Advertisement

ಸುರಕ್ಷಿತ ಪ್ರಯಾಣ ಸಾಧ್ಯವಾದರಷ್ಟೇ ದೇಶಿ ಕ್ರಿಕೆಟ್‌: ಗಂಗೂಲಿ

01:24 AM Jul 10, 2020 | Sriram |

ಮುಂಬಯಿ: ಕ್ರಿಕೆಟಿಗರಿಗೆ, ಅದ ರಲ್ಲೂ ಯುವ ಆಟಗಾರರಿಗೆ ದೇಶಾದ್ಯಂತ ಸುರಕ್ಷಿತ ಪ್ರಯಾಣ ಸಾಧ್ಯವಾದರಷ್ಟೇ ರಣಜಿ ಟ್ರೋಫಿ, ದುಲೀಪ್‌ ಟ್ರೋಫಿ ಮೊದಲಾದ ದೇಶಿ ಕ್ರಿಕೆಟ್‌ ಪಂದ್ಯಾವಳಿ ಆರಂಭಗೊಳ್ಳಲಿದೆ ಎಂಬುದಾಗಿ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಹೇಳಿದ್ದಾರೆ.

Advertisement

“ದೇಶಿ ಕ್ರಿಕೆಟ್‌ ಮತ್ತು ಜೂನಿಯರ್‌ ಕ್ರಿಕೆಟ್‌ ಪಂದ್ಯಾವಳಿಗಳ ಅಗತ್ಯ ಖಂಡಿತ ಇದೆ. ಆದರೆ ಕೊರೊನಾ ವೈರಸ್‌ ನಿಯಂತ್ರಣಕ್ಕೆ ಬಂದು, ಸುರಕ್ಷಿತ ಪ್ರಯಾಣ ಸಾಧ್ಯವಾದ ಬಳಿಕವಷ್ಟೇ ಈ ಕೂಟಗಳನ್ನು ಆಯೋಜಿಸಲು ಸಾಧ್ಯ’ ಎಂಬುದಾಗಿ ಸೌರವ್‌ ಗಂಗೂಲಿ ಪ್ರಶ್ನೆಯೊಂದಕ್ಕೆ ಪ್ರತಿ ಕ್ರಿಯಿಸಿದರು.

ವಿವಿಧ ವಯೋಮಿತಿ
“ನಮ್ಮದು ಬೃಹತ್‌ ರಾಷ್ಟ್ರ. ದೇಶಿ ಕ್ರಿಕೆಟ್‌ ಪಂದ್ಯಾವಳಿಗಳೆಲ್ಲ ದೊಡ್ಡ ಮಟ್ಟದ್ದು ಹಾಗೂ ದೀರ್ಘ‌ ಕಾಲಾವಧಿಯದ್ದು. ವಿವಿಧ ವಯೋಮಿತಿಯ ಬಹಳಷ್ಟು ಕೂಟಗಳಿವೆ. ಯುವ ಆಟಗಾರರೂ ಸೇರಿದಂತೆ ಪ್ರತಿಯೊಬ್ಬರೂ ಸುದೀರ್ಘ‌ ಪ್ರಯಾಣ ಮಾಡಬೇಕಾಗುತ್ತದೆ. ಇದಕ್ಕೆ ಮೊದಲು ಕಾಲ ಕೂಡಿಬರಬೇಕಿದೆ…’ ಎಂದು ಬಿಸಿಸಿಐ ಬಾಸ್‌ ಹೇಳಿದರು.

2020-21ರ ದೇಶಿ ಕ್ರಿಕೆಟ್‌ ಪಂದ್ಯಾವಳಿ ಆಗಸ್ಟ್‌ನಲ್ಲಿ ವಿಜಯ್‌ ಹಜಾರೆ ಟ್ರೋಫಿ ಮೂಲಕ ಆರಂಭವಾಗಬೇಕಿದೆ. ಅನಂತರ ರಣಜಿ ಟ್ರೋಫಿ, ದುಲೀಪ್‌ ಟ್ರೋಫಿ ಮತ್ತು ಸಯ್ಯದ್‌ ಮುಷ್ತಾಕ್‌ ಅಲಿ ಟ್ರೋಫಿ ಕೂಟಗಳು ನಡೆಯಬೇಕಿವೆ.

ಆದರೆ ಕಳೆದ ಋತುವಿನ ಇರಾನಿ ಕಪ್‌ ಕ್ರಿಕೆಟ್‌ ಪಂದ್ಯವನ್ನು ಲಾಕ್‌ಡೌನ್‌ ಕಾರಣದಿಂದ ರದ್ದುಪಡಿಸಲಾಗಿದೆ. ಇದು ಶೇಷ ಭಾರತ ಮತ್ತು ರಣಜಿ ಚಾಂಪಿಯನ್‌ ಸೌರಾಷ್ಟ್ರ ನಡುವೆ ನಡೆಯಬೇಕಿತ್ತು.

Advertisement

ದೇಶಿ ಕ್ರಿಕೆಟ್‌ ಕೂಟಗಳ ಆರಂಭದ ಬಗ್ಗೆ ಸಭೆ ಸೇರುವ ಕುರಿತು ಬಿಸಿಸಿಐ ಈವರೆಗೆ ಯಾವುದೇ ನಿರ್ಧಾರಕ್ಕೆ ಬಂದಿಲ್ಲ.

 

Advertisement

Udayavani is now on Telegram. Click here to join our channel and stay updated with the latest news.

Next