ಬಹ್ರೈನ್: ಭಾರತೀಯರು ಪ್ರಪಂಚದ ಯಾವುದೇ ಮೂಲೆಯಲ್ಲಿರಲಿ ದೇಶದ ಸ್ವಾತಂತ್ರ್ಯೋ ತ್ಸವದಂದು ಎಲ್ಲರೂ ಒಂದಾಗಿ ಸೇರಿ ಧ್ವಜಾರೋಹಣ ಮಾಡಿ ಸಂಭ್ರಮಿಸಿ ದೇಶ ಭಕ್ತಿಯನ್ನು ಮೆರೆಯುತ್ತಾರೆ, ದೇಶದ ಅಸ್ಮಿತೆಯನ್ನು ಎತ್ತಿ ಹಿಡಿಯುತ್ತಾರೆ. ಬಹ್ರೈನ್ ದ್ವೀಪದಲ್ಲಿರುವ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕನ್ನಡ ಸಂಘವು ಅಸ್ತಿತ್ವಕ್ಕೆ ಬಂದದಂದಿನಿಂದಲೂ ಸ್ವಾತಂತ್ರೊéàತ್ಸವವನ್ನು ಸಂಭ್ರಮದಿಂದ ಆಚರಿಸಿಕೊಂಡು ಬರುತ್ತಿದೆ. ಈ ವರ್ಷವೂ ಆ.15ರಂದು ಬೆಳಗ್ಗೆ ಸಂಘದ ಸದಸ್ಯರು ಹಾಗೂ ಪರಿವಾರದವರು ನೂರಾರು ಸಂಖ್ಯೆಯಲ್ಲಿ ನೆರೆದು ಧ್ವಜಾರೋಹಣ ಮಾಡಿ ಒಬ್ಬರಿಗೊಬ್ಬರು ಶುಭ ಹಾರೈಸಿ ದೇಶಪ್ರೇಮವನ್ನು ಮೆರೆದರು.
ಕಾರ್ಯಕ್ರಮದ ಮೊದಲಿಗೆ ಸಂಘದ ಕ್ರೀಡಾಕಾರ್ಯದರ್ಶಿ ಜಾನ್ ದೀಪಕ್ ಅವರು ಎಲ್ಲರನ್ನೂ ಸ್ವಾಗತಿಸಿ ಸ್ವಾತಂತ್ರೊéàತ್ಸವದ ಶುಭ ಹಾರೈಸಿದರು. ಅಧ್ಯಕ್ಷರಾದ ಅಮರನಾಥ್ ರೈ ಯವರು ಭಾರತದ ಧ್ವಜಾರೋಹಣ ಮಾಡಿದರು. ಉಪಾಧ್ಯಕ್ಷರಾದ ಮಹೇಶ್ ಅವರು ಬಹ್ರೈನ್ ಧ್ವಜವನ್ನು ಆರೋಹಣ ಮಾಡಿದರು. ಅನಂತರ ಎಲ್ಲರೂ ಒಂದಾಗಿ ರಾಷ್ಟ್ರಗೀತೆಯನ್ನು ಹಾಡಿದರು.
ಈ ಸಂದರ್ಭದಲ್ಲಿ ನೆರೆದವರನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷರಾದ ಅಮರನಾಥ್ ರೈ ಯವರು ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭ ಹಾರೈಸಿ “ನಮ್ಮ ಹಿರಿಯರು ತ್ಯಾಗ, ಬಲಿದಾನದಿಂದ ಇಂದು ನಾವು ಅನುಭವಿಸುವ ಈ ಸ್ವಾತಂತ್ರ್ಯವನ್ನು ತಂದು ಕೊಟ್ಟಿದ್ದಾರೆ.
ಅದನ್ನು ಜತನದಿಂದ ಕಾಪಾಡಿಕೊಂಡು ಬರುತ್ತಾ ನಾವೆಲ್ಲರೂ ದೇಶದ ಅಭಿವೃದ್ಧಿಗೆ ಒಗ್ಗಟ್ಟಿನಿಂದ ಕೆಲಸ ಮಾಡಬೇಕು’ ಎಂದರು. ಕಿರಣ್ ಉಪಾಧ್ಯ, ರಮೇಶ್ ರಾಮಚಂದ್ರ, ನಾಗೈಶ್ ಶೆಟ್ಟಿ, ಪೂರ್ಣಿಮಾ ಜಗದೀಶ್ ಮುಂತಾದವರು ಮಾತನಾಡಿ ಸ್ವಾತಂತ್ರ್ಯದ ಮಹತ್ವವನ್ನು ನೆರೆದವರಿಗೆ ವಿವರಿಸಿದರು. ಕಾರ್ಯಕ್ರಮದ ಕೊನೆಗೆ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು. ಜಾನ್ ದೀಪಕ್ ಅವರ ಧನ್ಯವಾದ ಸಮರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
ವರದಿ: ಕಮಲಾಕ್ಷ ಅಮೀನ್