Advertisement

ನ್ಯಾಯಾಲಯದ ಡಿಕ್ರಿಗಳಿಗೆ ಕಂದಾಯ ಇಲಾಖೆ ತಡೆ

01:27 AM Aug 27, 2020 | mahesh |

ಬೆಳ್ತಂಗಡಿ: ಸ್ಥಿರಾಸ್ತಿಗಳನ್ನು ವಿಂಗಡಿಸುವ ಸಲುವಾಗಿ ನ್ಯಾಯಾಲಯದಲ್ಲಿ ಹತ್ತಾರು ವರ್ಷಗಳಿಂದ ದಾವೆ ಹೂಡಿ, ನ್ಯಾಯಾಲಯದ ಆಯುಕ್ತರ ವರದಿಯಂತೆ ಪಡೆದ ಅಂತಿಮ ಡಿಕ್ರಿ ಆಧಾರದಲ್ಲಿ ಈ ಹಿಂದೆ ನಡೆಯುತ್ತಿದ್ದ ಆರ್‌ಟಿಸಿ ಬದಲಾವಣೆ ಪ್ರಕ್ರಿಯೆಯನ್ನು ಪ್ರಸ್ತುತ ಕಂದಾಯ ಇಲಾಖೆ ತಡೆ ಹಿಡಿದಿರುವುದರಿಂದ ಸಾರ್ವಜನಿಕರಿಗೆ ತಮ್ಮ ಆಸ್ತಿ ಹಕ್ಕು ಸಿಗದಂತಾಗಿದೆ. ರಾಜ್ಯದಲ್ಲಿ ಕೋರ್ಟ್‌ ಡಿಕ್ರಿಗೆ ಸಂಬಂಧಿಸಿ 6 ತಿಂಗಳಿಂದ ಯಾವುದೇ ಕಡತ ವಿಲೇವಾರಿಯಾಗಿಲ್ಲ. ದ.ಕ., ಉಡುಪಿ ಜಿಲ್ಲೆಗಳಲ್ಲಿ 4,000ಕ್ಕೂ ಅಧಿಕ ಅರ್ಜಿಗಳು ಬಾಕಿ ಇದ್ದು, ಕಂದಾಯ ಇಲಾಖೆಯ ಈ ಕ್ರಮದಿಂದ ನ್ಯಾಯಾಂಗ ವ್ಯವಸ್ಥೆಯನ್ನೇ ಪ್ರಶ್ನಾರ್ಥಕವಾಗಿ ನೋಡುವಂತಾಗಿದೆ.

Advertisement

ಲೋಕ ಅದಾಲತ್‌ಗೆ ಹಿನ್ನಡೆ
ನ್ಯಾಯಾಲಯ ಲೋಕ ಅದಾಲತ್‌ಗಳನ್ನು ನಡೆಸಿ ಸ್ಥಿರಾಸ್ತಿ ವಿಭಾಗದ ಬಗ್ಗೆ ನೀಡಿದ ರಾಜಿ ಡಿಕ್ರಿಗಳ ಆಧಾರದಲ್ಲಿ ಪಹಣಿ ಪತ್ರಿಕೆಗಳಲ್ಲಿ ಖಾತಾ ಬದಲಾವಣೆಗೆ ರೈತರು ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸುತ್ತಿದ್ದರು. ಆದರೆ ಆಸ್ತಿ ಹಕ್ಕುದಾರರನ್ನು ಸಾಕಷ್ಟು ಸತಾಯಿಸಿ ಮಗದೊಮ್ಮೆ 11ಇ ನಕ್ಷೆ ನೀಡುವಂತೆ ಕಂದಾಯ ಇಲಾಖೆ ಹಿಂಬರಹ ನೀಡುವ ಮೂಲಕ ಲೋಕ ಅದಾಲತ್‌ ವ್ಯವಸ್ಥೆಗೆ ಹಿನ್ನಡೆಯಾಗಿದೆ. ಜನರು ನ್ಯಾಯಾಲಯದ ರಾಜಿ ಡಿಕ್ರಿ ಹಿಡಿದು ಅಲೆದಾಡುವಂತಾಗಿದೆ.

ನ್ಯಾಯಾಲಯದ ಆದೇಶಕ್ಕೆ ಹಿಂಬರಹ
ಈ ಹಿಂದೆ ನ್ಯಾಯಾಲಯದ ರಾಜಿ ಡಿಕ್ರಿ/ಅಂತಿಮ ಪಾಲು ವಿಂಗಡಣೆ ಡಿಕ್ರಿಗಳ ದೃಢೀಕೃತ ಪ್ರತಿಯನ್ನು ಆಯಾಯ ಸಹಾಯಕ ಆಯುಕ್ತರಿಗೆ ನೀಡಲಾಗುತ್ತಿತ್ತು. ಬಳಿಕ ಅವರು ರಾಜಿ ಡಿಕ್ರಿ, ಅಂತಿಮ ಪಾಲು ವಿಂಗಡನ ಡಿಕ್ರಿಗಳ ಆಧಾರದಲ್ಲಿ ಹಕ್ಕುದಾರರ ಹೆಸರಿಗೆ ಪಹಣಿ
ದಾಖಲಿಸುವಂತೆ ತಹಶೀಲ್ದಾರರಿಗೆ ಆದೇಶಿಸುತ್ತಿದ್ದರು. ಆದರೆ ಕಳೆದ 6 ತಿಂಗಳಿನಿಂದ ಸಹಾಯಕ ಆಯುಕ್ತರಿಗೆ ಕೊಟ್ಟಂತಹ ಎಲ್ಲ ಅರ್ಜಿಗಳಿಗೆ 11ಇ ನಕ್ಷೆ ಒದಗಿಸುವಂತೆ ಹಿಂಬರಹ ನೀಡುತ್ತಿದ್ದಾರೆ. ಇದೊಂದು ಅವೈಜ್ಞಾನಿಕ ಕ್ರಮವಾಗಿದ್ದು, ನ್ಯಾಯಾಲಯದ ಆದೇಶವನ್ನೇ ತಿರಸ್ಕರಿಸಿದಂತೆ ಎಂದು ನ್ಯಾಯವಾದಿಗಳು ಆರೋಪಿಸಿದ್ದಾರೆ.

ಅಸ್ಪಷ್ಟ ಆದೇಶ
ಹಲವಾರು ಪ್ರಕರಣಗಳಲ್ಲಿ ಪಹಣಿ ಪತ್ರಿಕೆಯಲ್ಲಿ ಹೆಸರಿರುವ ವ್ಯಕ್ತಿಗಳು ಮೃತಪಟ್ಟಿರುವುದರಿಂದ ಅವರ ವಾರಸುದಾರರ ಪೈಕಿ ಯಾರಾದ ರೊಬ್ಬರು ನ್ಯಾಯಾಲಯದ ಕದ ತಟ್ಟುವುದು ಸಾಮಾನ್ಯ. ಮೃತರ ಹೆಸರಿನಲ್ಲಿ ಪಹಣಿಯಿದ್ದಾಗ 11ಇ ನಕ್ಷೆಗೆ ಅರ್ಜಿ ಸಲ್ಲಿಸಲು ಹೇಗೆ ಸಾಧ್ಯ ಎಂಬುದನ್ನು ಕಂದಾಯ ಇಲಾಖೆಯೇ ಸ್ಪಷ್ಟ ಪಡಿಸಬೇಕಿದೆ. ನ್ಯಾಯಾಲಯದ ಕದ ತಟ್ಟಿ ಡಿಕ್ರಿ ಪಡೆದುಕೊಂಡಿರುವ ಸಣ್ಣ ರೈತರು ಅದೆಷ್ಟೋ ಪ್ರಕರಣಗಳಲ್ಲಿ ಪೋಡಿ (ಪ್ಲಾಟಿಂಗ್‌) ಆಗಲಿಲ್ಲ ಎಂಬ ಕಾರಣಕ್ಕೆ 11ಇ ನಕ್ಷೆಯನ್ನು ಪಡೆಯಲಾಗದೆ ಅತಂತ್ರರಾಗಿದ್ದು, ಈ ವಿಚಾರದಲ್ಲೂ ಕಂದಾಯ ಇಲಾಖೆಯಲ್ಲಿ ಸ್ಪಷ್ಟತೆ ಇಲ್ಲ.

ತಪ್ಪದ ಅಲೆದಾಟ
ನೆಮ್ಮದಿ ಕೇಂದ್ರಗಳಲ್ಲಿ ಡಿಕ್ರಿಗಳ ಆಧಾರದಲ್ಲಿ ಅರ್ಜಿ ಸ್ವೀಕರಿಸಲು ಅಗತ್ಯ ವ್ಯವಸ್ಥೆ ಇದ್ದರೂ ಕಂದಾಯ ಇಲಾಖೆ ವ್ಯವಸ್ಥಿತವಾಗಿ 11ಇ ನಕ್ಷೆ ತಯಾರಿಸುವ ಬಗ್ಗೆ ಅರ್ಜಿ ನೀಡುವಂತೆ ಸೂಚಿಸುತ್ತಿರುವುದನ್ನು ಕಂಡಾಗ ಇಲಾಖೆ ಯಾವುದೋ ಒತ್ತಡಕ್ಕೆ ಮಣಿದಂತೆ ಕಾಣಿಸುತ್ತಿದೆ. ಈಗಾಗಲೇ ಹಲವು ತೊಂದರೆಗಳಿಂದ ಬೇಸತ್ತಿರುವ ರೈತರು ಈ ನಡುವೆ ಪಹಣಿ ಪತ್ರಿಕೆ ಬದಲಾವಣೆ ಆಗದೆ ಕೃಷಿ ಸಾಲ ಮೊದಲಾದ ಸೌಲಭ್ಯ ಪಡೆಯಲು ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರಕಾರ/ಜನಪ್ರತಿನಿಧಿಗಳು ರೈತರ ನೋವಿಗೆ ಸ್ಪಂದಿಸಬೇಕಿದೆ.

Advertisement

ಕೋರ್ಟ್‌ ಆದೇಶದಂತೆ 11ಇ ನಕ್ಷೆ ಬೇಕೇ ಬೇಕು. ಕರ್ನಾಟಕ ಕಂದಾಯ ಕಾಯ್ದೆಯಲ್ಲಿ 11ಇ ನಕ್ಷೆ ಪಡೆದು ಪಹಣಿ ಮಾಡುವಂತೆ ಸೂಚನೆ ಇದೆ. ಸರಕಾರ ಈ ಕುರಿತು ತಿದ್ದುಪಡಿ ಆದೇಶ ತಂದಲ್ಲಿ ಮಾತ್ರ ಈ ಹಿಂದಿನಂತೆ 11ಇ ನಕ್ಷೆ ಇಲ್ಲದೆ ಪಹಣಿ ದಾಖಲಿಸಬಹುದು.
– ಸಿದ್ಧಲಿಂಗಾರೆಡ್ಡಿ , ಸಹಾಯಕ ಆಯುಕ್ತರು, ಭೂಮಿ ಮಾನಿಟರಿಂಗ್‌ ಸೆಲ್‌, ಬೆಂಗಳೂರು

ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next