Advertisement

ಮೂಲಸೌಲಭ್ಯಗಳಿಂದ ವಂಚಿತ ವಸತಿಶಾಲೆ

12:16 PM Jul 29, 2017 | |

ತಿ.ನರಸೀಪುರ: ಉತ್ತಮವಾದ ಕಟ್ಟಡದ ಸೌಲಭ್ಯ ಹೊಂದಿರುವ ತಾಲೂಕಿನ ಕೂಡೂರು ಸಮೀಪದ ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ವಸತಿ ಶಾಲೆಯಲ್ಲಿ ಅಗತ್ಯ ಮೂಲಸೌಲಭ್ಯದ ಕೊರತೆ ಎದ್ದು ಕಾಣುತ್ತಿದೆ.

Advertisement

ಪಟ್ಟಣದಿಂದ ಕೇವಲ 6 ಕಿ.ಮೀ ದೂರದಲ್ಲಿರುವ ವರುಣಾ ವಿಧಾನ ಸಭಾ ಕ್ಷೇತ್ರ ವ್ಯಾಪಿಗೆ ಸೇರಿದ ಕೂಡೂರು ಬಳಿಯ ಈ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಕೂರಲು ಆಸನ ವ್ಯವಸ್ಥೆ ಇಲ್ಲದೇ ನೆಲದಲ್ಲೇ ಕುಳಿತು ಪಾಠ ಕೇಳುವಂತ ಪರಿಸ್ಥಿತಿ ಇದೆ. ಉತ್ತಮ ಕಟ್ಟಡದಲ್ಲಿ ಮೂರು ವರ್ಷ ಕಳೆದರೂ ಮಕ್ಕಳಿಗೆ ಡೆಸ್ಕ್ ಸೌಲಭ್ಯ  ಮಾತ್ರ ಇನ್ನೂ ದೊರಕಿಲ್ಲ.

200ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ವ್ಯಾಸಂಗ: 2012ರಲ್ಲಿ  6ನೇ ತರಗತಿಯಿಂದ 10ನೇ ತರಗತಿಯವರೆಗೆ 50 ವಿದ್ಯಾರ್ಥಿನಿಯರಿಂದ ಆರಂಭಗೊಂಡ ಈ ವಸತಿ ಶಾಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಹಾವೇರಿ, ಹಾಸನ, ಮೈಸೂರು ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಯ 200ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ.

ಡೆಸ್ಕ್ ವ್ಯವಸ್ಥೆ ಇಲ್ಲ: ವಸತಿ ಶಾಲೆಯಲ್ಲಿ 10ನೇ ತರಗತಿಯ 40 ವಿದ್ಯಾರ್ಥಿನಿಯರಿಗೆ ಮಾತ್ರ ಡೆಸ್ಕ್ ವ್ಯವಸ್ಥೆಯಿದ್ದು, ಉಳಿದ 160 ಮಕ್ಕಳಿಗೆ ಆಸನ ವ್ಯವಸ್ಥೆ ಇಲ್ಲದೇ ನೆಲದ ಮೇಲೆ ಕುಳಿತು ಪಾಠ ಕೇಳುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಬಡ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಸಾಕಷ್ಟು ಅನುದಾನ ಬಳಸಿ ಉತ್ತಮ ಕಟ್ಟಡ ನಿರ್ಮಿಸಿರುವ ಸರ್ಕಾರ ಮೂರು ವರ್ಷ ಕಳೆದರೂ ವಿದ್ಯಾರ್ಥಿನಿಯರಿಗೆ ಕುಳಿತುಕೊಳ್ಳಲು ಡೆಸ್ಕ್ ವ್ಯವಸ್ಥೆ ಕಲ್ಪಿಸದಿರುವುದು ನಿಜಕ್ಕೂ ವಿಷಾದನೀಯ.

ಹೋಬಳಿಗೊಂದು ವಸತಿ ಶಾಲೆ ಮಾಡುವಂತೆ ರಾಜ್ಯದಲ್ಲಿ ಪ್ರಸಕ್ತ ಸಾಲಿಗೆ 270 ವಸತಿ ಶಾಲೆಗಳು ಆರಂಭವಾಗಿದ್ದು, ತಾಲೂಕಿನ ಮೂಗೂರು, ತಲಕಾಡು ಹೋಬಳಿಗಳಲ್ಲಿಯೂ ವಸತಿ ಶಾಲೆ ಆರಂಭಿಸಿದ್ದರೂ ಈ ವಸತಿ ಶಾಲೆ ಮಕ್ಕಳಿಗೆ ಕುಳಿತುಕೊಳ್ಳಲು ಡೆಸ್ಕ್ ವ್ಯವಸ್ಥೆ ಇಲ್ಲದಿರುವುದು ವಿಪರ್ಯಾಸ.

Advertisement

ಘನತ್ಯಾಜ್ಯ ಸಮಸ್ಯೆ: ಇದು ಸಾಲದು ಎಂಬಂತೆ ಶಾಲೆಯ ಹಿಂಭಾಗದಲ್ಲಿ ಪಟ್ಟಣದಿಂದ ಸಂಗ್ರಹವಾಗುವ  ಘನತ್ಯಾಜ್ಯ ವಸ್ತು ವಿಲೇವಾರಿ ಮಾಡುವ ಘಟಕವಿದ್ದು, ಸೂಕ್ತ ನಿರ್ವಹಣೆ ಕೊರತೆಯಿಂದ ವಸತಿ ಶಾಲೆಗಳಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿ ವಿದ್ಯಾರ್ಥಿನಿಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ತುರ್ತು ಗಮನಹರಿಸಿ ಸಮಸ್ಯೆ ಬಗೆಹರಿಸಹರಿಬೇಕೆಂಬುದು ವಿದ್ಯಾರ್ಥಿಗಳ ಬೇಡಿಕೆಯಾಗಿದೆ.

ವಿದ್ಯಾರ್ಥಿನಿಯರಿಗೆ ಡೆಸ್ಕ್, ವ್ಯವಸ್ಥೆ ಕಲ್ಪಿಸುವಂತೆ ಕರ್ನಾಟಕ ರೆಸಿಡೆನ್ಸಿ ಸ್ಕೂಲ್‌ ಆಫ್ ಎಜುಕೇಷನ್‌ ಸೊಸೈಟಿಗೆ ಕಳೆದ ಮೂರು ವರ್ಷದಿಂದಲೂ ಪತ್ರ ವ್ಯವಹರಿಸಲಾಗುತ್ತಿದೆ. ನೆಲದ ಮೇಲೆ ಕುಳಿತು ಪಾಠ ಕೇಳುವ ಮಕ್ಕಳಿಗೆ ಆರೋಗ್ಯ ಸಮಸ್ಯೆ ಕಂಡು ಬಂದಲ್ಲಿ ಅಂತಹ ವಿದ್ಯಾರ್ಥಿನಿಯರನ್ನು ವಸತಿ ನಿಲಯದಲ್ಲೇ ಇರುವಂತೆ ಸೂಚಿಸಲಾಗುತ್ತಿದೆ. ಶಾಲಾ ಕಟ್ಟಡದ ಹಿಂಭಾಗ ಇರುವ ತ್ಯಾಜ್ಯ ಘಟಕ ಸ್ಥಳಾಂತರಿಸುವಂತೆ ಸಂಬಂಧಪಟ್ಟ ತಾಲೂಕು ದಂಡಾಧಿಕಾರಿಗಳಿಗೆ ದೂರು ನೀಡಿದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ.
-ಲೋಕೇಶ್‌, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಮುಖ್ಯ ಶಿಕ್ಷಕ

ಘನತ್ಯಾಜ್ಯ ವಿಲೇವಾರಿ ಘಟಕದ ಸುತ್ತ ರಕ್ಷಣಾ ಗೋಡೆ ನಿರ್ಮಿಸಿ ಶಾಲೆಗೆ ಯಾವುದೇ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲಾಗುವುದು. ಅಲ್ಲಿ ಯಾವುದೇ ರೀತಿ ವಾಸನೆ ಇಲ್ಲ. ಆಸುಪಾಸು ಗಿಡಗಳನ್ನು ಹಾಕುತ್ತಿದ್ದೇವೆ. ಮುಂದೆ ಸೊಳ್ಳೆ ಕಂಡು ಬಂದಲ್ಲಿ ಔಷಧ ಸಿಂಪಡಿಸಲು ಕ್ರಮ ಕೈಗೊಳ್ಳುತ್ತೇವೆ. ದಿನಕ್ಕೊಂದು ಬಾರಿ ಆರೋಗ್ಯಾಧಿಕಾರಿ ಭೇಟಿ ನೋಡಿ ಪರಿಶೀಲಿಸುತ್ತಿದ್ದಾರೆ.
-ಪುರುಷೋತ್ತಮ್‌ ಕಿರಿಯ ಎಂಜಿನಿಯರ್‌, ಪುರಸಭೆ

* ಎಸ್‌.ಬಿ. ಪ್ರಕಾಶ್‌

Advertisement

Udayavani is now on Telegram. Click here to join our channel and stay updated with the latest news.

Next