Advertisement
ಸಾರ್ವಜನಿಕ ಶಿಕ್ಷಣ ಇಲಾಖೆ ಮಾಡಿದ ಯಡವಟ್ಟಿಗೆ ಅಭ್ಯರ್ಥಿಗಳ ಒಂದು ವರ್ಷ ವ್ಯರ್ಥವಾಗಿದೆ. ಕೋವಿಡ್-19 ಕಾರಣಕ್ಕೆ 2020-21ನೇ ಸಾಲಿನಲ್ಲಿ ಆನ್‌ಲೈನ್ ಮೂಲಕವೇ ಶುಲ್ಕ ಪಾವತಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಸೆಂಟ್ರಲ್ ಅಡ್ಮಿಶನ್ ಸೆಲ್ ಆದೇಶಿಸಿತ್ತು. ಅದರಂತೆ ಆಯ್ಕೆಯಾದ ಅಭ್ಯರ್ಥಿಗಳು ಆರಂಭಿಕ ಶುಲ್ಕ 10,025 ರೂ. ಪಾವತಿಸಬೇಕಿತ್ತು. ಹೀಗಾಗಿ ಸಾಕಷ್ಟು ಅಭ್ಯರ್ಥಿಗಳು ಶುಲ್ಕ ಪಾವತಿಸಿದ್ದಾರೆ. ಹಣ ಪಾವತಿಯಾಗುತ್ತಿದ್ದಂತೆ ಇಲಾಖೆ ವೆಬ್‌ಸೈಟ್‌ನಲ್ಲಿ ದಾಖಲಾತಿ ಅರ್ಹತಾ ಪತ್ರ ಬರಬೇಕಿತ್ತು. ಆದರೆ ಅದು ಬರದೆ ಅಭ್ಯರ್ಥಿಗಳು ಕಂಗಾಲಾಗಿದ್ದಾರೆ.
Related Articles
Advertisement
ತಮಗಾದ ಈ ಸಮಸ್ಯೆ ಕುರಿತು ಅಭ್ಯರ್ಥಿಗಳು ಇಲ್ಲಿನ ಡಯಟ್‌ಗೆ ಭೇಟಿ ನೀಡಿದರೆ ಇದು ಕೇಂದ್ರ ಕಚೇರಿಯಿಂದ ಆಗಿರುವ ಯಡವಟ್ಟು ನಾವೇನು ಮಾಡಲು ಬರಲ್ಲ ಎಂದು ಹೇಳಿದ್ದಾರೆ. ಹೋಗಲಿ ಕೇಂದ್ರ ಕಚೇರಿಗೆ ಸಂಪರ್ಕಿಸಿದರೆ, ನಿಮ್ಮ ಎಲ್ಲ ದಾಖಲೆ, ರಶೀದಿಗಳನ್ನು ತೆಗೆದುಕೊಂಡು ಬನ್ನಿ ಎನ್ನುತ್ತಿದ್ದಾರೆ. ಶುಲ್ಕ ಕಟ್ಟಿಸಿಕೊಳ್ಳುವಾಗ ಆನ್‌ಲೈನ್ ವ್ಯವಸ್ಥೆ ಬೇಕಾಗುತ್ತದೆ, ಶುಲ್ಕ ಮರುಪಾವತಿಸುವಾಗ ಮಾತ್ರ ಅಭ್ಯರ್ಥಿಗಳ ದೈಹಿಕ ಹಾಜರಾತಿ ಯಾಕೆ ಬೇಕು. ನೀವು ಆನ್‌ಲೈನ್‌ನಲ್ಲೇ ಹಣ ಮರುಪಾವತಿಸಿ ಎನ್ನುವುದು ಅಭ್ಯರ್ಥಿಗಳ ವಾದ.
ಇದನ್ನೂ ಓದಿ: ತಿಮ್ಮಪ್ಪನ ಬೆಟ್ಟದಲ್ಲಿ ಅನೈತಿಕ ಚಟುವಟಿಕೆಗೆ ತಡೆ
ಒಂದು ವರ್ಷ ವ್ಯಯ
ಬಿಇಡಿ ಮಾಡಿ ಶಿಕ್ಷಕ ವೃತ್ತಿಗೆ ಸೇರಿಕೊಳ್ಳಬೇಕೆಂಬ ಬಯಕೆಯಿಂದ ವರ್ಷ ಸಾವಿರಾರು ವಿದ್ಯಾರ್ಥಿಗಳು ಅರ್ಜಿ ಹಾಕುತ್ತಾರೆ. ಅದರಲ್ಲಿ ಅರ್ಹತೆ ಆಧಾರದಡಿ ಸೀಟು ಪಡೆಯುವುದೇ ದೊಡ್ಡ ಸಾಹಸ ಎನ್ನುವಂತಾಗಿದೆ. ಹೇಗೋ ಸೀಟು ಪಡೆದು ಇನ್ನೇನು ಪ್ರವೇಶ ಪಡೆಯಬೇಕು ಎನ್ನುವಷ್ಟರಲ್ಲಿ ಈ ರೀತಿ ಸಮಸ್ಯೆ ಎದುರಾಗಿದೆ. ಇದರಿಂದ ಅಭ್ಯರ್ಥಿಗಳ ಒಂದು ವರ್ಷವೇ ವ್ಯಯವಾಗಿದೆ. ಸಮಸ್ಯೆ ಬಗೆಹರಿಯಬಹುದು. ಇಲಾಖೆ ಏನಾದರೂ ಪರಿಹಾರ ಸೂಚಿಸಬಹುದೆಂದು ಸಾಕಷ್ಟು ಅಲೆದರೂ ಪ್ರಯೋಜನವಾಗಿಲ್ಲ. ಕನಿಷ್ಠ ಪಕ್ಷ ನಾವು ಕಟ್ಟಿದ ಹಣವನ್ನಾದರೂ ಹಿಂದಿರುಗಿಸಲಿ ಎಂಬುದು ಅಭ್ಯರ್ಥಿಗಳ ಹಕ್ಕೊತ್ತಾಯವಾಗಿದೆ.
ಕೋವಿಡ್-19 ಇರುವ ಕಾರಣಕ್ಕೆ ಇಲಾಖೆ ಬಿಇಡಿ ಪ್ರವೇಶಾತಿ ಶುಲ್ಕವನ್ನು ಆನ್‌ಲೈನ್ ಮೂಲಕವೇ ಮಾಡಲು ತಿಳಿಸಿತ್ತು. ಹೀಗಾಗಿ ಸರ್ಕಾರಿ ಶುಲ್ಕ 10,025 ರೂ. ಹಣ ಪಾವತಿಸಲಾಗಿದೆ. ಆದರೆ ವೆಬ್‌ಸೈಟ್‌ನಲ್ಲಿ ಮಾತ್ರ ಪ್ರವೇಶಾತಿ ಪತ್ರ ಬರಲಿಲ್ಲ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಸಂಪರ್ಕಿಸಿದರೂ ಸರಿಯಾದ ಸ್ಪಂದನೆ ನೀಡುತ್ತಿಲ್ಲ. ಕೇಂದ್ರ ಕಚೇರಿಗೆ ಬರುವಂತೆ ಹೇಳುತ್ತಾರೆ. ಅಲ್ಲಿಗೆ ಹೋಗಿ ಬರಲು ಮತ್ತೆ 4-5 ಸಾವಿರ ಖರ್ಚು ಮಾಡಿಕೊಂಡು ಹೋಗಲು ಸಾಧ್ಯವಿಲ್ಲ. ರಾಯಚೂರು ಜಿಲ್ಲೆ ಮಾತ್ರವಲ್ಲ ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಈ ಸಮಸ್ಯೆ ಎದುರಾಗಿದೆ. ಕೂಡಲೇ ಇಲಾಖೆ ಹಣ ಮರುಪಾವತಿಗೆ ಕ್ರಮ ವಹಿಸಬೇಕು. -ಉಮಾಶಂಕರ್, ಪ್ರವೇಶ ವಂಚಿತ ಅಭ್ಯರ್ಥಿ
-ಸಿದ್ಧಯ್ಯಸ್ವಾಮಿ ಕುಕುನೂರು