ಬೆಂಗಳೂರು: ಪಕ್ಷಕ್ಕಾಗಿ ಬದ್ಧತೆಯಿಂದ ಕೆಲಸ ಮಾಡಿದರೆ ಪಕ್ಷವೇ ಎಲ್ಲರನ್ನೂ ಬೆಳೆಸುತ್ತದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಬೆಂಗಳೂರಿನಲ್ಲಿ ಶನಿವಾರದಂದು ಮಲ್ಲೇಶ್ವರ ಮಂಡಲ ಬಿಜೆಪಿ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, “ಪಕ್ಷವೇ ನಮಗೆ ಎಲ್ಲ ಕೊಡಬೇಕು ಎಂದು ಭಾವಿಸುವುದು ಸರಿಯಲ್ಲ. ಪಕ್ಷಕ್ಕಾಗಿ ನಾವೇನು ಮಾಡಿದ್ದೇವೆ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು” ಎಂದರು.
ಪಕ್ಷಕ್ಕೆ ಬಂದ ಕೂಡಲೇ ಅಧಿಕಾರ ಬೇಕೆಂದರೆ ಆಗದು. ಅದಕ್ಕಾಗಿ ಪಕ್ಷಕ್ಕೆ ಮಾಡಿರುವ ಸೇವೆ ಏನು? ಯಾವ ರೀತಿಯ ಕಾಣಿಕೆ ನೀಡಿದ್ದೇವೆ ಎಂಬುದನ್ನು ಮನನ ಮಾಡಿಕೊಳ್ಳಬೇಕು ಎಂದು ಡಿಸಿಎಂ ಕಿವಿಮಾತು ಹೇಳಿದರು.
ದೇಶದಲ್ಲಿ ಈಗ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸುಭದ್ರ ಸರಕಾರ ಇದೆ. ಬಲಿಷ್ಠ ಸರಕಾರವಿದೆ. ನಮ್ಮ ಕಲ್ಪನೆಗೂ ನಿಲುಕದ ಸುಧಾರಣೆಗಳು ಆಗುತ್ತಿವೆ. ಪ್ರಧಾನಿಯಾದವರು ಪೌರಕಾರ್ಮಿಕರ ಪಾದ ತೊಳೆಯುತ್ತಾರೆ, ಆದಿಯೊಬ್ಬರಿಗೆ ಚಪ್ಪಲಿ ತೊಡಿಸುತ್ತಾರೆ. ಇಂಥ ಸರಳ ಸಜ್ಜನಿಕೆಯ ನಾಯಕ ನಮಗೆ ಮಾದರಿ. ಅವರ ಹೆಜ್ಜೆಗಳಲ್ಲಿ ನಾವೆಲ್ಲರೂ ಸಾಗಬೇಕಿದೆ ಎಂದು ಡಾ.ಅಶ್ವತ್ಥನಾರಾಯಣ ನುಡಿದರು.
ಕೋವಿಡ್ ಸಂಕಷ್ಟ ಎದುರಿಸುತ್ತಲೇ ಅನೇಕ ಸುಧಾರಣೆಗಳನ್ನು ಕೇಂದ್ರ ಮತ್ತು ರಾಜ್ಯದಲ್ಲಿ ಜಾರಿಗೆ ತರಲಾಗಿದೆ. ಇವೆಲ್ಲ ಸಂಗತಿಗಳನ್ನು ಜನರಿಗೆ ತಲುಪಿಸಬೇಕು. ಅವರಿಗೆ ಸಿಗುತ್ತಿರುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ಇದೇ ವೇಳೆ ಡಿಸಿಎಂ ಅವರು ಮುಖಂಡರಿಗೆ ಕರೆ ನೀಡಿದರು.
ಕೇಂದ್ರದ ಮಾಜಿ ಸಚಿವ ಹಾಗೂ ಸಂಸದ ಡಿ.ವಿ.ಸದಾನಂದ ಗೌಡರು ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಕಾರ್ಯಕಾರಣಿಯಲ್ಲಿ ಮಲ್ಲೇಶ್ವರ ಮಂಡಲ ಬಿಜೆಪಿ ಕಾರ್ಯಕಾರಿ ಅಧ್ಯಕ್ಷೆ ಕಾವೇರಿ ಕೇದಾರನಾಥ್, ಬೆಂಗಳೂರು ಉತ್ತರ ಬಿಜೆಪಿ ಅಧ್ಯಕ್ಷ ನಾರಾಯಣ ಗೌಡ, ಬೆಂಗಳೂರು ಉತ್ತರ ಬಿಜೆಪಿ ಉಪಾಧ್ಯಕ್ಷ ಡಾ.ವಾಸು ಮುಂತಾದವರು ಭಾಗಿಯಾಗಿದ್ದರು.