Advertisement

Desi Swara: ಬಾಪುವಿನೊಂದಿಗೆ ಮಕ್ಕಳ ಕಲರವ

02:45 PM Sep 30, 2023 | Team Udayavani |

ಅಮೆರಿಕದ ಕ್ಲೀವ್‌ಲ್ಯಾಂಡ್‌ ನಗರದಲ್ಲಿರುವ ಬೊಟಾನಿಕಲ್‌ ತೋಟದ ಉಸ್ತುವಾರಿಯಲ್ಲಿ ಅನೇಕ ಸುಂದರವಾದ ಪಾರ್ಕ್‌ಗಳಿವೆ. ವಿವಿಧ ದೇಶಗಳನ್ನು ಪ್ರತಿನಿಧಿಸುವ ಸಾಂಸ್ಕೃತಿಕ ಉದ್ಯಾನವನಗಳಿವೆ. ಹಾಗೆಯೇ 2005ರಲ್ಲಿ ಭಾರತದ ನೆನೆಪಿಗೆ ಇಂಡಿಯಾ ಕಲ್ಚರಲ್‌ ಗಾರ್ಡ್‌ನ್‌ನನ್ನು ನಗರಕ್ಕೆ ಅರ್ಪಿಸಲಾಯಿತು.

Advertisement

ಇದರ ವಿಶೇಷತೆ ಏನೆಂದರೆ ಇಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಎತ್ತರದ ಗ್ರಾನೈಟ್‌ ಕಲ್ಲಿನಲ್ಲಿ ನಿಂತಿರುವ ಮೂರ್ತಿಯನ್ನು ಗ್ರಾನೈಟ್‌ ಕಲ್ಲಿನ ಪೀಠದ ಮೇಲೆ ಸ್ಥಾಪಿಸಲಾಗಿದೆ. ಪಾರ್ಕ್‌ನ ಪ್ರವೇಶದ್ವಾರದಲ್ಲಿ ಭಾರತದ ಹಲವಾರು ಭಾಷೆಯಲ್ಲಿ ಸುಸ್ವಾಗತ ಎಂದು ಕೆತ್ತಿರುವ ಕಲ್ಲು ಹಾಸುಗಳನ್ನು ಜೋಡಿಸಿದ್ದಾರೆ. ಅದರಲ್ಲಿ ಕನ್ನಡ ಭಾಷೆಯಲ್ಲೂ ಸುಸ್ವಾಗತ ಎಂದು ಬರೆದಿರುವುದು ನೋಡಿದಾಗ ಕನ್ನಡಿಗರಾದ ನಮಗೆ ಅತೀವ ಆನಂದವಾಗಿತ್ತು. ಪೀಠದ ಸುತ್ತಲೂ ಜವಾಹರಲಾಲ್‌ ನೆಹರು, ಸರ್ವಪಲ್ಲಿ ರಾಧಾಕೃಷ್ಣನ್‌, ಸ್ವಾಮಿ ವಿವೇಕಾನಂದ, ಸರ್‌. ಎಮ್‌. ವಿಶ್ವೇಶ್ವರಯ್ಯನವರ ದೇಶಭಕ್ತಿ ಸೂಕ್ತಿಗಳನ್ನು ಕೆತ್ತಲಾಗಿದೆ. ಪ್ರತಿಮೆಯ ಮುಂಭಾಗದಲ್ಲಿರುವ ದೊಡ್ಡ ವೃತ್ತಾಕಾರದ ಹುಲ್ಲುಹಾಸು ವೇದಿಕೆಯಂತೆ ಕಂಗೊಳಿಸುತ್ತದೆ. ಇದು ಅನೇಕ ಕಾರ್ಯಕ್ರಮಗಳಿಗೆ ವೇದಿಕೆಯಾಗಿದೆ.

ಇತ್ತೀಚೆಗೆ ಅಸೋಸಿಯೇಶನ್‌ ಆಫ್ ಏಷ್ಯನ್‌ ಇಂಡಿಯನ್‌ ವಿಮೆನ್‌ ಇನ್‌ ಓಹಾಯೊ ಸಂಸ್ಥೆಯವರಿಂದ ಈ ಪಾರ್ಕ್‌ನಲ್ಲಿ ಕ್ಲೀವ್‌ಲ್ಯಾಂಡ್‌ನ‌ಲ್ಲಿರುವ ಭಾರತೀಯ ಮೂಲದ ಮಕ್ಕಳಿಗಾಗಿ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂಸ್ಥೆಯು ಅನಿವಾಸಿ ಭಾರತೀಯರ ಯೋಗಕ್ಷೇಮಕ್ಕಾಗಿ ಅನಿವಾಸಿ ಭಾರತೀಯ ಮಹಿಳೆಯರಿಂದ 1988ರಲ್ಲಿ ಸ್ಥಾಪಿತವಾಗಿ ಎಲೆಮರೆಕಾಯಿಯಂತೆ ಕಾರ್ಯನಿರ್ವಹಿಸುತ್ತಿದೆ.ಇಲ್ಲಿರುವ ಇಂಡಿಯಾ ಕಲ್ಚರಲ್‌ ಪಾರ್ಕ್‌ನಲ್ಲಿ ಮಕ್ಕಳೊಂದಿಗೆ ತಾಯಿಯಂದಿರು ನೆರೆದಿದ್ದರು. ಹಸುರು ಹುಲ್ಲು ಹಾಸಿನ ಮೇಲೆ ತಂಪಾದ ಮರದ ನೆರಳಿನಲ್ಲಿ ಸೂರ್ಯನ ಎಳೆ ಕಿರಣಗಳ ಬೆಚ್ಚನೆ ಕಾವಿನಲ್ಲಿ ಮಹಾತ್ಮ ಗಾಂಧೀಜಿಯವರ ಪ್ರತಿಮೆಯ ಮುಂದೆ ವೇದಿಕೆ ಸಿದ್ಧವಾಗಿತ್ತು.

ಹಲವಾರು ಭಾರತೀಯ ಭಾಷೆಗಳಲ್ಲಿ ಕಾರ್ಯಕ್ರಮವಿದ್ದುದರಿಂದ ಎಲ್ಲರಿಗೂ ತಿಳಿಯುವ ಇಂಗ್ಲಿಷ್‌ ಭಾಷೆಯಲ್ಲಿ ಕಾರ್ಯಕ್ರಮವನ್ನು ನಿರೂಪಕಿ ಮಹಿಮಾ ರಾವ್‌ರವರು ಬಹಳ ಸೊಗಸಾಗಿ ನಡೆಸಿಕೊಟ್ಟರು. ಸಂಸ್ಥೆಯ ಅಧ್ಯಕ್ಷೆ ವಿನೀತ ಜಯರಾಮ್‌ರವರ ಉಪಸ್ಥಿತಿಯಲ್ಲಿ ಮೊದಲಿಗೆ ಅಮೆರಿಕದ ರಾಷ್ಟ್ರಗೀತೆಯನ್ನು ಎಲ್ಲರೂ ಒಕ್ಕೊರಳಿನಿಂದ ಹಾಡಿದರು. ಅನಂತರ ಭಾರತೀಯ ರಾಷ್ಟ್ರಗೀತೆ ಜನಗಣಮನವನ್ನು ಸಾಮೂಹಿಕವಾಗಿ ಹಾಡಿ “ಭಾರತ್‌ ಮಾತಾ ಕೀ ಜೈ’ ಎಂಬ ಘೋಷಣೆಯೊಂದಿಗೆ ಹರ್ಷ ವ್ಯಕ್ತ ಪಡಿಸಿದ್ದರು.

ಇಲ್ಲಿನ ಬ್ರುನ್ಸಿಕ್‌ ಉಪನಗರದ ಮೇಯರ್‌ ರಾನ್‌ ಫಾಲ್ಕನಿಯವರು ಆಗಮಿಸಿ ವಲಸಿಗರ ಕುಟುಂಬಕ್ಕೆ ಹಾಗೂ ಅವರ ಸಶಕ್ತೀಕರಣಕ್ಕೆ ಪೂರ್ಣ ಬೆಂಬಲ ನೀಡುವುದಾಗಿ ಭರವಸೆ ಮಾತುಗಳನ್ನಾಡಿದರು. ಮುಖ್ಯ ಅತಿಥಿಯಾಗಿ ಬಂದಿದ್ದ ಭಾರತ ಮೂಲದವರಾದ ಭರತ್‌ ಕುಮಾರ್‌ ಇಂಡಿಯಾ ಫೆಸ್ಟ್‌ನ ಸಂಸ್ಥಾಪಕರು ಮತ್ತು ಮಂಡಳಿಯ ಸದಸ್ಯರು. ಹದಿನಾಲ್ಕು ವರುಷಗಳಿಂದ ಸತತವಾಗಿ ಭಾರತೋತ್ಸವವನ್ನು ಯಶಸ್ವಿಯಾಗಿ ನಡೆಸುತ್ತಿರುವ ಇವರ ಸಂಸ್ಥೆ ಮುಂದಿನ ಪೀಳಿಗೆಗೆ ಸಂಸ್ಕೃತಿಯನ್ನು ಮುಂದುವರಿಸಲು ವಿವಿಧ ಸಮುದಾಯಗಳೊಡನೆ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆಯಲ್ಲದೆ ಅನೇಕ ಭಾರತೀಯ ಸಾಂಸ್ಕೃತಿಕ ಸಂಸ್ಥೆಗಳಿಗೆ ಬೆಂಬಲವಾಗಿ ನಿಂತು ಶ್ರಮಿಸುತ್ತಿದೆ.

Advertisement

ವಿವಿಧ ಮಾತೃ ಭಾಷೆಯ ಪುಟ್ಟ ಪುಟ್ಟ ಮಕ್ಕಳು ಅಂದವಾಗಿ ಅಲಂಕೃತರಾಗಿ ವಿವಿಧ ಬಗೆಯ ಪ್ರದರ್ಶನ ನೀಡಿದರು. ಕಸ್ತೂರಿ ಕನ್ನಡ ಸಂಘದ ಮಕ್ಕಳು ವಂದೇ ಮಾತರಂ ಗೀತೆ ಹಾಡಿದರು. ಭಾರತದ ಸಂಸ್ಕೃತಿ, ಉಡುಗೆ, ತೊಡುಗೆ, ಆಹಾರ, ಶಿಲ್ಪಕಲೆ, ಚಿತ್ರಕಲೆ, ನದಿಗಳು ಎಲ್ಲದರ ಪರಿಚಯವನ್ನು ಕಣ್ಣಿಗೆ ಕಟ್ಟುವಂತೆ ಮುದ್ದು ಮುದ್ದಾಗಿ ಚಿತ್ರಿಸಿದರು. ಪ್ರಸಿದ್ಧ ಗೋವಿನ ಗೀತೆಯ ರೂಪಕವನ್ನು ಪ್ರದರ್ಶಿಸಿದ ಪುಟಾಣಿಗಳು ಎಲ್ಲರ ಪ್ರಶಂಸೆಗೆ ಪಾತ್ರರಾದರು. ನುರಿತ ವಿದ್ವಾಂಸರಿಂದ ಸಂಗೀತ, ನೃತ್ಯ ಹಾಗೂ ವಿವಿಧ ಕಲೆಗಳ ತರಬೇತಿ ಪಡೆದ ಮಕ್ಕಳು ಅತ್ಯುತ್ತಮವಾಗಿ ಪ್ರದರ್ಶನ ನೀಡಿದರು. ಆರು ಜನರ ಪುಟಾಣಿಗಳ ಗುಂಪು ಭರತನಾಟ್ಯಕ್ಕೆ ಹೆಜ್ಜೆ ಹಾಕಿದರೆ, ಕೆಲವರು ಚಿತ್ರಗೀತೆಗಳನ್ನು ಹಾಡಿ ರಂಜಿಸಿದರು. ಸಂಗೀತ ವಾದ್ಯಗಳನ್ನು ಕಲಿತಿದ್ದ ಮಕ್ಕಳು ಗಿಟಾರ್‌, ವಯೋಲಿನ್‌, ಕೀಬೋರ್ಡ್‌ನಂತಹ ವಾದ್ಯಗಳನ್ನು ನುಡಿಸಿ ಸತತ ಎರಡು ಗಂಟೆಗಳ ಕಾಲ ನೆರೆದಿದ್ದವರನ್ನು ರಂಜಿಸಿದರು. ವಿನೀತ ಜಯರಾಮ್‌ ಮಕ್ಕಳಿಗೆ ಬಹುಮಾನ ವಿತರಿಸಿದರು.

*ವರದಿ: ಸಾವಿತ್ರಿ ರಾವ್‌, ಕ್ಲೀವ್‌ಲ್ಯಾಂಡ್‌

Advertisement

Udayavani is now on Telegram. Click here to join our channel and stay updated with the latest news.

Next