Advertisement

ಕೃಷ್ಣ ಪಟ್ಟಣ ಸಹಕಾರ ಬ್ಯಾಂಕ್‌ಗೆ ಉಪನಿಬಂಧಕರ ಭೇಟಿ-ತನಿಖೆ

05:29 PM Apr 21, 2022 | Team Udayavani |

ಶಹಾಪುರ: ಕೃಷ್ಣಾ ಪಟ್ಟಣ ಸಹಕಾರ ಬ್ಯಾಂಕ್‌ನಲ್ಲಿ ಕೋಟಿಗಟ್ಟಲೇ ಅವ್ಯವಹಾರ ನಡೆದಿದ್ದು, ತನಿಖಾ ವಿಳಂಬ ನೀತಿ ಸರಿಯಲ್ಲ, ಷೇರುದಾರರಿಗೆ ಅನ್ಯಾಯವಾಗಿದೆ. ಈ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಬ್ಯಾಂಕಿಗೆ ಆಗಮಿಸಿದ್ದ ಉಪನಿಬಂಧಕ ಮಲ್ಲಿಕಾರ್ಜುನ ಚಲುವಾದಿ ಅವರಿಗೆ ಷೇರುದಾರರು ಮುತ್ತಿಗೆ ಹಾಕಿ ಒತ್ತಾಯಿಸಿದರು.

Advertisement

ಅಲ್ಲದೇ ಷೇರುದಾರರಿಗೆ ಸಮರ್ಪಕವಾಗಿ ಡಿವಿಡೆಂಟ್‌ ಹಣ ವಿತರಿಸಿಲ್ಲ. ಅಕ್ರಮವಾಗಿ ಸಹಿ ಮಾಡಲಾಗಿ ಆ ಹಣವನ್ನು ಸಹ ಬ್ಯಾಂಕಿನ ಸಿಬ್ಬಂದಿ ಎತ್ತಿದ್ದಾರೆ. ಮತ್ತು ಎಸ್‌ಬಿ ಅಕೌಂಟ್‌ ನಲ್ಲಿರುವ ಲಕ್ಷಗಟ್ಟಲೇ ಹಣವನ್ನು ಸಹ ಬ್ಯಾಂಕಿನ ಗ್ರಾಹಕನಿಗೆ ಗೊತ್ತಾಗದೇ ಸಿಬ್ಬಂದಿ ಡ್ರಾ ಮಾಡಿಕೊಂಡಿದ್ದಾರೆ. ಅಧ್ಯಕ್ಷ ಸೇರಿದಂತೆ ಆಡಳಿತ ಮಂಡಳಿ ಸುಮಾರು 5 ಕೋಟಿಗೂ ಅಧಿಕ ಅವ್ಯವಹಾರ ನಡೆಸಿದ್ದು, ಆಡಳಿತ ಮಂಡಳಿಯೊಬ್ಬರ ಜೊತೆ ಸಹಕಾರಿ ಇಲಾಖೆಯ ನಿಮ್ಮ ಅಧಿಕಾರಿಯೊಬ್ಬರು ಮಾತನಾಡಿರುವ ಆಡಿಯೋ ವೈರಲ್‌ ಆಗಿದ್ದು, ಸೂಕ್ತ ಕ್ರಮ ಯಾಕೆ ತೆಗೆದುಕೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಏ. 4ರಂದು ದೂರಿನನ್ವಯ ತನಿಖೆಗೆ ಬಂದ ಜಿಲ್ಲಾ ಸಹಕಾರಿ ನಿಬಂಧಕ ನಿಂಬಾಳಕರ್‌ ಒಂದು ವಾರದೊಳಗೆ ಕ್ರಮಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದ್ದರು. ಇಲ್ಲಿವರೆಗೂ ಯಾವುದೇ ಕ್ರಮಕೈಗೊಂಡಿಲ್ಲ. ಕಳೆದ 26 ವರ್ಷಗಳ ಹಿಂದೆ ಕೃಷ್ಣ ಪಟ್ಟಣ ಸಹಕಾರಿ ಬ್ಯಾಂಕ್‌ ಸ್ಥಾಪನೆಯಾಗಿದ್ದು, ಕೇವಲ ಮೂವರು ಮಾತ್ರ ಅಧ್ಯಕ್ಷರಾಗಿ ಆಡಳಿತ ನಡೆಸಿದ್ದಾರೆ. 4232 ಜನ ಷೇರುದಾರರಿದ್ದು, ಬ್ಯಾಂಕ್‌ ದಿವಾಳಿಯತ್ತ ಸಾಗಿದ್ದು, ಅಧಿಕಾರಿಗಳು ಷೇರುದಾರರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಷೇರುದಾರ ಬಸವರಾಜ ಅರುಣಿ, ಮಹಾದೇವ ಚಟ್ರಿಕಿ ಒತ್ತಾಯಿಸಿದ್ದಾರೆ. ಇಲ್ಲವಾದರೆ ಬ್ಯಾಂಕ್‌ ಮುಂದೆ ಷೇರುದಾರರು ಜಮಾವಣೆಗೊಂಡು ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next