ಮೂಲಕ ಭವ್ಯ ಸಭಾಂಗಣದಲ್ಲಿ ನೆರೆದ ಎಲ್ಲ ಯಕ್ಷಪ್ರಿಯರಿಗೆ ಕರ್ಣಾನಂದವನ್ನು ಕೊಟ್ಟರು. ಅವರಿಗೆ ಮದ್ದಳೆ ಮಾಂತ್ರಿಕ, ಯಕ್ಷಗುರು ಪದ್ಮನಾಭ ಉಪಾಧ್ಯ ಹಾಗೂ ಖ್ಯಾತ ಯುವ ಚಂಡೆ ವಾದಕ ಚೈತನ್ಯ ಪದ್ಯಾಣರವರು ಚೆಂಡೆಯ ಅಬ್ಬರದಲ್ಲಿ ಪಟ್ಲರ ಮಾಧುರ್ಯದ ಧ್ವನಿಗೆ ಮೆರಗು ತಂದರು.

ಮುಮ್ಮೇಳದಲ್ಲಿ ಚಂಡ ಮುಂಡರಾಗಿ ಚಂದ್ರಶೇಖರ ಧರ್ಮಸ್ಥಳ ಮತ್ತು ಮಹೇಶ ಮಣಿಯಾಣಿಯವರು ಬಹಳ ಅದ್ಭುತವಾದ ನಾಟ್ಯ ವೈವಿಧ್ಯಗಳಿಂದ ಜನರ ಮನಸ್ಸನ್ನು ಸೂರೆಗೊಂಡರು. ಶಾಂಭವಿಯಾಗಿ ಪ್ರಸಿದ್ಧ ಸ್ತ್ರೀ ವೇಷಧಾರಿ ಪ್ರಶಾಂತ ಶೆಟ್ಟಿ ನೆಲ್ಯಾಡಿ ಸ್ತ್ರೀಯರನ್ನೇ ನಾಚಿಸುವಂತೆ ಒನಪು ವಯ್ನಾರಗಳಿಂದ ಮಿಂಚಿದರೆ, ದೇವೇಂದ್ರನಾಗಿ ಸಾಮಗರು ವಿಜೃಂಭಿಸಿದರು. ರಕ್ತಬೀಜನಾಗಿ ಮೋಹನ್‌ ಬೆಳ್ಳಿಪಾಡಿಯವರು ಹಾಗೂ ಪ್ರಸಿದ್ಧ ಬಣ್ಣದ ವೇಷಧಾರಿ ಹರಿನಾರಾಯಣ ಭಟ್‌ ಎಡನೀರು ಶುಂಭನ ಪಾತ್ರದಲ್ಲಿ ಅಬ್ಬರಿಸಿ ಪ್ರಸಂಗಕ್ಕೆ ಜೀವತುಂಬಿದರು.

ಸ್ಥಳೀಯ ಹವ್ಯಾಸಿ ಕಲಾವಿದರಾದ ಸಂಘದ ಉಪಾಧ್ಯಕ್ಷರಾದ ಪುರುಷೋತ್ತಮ ಮರಕಡರವರು ಸುಗ್ರೀವನ ಪಾತ್ರದಲ್ಲಿ, ರಕ್ತೇಶ್ವರಿಯಾಗಿ ಸಂಘದ ಅಧ್ಯಕ್ಷರಾದ ಪ್ರಶಾಂತ್‌ ಕುಮಾರ್‌ರವರು ಮತ್ತು ಕಾಳಿಯ ಪಾತ್ರದಲ್ಲಿ ಪ್ರಹ್ಲಾದ್‌ ರಾವ್‌ ಅತ್ಯುತ್ತಮವಾಗಿ ಅಭಿನಯಿಸಿ ಕೊಟ್ಟ ಪಾತ್ರದ ಘನತೆ ಕಾಪಾಡಿ ಯಕ್ಷಪ್ರಿಯರ ಚಪ್ಪಾಳೆಗಿಟ್ಟಿಸಿಗೊಂಡರು. ಸ್ಥಳೀಯ ಬಾಲ ಪ್ರತಿಭೆಗಳಾದ ಅಲ್ಪನ ರಾಜಗೋಪಾಲ್‌, ನಿಧಿ ಅನಿಲ್‌ ಭಟ್‌, ಸ್ಮತಿ ಮಹೇಶ್‌, ರಿತಿಕಾ ರಾವ್‌, ಶರ್ವಾಣಿ ಬಿಕ್ಕುಮಲ, ಶ್ರಿಯಾ ರೋಹಿತ್‌ ಹಾಗೂ ಸನ್ನಿಧಿ ರಾವ್‌ ಸಪ್ತಮಾತೃಕೆಯರಾಗಿ ಮತ್ತು ರಕ್ತಬೀಜಾದಿಗಳಾಗಿ ಇಶಾನ್‌ ಹೆಬ್ಟಾರ್‌, ಸಂವಿತ್‌ ಮಹೇಶ್‌, ಅಕ್ಷಜ್‌ ನಿಖೀಲ್‌ ಜೋಶಿ ಹಾಗೂ ಅಭಿನವ್‌ ರಾವ್‌ ಉತ್ತಮವಾಗಿ ಅಭಿನಯಿಸಿದರು. ಈ ಯಕ್ಷ ರಸದೌತಣದ ಸೊಬಗನ್ನು ಪ್ರೇಕ್ಷಕರು ಸಂಭ್ರಮದಿಂದ ಕಣ್ತುಂಬಿಕೊಂಡು ಕಲಾದೇವಿಯ ಮೆರುಗನ್ನು ಇಳಿಸಂಜೆಯ ಹೊಂಬೆಳಕಲ್ಲಿ ವೀಕ್ಷಿಸಿ ಪುನೀತರಾದರು.

ಸಭಾ ಕಾರ್ಯಕ್ರಮವು ವಾಣಿ ರಾವ್‌ ಅವರ ಪ್ರಾರ್ಥನೆಯ ಮೂಲಕ ಆರಂಭಗೊಂಡಿತು. ಸಂಘದ ಕಾರ್ಯದರ್ಶಿಯಾದ ಹರೀಶ್‌ ರಾವ್‌ ಅವರು ಸ್ವಾಗತ ಭಾಷಣ ಮಾಡಿದರು. ಕೋಶಾಧಿಕಾರಿಗಳಾದ ವೆಂಕಟೇಶ್‌ ಪೊಳಲಿಯವರು ಪ್ರಸಂಗದ ಕಥಾ ಸಾರಾಂಶವನ್ನು ಸಭಾಸದರಿಗೆ ವಾಚಿಸಿದರು.

ದೇವಿಯ ಉಯ್ಯಾಲೆಯನ್ನು ಪಲ್ಲವಿ ರಾವ್‌, ದಿವ್ಯ ಪೊಳಲಿ, ಮೇಧಿನಿ ಕಟ್ಟಿ, ಸೌಮ್ಯ ರಾವ್‌ ಮತ್ತು ರಂಜನಾ ರಾವ್‌ ರವರು ಅತ್ಯುತ್ತಮವಾಗಿ ಅಲಂಕರಿಸಿ ಎಲ್ಲರ ಹೊಗಳಿಕೆಗೆ ಪಾತ್ರರಾದರು. ಫೋಟೋಗ್ರಾಫರ್‌ ಆಗಿ ಸಂದೀಪ್‌ ನಾಯಕ್‌ ರವರು, ಆಡಿಯೋ ವಿಭಾಗದಲ್ಲಿ ಕಿಶೋರ್‌ರವರು ಸಹಕಾರವಿತ್ತರು. ಪಂಪ ಕನ್ನಡ ಕೂಟ, ಲಾನ್ಸಿಂಗ್‌ ಕನ್ನಡ ಕೂಟ, ಮಿಚಿಗನ್‌ ತುಳು ಬಾಂಧವರು ಹಾಗೂ ಹಲವಾರು ಸಂಸ್ಥೆಯ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಯಕ್ಷಗಾನದ ಮೆರಗನ್ನು ಹೆಚ್ಚಿಸಿದರು. ಸಹ ಕೋಶಾಧಿಕಾರಿಗಳಾದ ಅನಿಲ್‌ ಭಟ್‌ ಮತ್ತು ಜತೆ ಕಾರ್ಯದರ್ಶಿಗಳಾದ ಸಂತೋಷ್‌ ಗೋಳಿಯವರು ಸಹಾಯ ಮಾಡಿದ ಎಲ್ಲ ದಾನಿಗಳನ್ನು ನೆನೆಯುತ್ತ ಧನ್ಯವಾದ ಸಮರ್ಪಣೆ ಮಾಡಿದರು.

ವರದಿ: ಪ್ರಶಾಂತ ಕುಮಾರ್‌, ಮಿಚಿಗನ್‌

Advertisement

Udayavani is now on Telegram. Click here to join our channel and stay updated with the latest news.