Advertisement
ಈಗ ಸ್ಟೇಟ್‌ಬ್ಯಾಂಕ್‌ನಲ್ಲಿ ಕಾರ್ಯಾಚರಿಸುತ್ತಿರುವ ಜಿಲ್ಲಾಧಿಕಾರಿ ಕಚೇರಿಯನ್ನು ಪೂರ್ಣವಾಗಿ ಪಡೀಲ್‌ಗೆ ಸ್ಥಳಾಂತರಿಸುವುದು ಈ ಯೋಜನೆಯ ಉದ್ದೇಶ. ಎರಡು ತಿಂಗಳಿನಿಂದ ಈ ಕುರಿತ ಕಾಮಗಾರಿ ಪಡೀಲ್‌ನಲ್ಲಿ ಭರದಿಂದ ನಡೆಯುತ್ತಿದ್ದು, ಪ್ರತಿ ದಿನ ಸುಮಾರು 100 ಕಾರ್ಮಿಕರು ಇದಕ್ಕಾಗಿ ಶ್ರಮಿಸುತ್ತಿದ್ದಾರೆ. ಅಡಿಪಾಯ ಸೇರಿದಂತೆ ಕಟ್ಟಡದ ಪ್ರಾರಂಭಿಕ ಕಾಮಗಾರಿಗಳು ಪೂರ್ಣಗೊಂಡಿದ್ದು, ಮುಂದಿನ ವಾರದಿಂದ ಪಿಲ್ಲರ್ ಜೋಡಣೆಯ ಆರಂಭವಾಗಲಿದೆ.
ಪಡೀಲ್‌ನಲ್ಲಿ ಅರಣ್ಯ ಇಲಾಖೆಗೆ ಸೇರಿದ 5.89 ಎಕ್ರೆ ಯೋಜನ ಸ್ಥಳದ ಭೂ ವಿಸ್ತೀರ್ಣದಲ್ಲಿ 41 ಕೋಟಿ ರೂ. ವೆಚ್ಚದಲ್ಲಿ ದ.ಕ. ಜಿಲ್ಲಾ ಕಚೇರಿಗಳ ಸಂಕೀರ್ಣ ನಿರ್ಮಾಣಗೊಳ್ಳಲಿದೆ. 2.14 ಲಕ್ಷ ಚ.ಅಡಿ ವಿಸ್ತೀರ್ಣದಲ್ಲಿ ನೂತನ ಕಟ್ಟಡ ನಿರ್ಮಾಣವಾಗಲಿದೆ. ನೆಲ ಮಹಡಿ, ಮೊದಲ, ಎರಡನೇ ಹಾಗೂ ಮೂರನೇ ಮಹಡಿ ಸೇರಿದಂತೆ ಟೆರೇಸ್ ಫ್ಲೋರ್ ಇದರಲ್ಲಿರಲಿದೆ. 38 ಇಲಾಖೆಗಳಿಗೆ ಅವಕಾಶ
ಸುಂದರ ಶೈಲಿಯ ಜಿಲ್ಲಾ ಸಂಕೀರ್ಣದಲ್ಲಿ ಒಟ್ಟು 38 ಇಲಾಖೆಗಳಿರಲಿವೆ. ಬೇಸ್ ಮೆಂಟ್ ಪ್ಲೋರ್‌ನಲ್ಲಿ 2, ನೆಲ ಮಹಡಿಯಲ್ಲಿ 13, ಮೊದಲ ಮಹಡಿಯಲ್ಲಿ 11 ಹಾಗೂ ಎರಡನೇ ಮಹಡಿಯಲ್ಲಿ 12 ಇಲಾಖೆಗಳಿರಲಿವೆ. ಉಳಿದಂತೆ 400 ಜನರು ಆಸೀನರಾಗುವ ಸಭಾಭವನ, 3 ಮೀಟಿಂಗ್ ಹಾಲ್, ಬ್ಯಾಂಕ್, ಎಟಿಎಂ, ಕ್ಯಾಂಟೀನ್, ಅಂಚೆ ಕಚೇರಿ, ಪೊಲೀಸ್ ಹೊರಠಾಣೆ ಸೌಲಭ್ಯಗಳಿರಲಿವೆ.
Related Articles
ಅಶೋಕಸ್ತಂಭ, ಧ್ವಜಸ್ತಂಭ, ಕಟ್ಟಡದ ಸುತ್ತಲೂ ಆವರಣ ಗೋಡೆ ಹಾಗೂ ಗೇಟ್, ವಿಶಾಲವಾದ ಪಾರ್ಕಿಂಗ್ (215 ಕಾರುಗಳು ಹಾಗೂ 225 ದ್ವಿಚಕ್ರ ವಾಹನ ಗಳು), 13 ಜನ ಸಾಮರ್ಥ್ಯದ 2 ಲಿಫ್ಟ್, 1.64 ಲಕ್ಷ ಲೀ. ಸಾಮರ್ಥ್ಯದ ಕೆಳಮಟ್ಟದ ನೀರಿನ ತೊಟ್ಟಿ, 55,000 ಲೀ. ಸಾಮರ್ಥ್ಯದ ಮೇಲ್ಮಟ್ಟದ ನೀರಿನ ತೊಟ್ಟಿ, 325 ಕೆ.ವಿ.ಎ. ಸಾಮರ್ಥ್ಯದ 2 ಜನರೇಟರ್, ಅಗ್ನಿಶಾಮಕ ವ್ಯವಸ್ಥೆ ಹಾಗೂ ಪ್ರತೀ ಮಹಡಿಯಲ್ಲಿ ಪ್ರತ್ಯೇಕ ಶೌಚಾಲಯಗಳಿರುತ್ತವೆ.
Advertisement
ವಿವಾದ ಸೃಷ್ಟಿಸಿದ್ದ ಭೂಮಿ!2014ರಲ್ಲಿ ಪಡೀಲಿನ ಅರಣ್ಯ ಅಭಿವೃದ್ಧಿ ನಿಗಮದ ಜಾಗದಲ್ಲಿ ಜಿಲ್ಲಾಧಿಕಾರಿ ಕಚೇರಿ ನಿರ್ಮಿಸಲು ಸರಕಾರ ಮುಂದಾಗಿತ್ತು. 2015ರಲ್ಲಿ ಸಚಿವ ಸಂಪುಟ 41 ಕೋಟಿ ರೂ. ವೆಚ್ಚದಲ್ಲಿ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ಕೂಡ ನೀಡಿತ್ತು. ಇದರ ವಿರುದ್ಧ ಮೊದಲು ಹೈಕೋರ್ಟ್‌ಗೆ ಮೊರೆಹೋಗಿದ್ದ ಪರಿಸರವಾದಿಗಳು ಹಾಗೂ ಸ್ಥಳೀಯರ ತಂಡ, ಅಲ್ಲಿ ತಡೆಯಾಜ್ಞೆ ತರಲು ವಿಫಲರಾದರೂ ಚೆನ್ನೈನ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದಲ್ಲಿ ಅರ್ಜಿ ಸಲ್ಲಿಸಿದರು. ಅಲ್ಲಿ ಎರಡು ವರ್ಷಗಳ ಕಾಲ ವಿಚಾರಣೆ ನಡೆದಿತ್ತು. ಆದರೆ, ಅರ್ಜಿ ಪರವಾಗಿ ಅರ್ಜಿದಾರರ ಕಡೆಯಿಂದ ಸಮರ್ಪಕವಾಗಿ ಪ್ರತಿನಿಧಿಸುವಲ್ಲಿ ಲೋಪವಾಗಿದೆ ಎನ್ನುವ ಹಿನ್ನೆಲೆಯಲ್ಲಿ ಎನ್‌ಜಿಟಿ ಅರ್ಜಿಯನ್ನು ಕಳೆದ ವರ್ಷ ಡಿ. 20ಕ್ಕೆ ವಜಾಗೊಳಿಸಿತ್ತು. ಆ ಬಳಿಕ ಜ. 4ರಂದು ಮಂಗಳೂರು ಉಪವಿಭಾಗದ ವೃಕ್ಷಾಧಿಕಾರಿ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯವರ ಕಚೇರಿಯಲ್ಲಿ ಸಾರ್ವಜನಿಕ ಆಕ್ಷೇಪಣೆ ಸಭೆ ನಡೆಸಲಾಗಿತ್ತು. ಬಳಿಕ ಜ. 10ರಿಂದ ಇಲ್ಲಿನ ಮರಗಳನ್ನು ಭಾರೀ ಪೊಲೀಸ್ ಭದ್ರತೆಯ ನಡುವೆ ಕಡಿಯುವ ಪ್ರಕ್ರಿಯೆ ಆರಂಭಿಸಲಾಗಿತ್ತು.