ಮುಂಬಯಿ: ಪತ್ರಿಕಾರಂಗದ ಒತ್ತಡ ಭರಿತ ಜೀವನದ ಮಧ್ಯೆ ಮುಂಬಯಿ ಕನ್ನಡ ಪತ್ರಿಕೋದ್ಯಮ ಎಂಬ ವಿಷಯದಲ್ಲಿ ಸಂಶೋಧನೆ ಮಾಡಿ ಮುಂಬಯಿ ಮಹಾನಗರದಲ್ಲಿ ಮೊಟ್ಟಮೊದಲಾಗಿ ಕನ್ನಡ ಪತ್ರಿಕೋದ್ಯಮದ ಬಗ್ಗೆ ಸಂಶೋಧನೆ ಕೃತಿಯನ್ನು ಲೋಕರ್ಪಣೆ ಮಾಡುವಂತಹ ಮಹಾನ್ ಕಾರ್ಯವನ್ನು ಮಾಡುತ್ತಿರುವ ಡಾ|ದಿನೇಶ್ ಶೆಟ್ಟಿ ರೆಂಜಾಳ ಅವರ ಕಾರ್ಯ ಅಭಿನಂದನೀಯಾವಾಗಿದೆ ಎಂದು ಜ್ಯೋತಿ ಪ್ರಕಾಶ್ ಕುಂಠಿನಿ ನುಡಿದರು.
ಅವರು ಕುರ್ಲಾ ಪೂರ್ವ ಬಂಟರ ಭವನದ ಅನೆಕ್ಸ್ ಸಭಾಭವನದಲ್ಲಿ ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ಮತ್ತು ನಗರದ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಹಿರಿಯ ಪತ್ರಕರ್ತ ಡಾ|ದಿನೇಶ್ ಶೆಟ್ಟಿ ರೆಂಜಾಳ ಅವರ ಮುಂಬಯಿ ಕನ್ನಡ ಪತ್ರಿಕೋದ್ಯಮ ಸಂಶೋಧನಕೃತಿ ಬಿಡುಗಡೆ ಮತ್ತು ಮುಂಬಯಿ ಕನ್ನಡಿಗ ಪತ್ರಕರ್ತರ ಸಮಾಗಮ’ ಕಾರ್ಯಕ್ರಮದಲ್ಲಿ ದೀಪವನ್ನು ಪ್ರಜ್ವಲಿಸಿ ಮಾತನಾಡಿದರು.
ಪತ್ರಿಕಾ ರಂಗದಲ್ಲಿ ಪತ್ರಕರ್ತರ ಬದುಕು ಬಹಳ ಕಷ್ಟಕರವಾದುದು. ಪತ್ರಕರ್ತರು ತಮ್ಮ ವೃತ್ತಿಯ ಮಧ್ಯೆ ಸಂಶೋಧನಾ ಕೃತಿ ರಚಿಸುವುದು ಸುಲಭದ ಕೆಲಸವಲ್ಲ. ಅದಕ್ಕೆ ಕಠಿಣ ಪರಿಶ್ರಮಬೇಕು. ಪತ್ರಿಕೋದ್ಯಮದಲ್ಲಿ ಕ್ರಿಯಾಶೀಲವಾಗಿರುವ ಡಾ|ದಿನೇಶ್ ಶೆಟ್ಟಿ ಅವರು ಪತ್ರಕರ್ತರ ಜವಾಬ್ದಾರಿ ಮತ್ತು ಪರಿಶ್ರಮವನ್ನು ಬಹಳ ಹತ್ತಿರದಿಂದ ಕಂಡವರು. ಪತ್ರಕರ್ತರ ಹಿಂದೆ ಅವರ ಪತ್ನಿಯರು ಬೆಂಬಲವಾಗಿ ನಿಂತಿದ್ದಾರೆ ಎಂಬ ಉದ್ದೇಶದಿಂದ ಡಾ|ದಿನೇಶ್ ಶೆಟ್ಟಿಯವರು ತಮ್ಮ ಸಂಶೋಧನಾ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ನಮಗೆ ದೀಪ ಪ್ರಜ್ವಲಿಸುವುದ್ದಕ್ಕೆ ಅವಕಾಶ ಕಲ್ಪಿಸಿ ಕೊಟ್ಟಿದ್ದಾರೆ. ಪತ್ರಕರ್ತರ ಪತ್ನಿಯರಿಗೆ ಮನ್ನಣೆ ನೀಡಿರುವುದಕ್ಕೆ ಡಾ|ದಿನೇಶ್ ಶೆಟ್ಟಿ ಅವರಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ.ಇದು ಸಮಸ್ತ ಕನ್ನಡ ಪತ್ರಕರ್ತರಿಗೆ ಸಂದ ಗೌರವವಾಗಿದೆ. ನಾವೆಲ್ಲ ಜತೆ ಸೇರಿ ಸಮಾಜವನ್ನು ಕಟ್ಟುವ ಕಾಯಕದಲ್ಲಿ ಕೈಜೋಡಿಸೋಣ ಎಂದು ಕುಂಠಿನಿ ನುಡಿದರು.
ಕುಸುಮಾ ಚಂದ್ರಶೇಖರ ಪಾಲೆತ್ತಾಡಿಯವರು ಮಾತನಾಡಿ ವಿಶಿಷ್ಟವಾಗಿ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ನಮಗೆ ವೇದಿಕೆ ಕಲ್ಪಿಸಿದ ಡಾ| ದಿನೇಶ್ ಶೆಟ್ಟಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಡಾ|ದಿನೇಶ್ ಶೆಟ್ಟಿ ಅವರಿಂದ ಮತ್ತಷ್ಟು ಕೃತಿ ಹೊರ ಬರಲಿ ಎಂದು ಹಾರೈಸಿದರು. ಶಿಕ್ಷಕಿ ಜಯಲಕ್ಷ್ಮೀ ಸುಭಾಶ್ ಶಿರಿಯಾ ಅವರು ಮಾತನಾಡಿ, ಪತ್ರಕರ್ತರ ಪರಿವಾರದವರನ್ನು ಒಟ್ಟುಗೂಡಿಸಿ ನಡೆಸಿರುವಂತಹ ಈ ಕಾರ್ಯಕ್ರಮದಲ್ಲಿ ನಮ್ಮನ್ನು ಗುರುತಿಸಿ ಗೌರವಿಸಿರುವುದಕ್ಕೆ ಕೃತಜ್ಞಳಾಗಿದ್ದೇನೆ. ಡಾ|ದಿನೇಶ್ ಶೆಟ್ಟಿ ಅವರಿಂದ ಮತ್ತಷ್ಟು ಕೃತಿಗಳು ಸಾರಸ್ವತ ಲೋಕಕ್ಕೆ ಸಲ್ಲಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕರ್ನಾಟಕಮಲ್ಲದ ಸಂಪಾದಕ ಚಂದ್ರಶೇಖರ ಪಾಲೆತ್ತಾಡಿ ಇವರ ಗೌರವ ಉಪಸ್ಥಿತಿಯಲ್ಲಿ ಹಿರಿಯ ಉಪಸಂಪಾದಕ, ಸಾಹಿತಿ ಶ್ರೀನಿವಾಸ್ ಜೋಕಟ್ಟೆ ಅವರ ಅಧ್ಯಕ್ಷತೆಯಲ್ಲಿ ಜರಗಿತು. ಮುಂಬಯಿ ಕನ್ನಡ ಪತ್ರಿಕೋದ್ಯಮ “ಅಂದು-ಇಂದು-ಮುಂದು’ ಎಂಬ ವಿಚಾರ ಸಂಕಿರಣ ಜರಗಿತು. ಛಾಯಾಕಿರಣದ ಪ್ರಕಾಶ್ ಕುಂಠಿನಿ, ಬಂಟರವಾಣಿಯ ಅಶೋಕ್ ಪಕ್ಕಳ, ಮೊಗವೀರ ಮಾಸಿಕದ ಅಶೋಕ್ ಸುವರ್ಣ, ಅಕ್ಷಯ ಮಾಸಿಕದ ಡಾ|ಈಶ್ವರ್ ಅಲೆವೂರು, ಯುವ ಪತ್ರಕರ್ತ ವಿಶ್ವನಾಥ್ ಅಮೀನ್ ನಿಡ್ಡೋಡಿ, ನೇಸರು ಮಾಸಿಕದ ಡಾ|ಜ್ಯೋತಿ ಸತೀಶ್, ನ್ಯಾಯ ವಾದಿ ಅಮಿತಾ ಭಾಗ್ವತ್, ಪತ್ರಕರ್ತ ಹರೀಶ್ ಮೂಡಬಿದ್ರಿ ಪುಣೆ ಇವರೆಲ್ಲರೂ ವಿಚಾರ ಸಂಕೀರ್ಣದಲ್ಲಿ ಪಾಲ್ಗೊಂಡು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮವನ್ನು ಪತ್ರಕರ್ತ ದಯಾಸಾಗರ್ ಚೌಟ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಟೀಂ ಐಲೇಸಾ ತಂಡದ ಸುರೇಂದ್ರ ಕುಮಾರ್ ಮಾರ್ನಾಡ್ ನಿರೂಪಣೆಯಲ್ಲಿ ವಿಜಯ್ ಶೆಟ್ಟಿ ಮೂಡು ಬೆಳ್ಳೆ,ಕಾವ್ಯ ಎನ್ ಶೆಟ್ಟಿ ಯವರಿಂದ ಸರಿಗಮ -ಸಮಾಗಮ ನಡೆಯಿತು. ಸುರೇಖಾ ದಯಾಸಾಗರ ಚೌಟ, ಮಲ್ಲಿಕಾ ನವೀನ್ ಇನ್ನ, ಪ್ರೀತಿ ರವೀಂದ್ರ ಶೆಟ್ಟಿ ಶುಭಕೋರಿದರು. ವರ್ಷಾ ದಿನೇಶ್ ಶೆಟ್ಟಿಯವರು ಅತಿಥಿಗಳನ್ನು ಗೌರವಿಸಿದರು. ವೇದಿಕೆಯಲ್ಲಿ ಪತ್ರಕರ್ತರಾದ ಚಂದ್ರಶೇಖರ ಪಾಲೆತ್ತಾಡಿ, ದಯಾಸಾಗರ್ ಚೌಟ, ಪ್ರಕಾಶ್ ಕುಂಠಿನಿ, ಸುಭಾಶ್ ಶಿರಿಯಾ ಹಾಗೂ ರವೀಂದ್ರ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕನ್ನಡ ವಿಭಾಗ ಮುಂಬಯಿ ವಿಶ್ವ ವಿದ್ಯಾಲಯದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್. ಶೆಟ್ಟಿ ನಿರೂಪಿಸಿದರು.