Advertisement

ಬಾಂಗ್ಲಾ ವಲಸಿಗರ ಗಡಿಪಾರಿಗೆ ಪತ್ರ

12:14 PM Aug 10, 2018 | Team Udayavani |

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ಪ್ರಜೆಗಳನ್ನು ಪತ್ತೆ ಹಚ್ಚಿ ತಕ್ಷಣ ಗಡಿಪಾರು ಮಾಡಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಲೆಹರ್‌ಸಿಂಗ್‌ ಆಗ್ರಹಿಸಿದ್ದಾರೆ.

Advertisement

ಈ ಕುರಿತು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರಿಗೆ ಪತ್ರ ಬರೆದಿರುವ ಅವರು, ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಬಾಂಗ್ಲಾ ದೇಶದ ಅಕ್ರಮ ವಲಸಿಗರು ಆಶ್ರಯ ಪಡೆದಿದ್ದು, ಇವರಿಗೆ ಕರ್ನಾಟಕ ಅಡಗುದಾಣವಾಗಿದೆ.

ಇವರಲ್ಲಿ ಬಹುತೇಕರು ಆಧಾರ್‌ ಕಾರ್ಡ್‌, ಪ್ಯಾನ್‌ ಕಾರ್ಡ್‌, ಮತದಾರರ ಗುರುತಿನ ಚೀಟಿ ಸಹ ಮಾಡಿಸಿಕೊಂಡಿದ್ದಾರೆ. ಅಕ್ರಮವಾಗಿ ನಾಗರಿಕ ದಾಖಲೆಗಳನ್ನು ಹೊಂದುವ ಜತೆಗೆ, ಈ ವಲಸಿಗರು ಡ್ರಗ್ಸ್‌ ಮಾಫಿಯಾ, ಮಾನವ ಕಳ್ಳ ಸಾಗಣೆಯಂತಹ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ.

ಅಸ್ಸಾಂನಲ್ಲಿ ರಾಷ್ಟ್ರೀಯ ಪ್ರಜಾ ನೋಂದಣಿ ಬಿಡುಗಡೆಯಾದ ಬೆನ್ನಲ್ಲೇ ಈ ರಿಜಿಸ್ಟರ್‌ನಲ್ಲಿ ಹೆಸರು ಇಲ್ಲದ ಅಕ್ರಮ ವಲಸಿಗರು ಕರ್ನಾಟಕ ಸೇರಿ ಇತರೆ ರಾಜ್ಯಗಳಿಗೆ ಪಲಾಯನ ಮಾಡಬಹುದು ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.

ಹೀಗಾಗಿ, ಈಗಾಗಲೇ ರಾಜ್ಯದಲ್ಲಿರುವ ಅಕ್ರಮ ವಲಸಿಗರು ಹಾಗೂ ಇದೀಗ ನುಸುಳಬಹುದಾದ ವಲಸಿಗರ ಬಗ್ಗೆ ಕಟ್ಟೆಚ್ಚರ ವಹಿಸಿ ಅಕ್ರಮ ಬಾಂಗ್ಲಾ ವಲಸಿಗರನ್ನು ಗುರುತಿಸಿ ಗಡೀಪಾರು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Advertisement

ಸಿಎಂ ಗಂಭೀರವಾಗಿ ಪರಿಗಣಿಸಲಿ: ಅಂದಾಜಿನ ಪ್ರಕಾರ ಬೆಂಗಳೂರು ನಗರ ಒಂದರಲ್ಲೇ 3 ಲಕ್ಷ ಅಕ್ರಮ ಬಾಂಗ್ಲಾ ದೇಶಿಗರು ವಾಸವಾಗಿದ್ದಾರೆ. ಜಕ್ಕಸಂದ್ರ, ಇಬ್ಬಲೂರು, ದೇವರ ಬೀಸನಹಳ್ಳಿ, ಕಾಡು ಬೀಸನಹಳ್ಳಿ, ಸೋಮಸುಂದರಪಾಳ್ಯ, ಮುನ್ನೇ ಕೊಳಲು ಸೇರಿದಂತೆ ಹೊರವಲಯದ ಪ್ರದೇಶಗಳನ್ನು ಇವರು ಆಶ್ರಯಿಸಿದ್ದಾರೆ.

ಬೆಂಗಳೂರು ನಗರವಷ್ಟೇ ಅಲ್ಲದೆ ದಕ್ಷಿಣ ಕನ್ನಡ, ಮಂಡ್ಯ, ಕೋಲಾರ, ರಾಮನಗರ, ಮೈಸೂರು, ಬೆಳಗಾವಿ ಜಿಲ್ಲೆಗಳಲ್ಲೂ ಅಧಿಕ ಸಂಖ್ಯೆಯ ಅಕ್ರಮ ನಿವಾಸಿಗಳಿದ್ದಾರೆ. 2015ರಲ್ಲಿ ಜೆಡಿಎಸ್‌ ರಾಜ್ಯಾಧ್ಯಕ್ಷರಾಗಿದ್ದ ಎಚ್‌.ಡಿ.ಕುಮಾರಸ್ವಾಮಿ ಅವರು ಅಕ್ರಮ ಬಾಂಗ್ಲಾ ವಲಸಿಗರ ವಿಷಯ ಪ್ರಸ್ತಾಪಿಸಿ ಕ್ರಮಕ್ಕೆ ಆಗ್ರಹಿಸಿದ್ದರು.

ಕ್ರಮ ಕೈಗೊಳ್ಳದ ಅಂದಿನ ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಾಗ್ಧಾಳಿ ಕೂಡ ನಡೆಸಿದ್ದರು. ಇಂದು ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಿದ್ದು ಅಕ್ರಮ ನಿವಾಸಿಗಳ ವಿಚಾರದಲ್ಲಿ ಗುಪ್ತಚರ ಇಲಾಖೆ ನೀಡಿರುವ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಲೆಹರ್‌ಸಿಂಗ್‌ ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next