ಭಾಲ್ಕಿ: ರಾಜ್ಯಮಟ್ಟದ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ ಮುಗಿದು, ಅದರ ಫಲಿತಾಂಶ ವಿಶ್ಲೇಷಣಾ ಕಾರ್ಯ ನಡೆದಿದೆ. ನಾವು ಮಕ್ಕಳಲ್ಲಿನ ಕಲಿಕಾ ತೊಂದರೆ ಗುರುತಿಸುವ ಕಾರ್ಯವಾಗಬೇಕು ಎಂದು ಡಯಟ್ ಪ್ರಾಂಶುಪಾಲ ದಿಗಂಬರ ಬಿ.ಕೆ. ಅಭಿಪ್ರಾಯಪಟ್ಟರು.
ಪಟ್ಟಣದ ಪುರಭವನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆ ನಿಮಿತ್ತ ನಡೆದ ಮುಖ್ಯ ಶಿಕ್ಷಕರ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಪಾಠದಲ್ಲಿನ ಕಲಿಕಾ ತೊಂದರೆ ಗುರುತಿಸುವುದು ನಮ್ಮ ಜವಾಬ್ದಾರಿಯಾಗಿದೆ. ಮಗು ಎಡವುವ ಸ್ಥಳಕ್ಕೆ ಚಿಕಿತ್ಸೆ ಕೊಡುವ ಕಾರ್ಯವಾಗಬೇಕು. ಈ ನಿಟ್ಟಿನಲ್ಲಿ ಮುಖ್ಯ ಶಿಕ್ಷಕರು ಜಾಗರುಕತೆಯಿಂದ ಕಾರ್ಯನಿರ್ವಹಿಸಿದರೆ, ತಮ್ಮ ಶಾಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರತಿಶತ ತರುವಲ್ಲಿ ಸಂಶಯವಿಲ್ಲ. ಪ್ರತಿ ವಿಷಯದ ಫಲಿತಾಂಶದ ಬಗ್ಗೆ ಜಾಗರೂಕತೆಯಿಂದ ವೀಕ್ಷಿಸಿ, ಶಿಕ್ಷಕರಿದ್ದರೂ ಫಲಿತಾಂಶ ಕಡಿಮೆ ಬರಲು ಕಾರಣವೇನು, ಮಗು ಎಲ್ಲಿ ಎಡವುತ್ತಿದೆ ಎಂದು ಗುರುತಿಸಿ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಬಸವಂತರಾಯ ವೈ. ಜಿಡ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಸೂರ್ಯಕಾಂತ ಪಾಟೀಲ ಮಾತನಾಡಿ, ಪೂರ್ವಸಿದ್ಧತಾ ಪರೀಕ್ಷೆ ಫಲಿತಾಂಶ ವಿಶ್ಲೇಷಣೆಯಲ್ಲಿ ಕಂಡುಬರುವ ದೋಷಗಳ ಬಗ್ಗೆ ಮಕ್ಕಳಿಗೆ ತಿಳಿವಳಿಕೆ ನೀಡಬೇಕು. ಬರವಣಿಗೆ ಸಾಮರ್ಥ್ಯ ಉತ್ತಮವಾಗುವಂತೆ ಪ್ರೇರೇಪಿಸಬೇಕು ಎಂದು ಸಲಹೆ ನೀಡಿದರು.
ಡಯಟ್ ಉಪನ್ಯಾಸಕ ಗೋವಿಂದ ರೆಡ್ಡಿ, ಲಕ್ಷ್ಮಣ ತುರೆ, ಧನರಾಜ ಗುಡಮೆಯವರು ಫಲಿತಾಂಶ ಸುಧಾರಿಸುವ ನಿಟ್ಟಿನಲ್ಲಿ ಮಾಡಬೇಕಾದ ಕಾರ್ಯಕ್ಷಮತೆಗಳ ಬಗ್ಗೆ ಮಾತನಾಡಿದರು.
ಕ್ಷೇತ್ರ ಸಮನ್ವಯಾಧಿಕಾರಿ ಮನೋಹರ ಹೊಳಕರ, ದೈಹಿಕ ಶಿಕ್ಷಣಾಧಿಕಾರಿ ರಾಠೊಡ, ಬಿಆರ್‌ಪಿ ಶಕುಂತಲಾ ಸಾಲಮನಿ, ಸಿಆರ್‌ಪಿ ಬಸವರಾಜ ಬಡದಾಳೆ, ಸಂತೋಷ ವಾಡೆ, ಜಯರಾಜ ದಾಬಶೆಟ್ಟಿ, ಶಿವಕುಮಾರ ಮೇತ್ರೆ, ಎಂ.ಡಿ. ಹನೀಫ್, ವಿಶ್ವಾರಾಧ್ಯ ಸೇರಿದಂತೆ ತಾಲೂಕಿನ ಎಲ್ಲ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಮುಖ್ಯ ಶಿಕ್ಷಕರು ಇದ್ದರು.
ಇದೇ ವೇಳೆ ಎಸ್‌ಎಸ್ ಎಲ್‌ಸಿ ವಿದ್ಯಾರ್ಥಿಗಳಿಗೆ ಆಂತರಿಕ ಮೌಲ್ಯಮಾಪನದ ಅಂಕಗಳನ್ನು ಮಂಡಳಿ ಜಾಲತಾಣದಲ್ಲಿ ಅಳವಡಿಸಲು ಇದೇ 2022ರ ಮಾ. 5ರಿಂದ ಮಾ. 13ರ ವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಮಾ. 8ರ ಒಳಗಾಗಿ ವಿದ್ಯಾರ್ಥಿಗಳಿಗೆ ಮಕ್ಕಳ ಸುರಕ್ಷತೆ, ಮಕ್ಕಳ ಹಕ್ಕು ರಕ್ಷಣೆ ಮತ್ತು ನಮ್ಮ ದೇಶಕ್ಕೆ ಮಹಿಳೆಯರು ನೀಡಿದ ಕೊಡುಗೆಗಳ ಬಗ್ಗೆ ಚಿತ್ರಕಲಾ, ಪ್ರಬಂಧ ಮತ್ತು ಭಾಷಣ ಸ್ಪರ್ಧೆ ನಡೆಸಬೇಕು ಎಂದು ತಿಳಿಸಿದರು. ಇಸಿಒ ಸಹದೇವ ಜಿ. ಸ್ವಾಗತಿಸಿದರು. ಮನೋಹರ ಎಚ್. ನಿರೂಪಿಸಿದರು. ಶಕುಂತಲಾ ಎಸ್. ವಂದಿಸಿದರು.