Advertisement

ರಾಗಿಮುದ್ದೆ ಮೇಲೊಂದು ಚಿತ್ರ!

08:26 AM Nov 02, 2019 | mahesh |

ಮೂರೊತ್ತು ತಿಂದು ರಾಗಿ, ಆರೋಗ್ಯವಂತರಾಗಿ…
-ಸಾಮಾನ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ರಾಗಿಯ ಬಗ್ಗೆ ಜನರ ಬಾಯಲ್ಲಿ ಹರಿದಾಡುವ ಅನೇಕ ಜಾನಪದ ಹಾಡುಗಳು, ಕಥೆ-ಉಪಕಥೆಗಳನ್ನು ಆಗಾಗ್ಗೆ ಕೇಳಿರುತ್ತೀರಿ. ಆದರೆ ಈಗ ಇದೇ ರಾಗಿಯ ವಿಷಯವನ್ನೇ ಇಟ್ಟುಕೊಂಡು ಕನ್ನಡದಲ್ಲಿ ಚಿತ್ರವೊಂದು ತಯಾರಾಗುತ್ತಿದೆ. ಅಂದಹಾಗೆ, ಆ ಚಿತ್ರದ ಹೆಸರು “ಆನೆಬಲ’. ಕರ್ನಾಟಕದಲ್ಲಿ ರಾಗಿಯನ್ನೆ ಪ್ರಧಾನ ಆಹಾರವಾಗಿ ಬಳಸುವ ಮಂಡ್ಯವನ್ನು ಹಿನ್ನೆಲೆಯಾಗಿಟ್ಟುಕೊಂಡು, ಬಹುತೇಕ ಮಂಡ್ಯ ಮೂಲದವರೇ ಸೇರಿಕೊಂಡು ಈ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ಸದ್ಯ ತನ್ನ ಪೋಸ್ಟ್‌ ಪ್ರೊಡಕ್ಷನ್‌ ಕೆಲಸದಲ್ಲಿರುವ “ಆನೆಬಲ’ ಚಿತ್ರದ ಆಡಿಯೋ ಇತ್ತೀಚೆಗೆ ಬಿಡುಗಡೆಯಾಗಿದೆ.

Advertisement

“ಜನತಾ ಟಾಕೀಸ್‌’ ಬ್ಯಾನರ್‌ನಲ್ಲಿ ನಿರ್ಮಾಣ­ವಾಗಿರುವ ಈ ಚಿತ್ರಕ್ಕೆ ಎ.ವಿ ವೇಣುಗೋಪಾಲ್‌ ಅಡಕಿಮಾರನಹಳ್ಳಿ, ಎಂ.ಎಸ್‌ ರಘುನಂದನ್‌ ನಿರ್ಮಾಪಕರಾಗಿ ಬಂಡವಾಳ ಹೂಡಿದ್ದಾರೆ. ಸುಮಾರು ಹದಿನೈದು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಹಲವು ಚಿತ್ರಗಳಿಗೆ ಸಹಾಯಕ ಮತ್ತು ಸಹ ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವವಿರುವ ಸೂನಗಹಳ್ಳಿ ರಾಜು ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.

ಆಡಿಯೋ ಬಿಡುಗಡೆಯ ವೇಳೆ “ಆನೆಬಲ’ದ ಬಗ್ಗೆ ಮಾತಿಗಿಳಿದ ಚಿತ್ರತಂಡ, “ಮಂಡ್ಯದ ಗ್ರಾಮೀಣ ಭಾಗದಲ್ಲಿ ನಡೆಯುವ ವಿಭಿನ್ನ ಕಥೆ ಈ ಚಿತ್ರದಲ್ಲಿದೆ. ರಾಗಿ ಹೇಗೆ ಜೀವನದ ಭಾಗವಾಗಿದೆ ಅದರ ಮಹತ್ವವೇನು ಅನ್ನೋದು ಚಿತ್ರದ ಎಳೆ. ಇಡೀ ಚಿತ್ರದಲ್ಲಿ ರಾಗಿಮುದ್ದೆ ಕೂಡ ಒಂದು ಪಾತ್ರವಾಗಿದ್ದು, ಕಥೆ ಮತ್ತಿ ಇತರ ಪಾತ್ರಗಳು ಅದರ ಸುತ್ತ ನಡೆಯುತ್ತದೆ. ಇದರ ಜೊತೆಗೆ ಗ್ರಾಮೀಣ ಸಂಸ್ಕೃತಿ, ಸೋಬಾನ ಪದ, ಜನ ಜೀವನವನ್ನು ಬೇರೆ ಆಯಾಮದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಸುಮಾರು 120ಕ್ಕೂ ಹೆಚ್ಚು ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ’ ಎಂದು ಚಿತ್ರದ ವಿಶೇಷತೆಗಳನ್ನು ತೆರೆದಿಟ್ಟಿತು.

ಇನ್ನು “ಆನೆಬಲ’ ಚಿತ್ರದ ಹಾಡುಗಳಿಗೆ ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜಿಸಿದ್ದಾರೆ. ಇತ್ತೀಚೆಗಷ್ಟೆ ಬಿಡುಗಡೆಯಾಗಿರುವ ಚಿತ್ರದ “ಮುದ್ದೆ ಮುದ್ದೆ ರಾಗಿ ಮುದ್ದೆ ನಿದ್ದೆ ನಿದ್ದೆ ತಂಪು ನಿದ್ದೆ… ಮೂರೊತ್ತು ತಿಂದು ರಾಗಿ, ಆರೋಗ್ಯವಂತರಾಗಿ’ ಎಂಬ ಹಾಡು ಸಾಕಷ್ಟು ವೈರಲ್‌ ಆಗುತ್ತಿದ್ದು, ಚಿತ್ರತಂಡದ ವಿಶ್ವಾಸವನ್ನು ಹೆಚ್ಚಿಸಿದೆಯಂತೆ.

ಈ ಹಿಂದೆ “ರಂಗಾದ ಹುಡುಗರು’ ಚಿತ್ರದ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದ ಕನ್ನಡದ ಹಿರಿಯ ಕಲಾ ನಿರ್ದೇಶಕ ಈಶ್ವರಿ ಕುಮಾರ್‌ ಪುತ್ರ ಸಾಗರ್‌ “ಆನೆಬಲ’ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕ ನಟನಾಗಿ ಬೆಳ್ಳಿ ತೆರೆಗೆ ಪರಿಚಯವಾಗುತ್ತಿದ್ದಾರೆ. ಚಿತ್ರದಲ್ಲಿ ನವನಟಿ ರಕ್ಷಿತಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಮಲ್ಲರಾಜು, ಚಿರಂಜೀವಿ, ಹರೀಶ್‌ ಶೆಟ್ಟಿ, ಮುತ್ತುರಾಜು, ಕೀಲಾರ ಉದಯ್‌, ಶಂಭೂಗೌಡ, ಸಿದ್ದು, ರೂಪಾ, ಸುಮಾ, ಕೆಂಚೇಗೌಡ, ಲಂಕೇಶ್‌ ಮೊದಲಾದ ಕಲಾವಿದರು ಚಿತ್ರದ ಇತರ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. “ಚಿತ್ರದ ಬಹುತೇ ಕಲಾವಿದರು ಮಂಡ್ಯ ಮೂಲದವರಾಗಿದ್ದು, ಮುಕ್ಕಾಲು ಭಾಗ ಕಲಾವಿದರು ಇದೇ ಮೊದಲ ಬಾರಿಗೆ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರದ ಕಥೆ ಮಂಡ್ಯ ನೇಟಿವಿಟಿಯಲ್ಲಿ ನಡೆಯುವುದರಿಂದ, ಪಾತ್ರಗಳು ಆದಷ್ಟು ನೈಜವಾಗಿ ಮೂಡಿಬರಬೇಕೆಂಬ ಕಾರಣಕ್ಕೆ ಮಂಡ್ಯದ ಕಲಾವಿದರನ್ನೆ ಬಹುತೇಕ ಎಲ್ಲ ಪಾತ್ರಗಳಿಗೂ ಬಳಸಿಕೊಳ್ಳಲಾಗಿದೆ’ ಎಂದು ಸಮರ್ಥಿಸಿಕೊಳ್ಳುತ್ತಾರೆ ನಿರ್ದೇಶಕ ರಾಜು. ಚಿತ್ರಕ್ಕೆ ಜೆ.ಟಿ ಚಿಟ್ಟೇಗೌಡ ಕೀಲಾರ ಛಾಯಾಗ್ರಹಣವಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next