Advertisement

ಬರಲಿದೆ ಹೊಸ ನಿಯಮ: “ಕಾರ್ಯಕ್ರಮವಿಲ್ಲದೆ ಅನುದಾನವಿಲ್ಲ’

11:52 AM Apr 08, 2022 | Team Udayavani |

ಬೆಂಗಳೂರು: ಕಾರ್ಯಕ್ರಮಕ್ಕೆ ಅನುಮತಿ ಪಡೆದು ನಡೆಸಿದ ದಾಖಲೆ ಒದಗಿಸಿದ ಬಳಿಕವಷ್ಟೇ ಅನುದಾನ ಬಿಡುಗಡೆ ಮಾಡುವ ಮಹತ್ವದ ತೀರ್ಮಾನ ಕೈಗೊಳ್ಳಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಂದಾಗಿದೆ. ಅನುದಾನ ದುರ್ಬಳಕೆ ತಡೆಯಲು ಇಂಥ ನಿಯಮ ಜಾರಿಗೆ ನಿರ್ಧರಿಸಲಾಗಿದೆ.

Advertisement

ಈ ಹಿಂದೆ ಎಲ್ಲ ಸಂಘ ಸಂಸ್ಥೆ ಗಳಿಗೂ ಸಮಾನವಾಗಿ 2.5 ಲಕ್ಷ ರೂ. ಅನುದಾನ ಹಂಚಿಕೆ ಮಾಡುವ ತೀರ್ಮಾನ ಕೈಗೊಂಡಿದ್ದ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್‌ಕುಮಾರ್‌, ಈಗ ಸುಧಾರಣೆ ಹಾದಿಯಲ್ಲಿ ಮತ್ತೊಂದು ನಿರ್ಧಾರ ಕೈಗೊಳ್ಳಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದುರುಪಯೋಗ ಪತ್ತೆ :

ಸಾಕಷ್ಟು ಸಂಘ ಸಂಸ್ಥೆಗಳು ನಿರಂತರ ಅನುದಾನ ಪಡೆಯುತ್ತಿದ್ದು, ಉಳಿದ ಸಂಘ ಸಂಸ್ಥೆಗಳಿಗೆ ಅನುದಾನವೇ ಸಿಗದಿರುವ ಬಗ್ಗೆ ಸಚಿವರು ಗಮನಿಸಿದ್ದಾರೆ. 15-20 ವರ್ಷಗಳಿಂದ ಕೆಲವೇ ಸಂಸ್ಥೆಗಳು 5 ಲಕ್ಷದಿಂದ 70 ಲಕ್ಷ ರೂ. ದವರೆಗೆ ಅನುದಾನ ಪಡೆದಿರುವುದೂ ಬೆಳಕಿಗೆ ಬಂದಿದೆ. ಕಳೆದ 2 ವರ್ಷಗಳಲ್ಲಿ ಲಾಕ್‌ಡೌನ್‌ನಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಅವಕಾಶ ಇಲ್ಲದಿ ದ್ದರೂ ಕೆಲವು ಸಂಘಟನೆಗಳು ಕಾರ್ಯಕ್ರಮ ನಡೆಸಿ ರುವುದಾಗಿ ಫೋಟೋ, ಬಿಲ್‌ ನೀಡಿ ಅನುದಾನ ಪಡೆದಿರುವುದನ್ನು ಇಲಾಖೆ ಪತ್ತೆ ಹಚ್ಚಿದೆ.

ಕಾರ್ಯಕ್ರಮ ನಡೆಸಿದರಷ್ಟೇ ಅನುದಾನ 

Advertisement

ಹೀಗಾಗಿ ಕನ್ನಡ ಮತ್ತು ಸಂಸ್ಕೃತಿ ಹೆಸರಿನಲ್ಲಿ ಅನುದಾನ ದುರ್ಬಳಕೆ ಆಗುವುದನ್ನು ತಡೆ ಯಲು ನಿರ್ಧರಿಸಲಾಗಿದೆ. ಈ ವರ್ಷದಿಂದ ಸಂಘ ಸಂಸ್ಥೆಗಳು ಇಲಾಖೆಯ ಅನುದಾನ ಪಡೆಯಬೇಕಾದರೆ ಮೊದಲು ಕಾರ್ಯಕ್ರಮ ಮಾಡುವ ಬಗ್ಗೆ ಅನುಮತಿ ಪಡೆಯಬೇಕು. ಕಾರ್ಯಕ್ರಮದ ಖರ್ಚು ವೆಚ್ಚದ ಮಾಹಿತಿಯನ್ನು ಇಲಾಖೆಗೆ ನೀಡಬೇಕು. ಕಾರ್ಯಕ್ರಮ ನಡೆಸಿರುವ ಬಗ್ಗೆ ಭಾವಚಿತ್ರದೊಂದಿಗೆ ದಾಖಲೆ ಒದಗಿಸಿದರೆ ಮಾತ್ರ ಅನುದಾನ ಬಿಡುಗಡೆ ಮಾಡುವ ನಿಯಮ ರೂಪಿಸಲು ಚಿಂತನೆ ನಡೆದಿದೆ.

ಸತತ ಮೂರು ವರ್ಷ  ಪಡೆದವರಿಗಿಲ್ಲ ಅನುದಾನ :

ಸತತ 3 ವರ್ಷ ಇಲಾಖೆಯ ಅನುದಾನ ಪಡೆದ ಸಂಸ್ಥೆಗಳಿಗೆ 4ನೇ ವರ್ಷ ಅನುದಾನ ನೀಡದಿರುವ ಬಗ್ಗೆಯೂ ಚಿಂತನೆ ಇದೆ. ಕನ್ನಡಕ್ಕಾಗಿ ಕೆಲಸ ಮಾಡುವ ಎಲ್ಲ ಸಂಘ ಸಂಸ್ಥೆಗಳಿಗೂ ಅನುದಾನ ದೊರೆಯಬೇಕೆಂಬ ಕಾರಣಕ್ಕೆ ನಿಯಮ ಬದಲಾಯಿಸಲು ಸಚಿವರು ಆಲೋಚಿಸಿದ್ದಾರೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ. ಈ ಕುರಿತು ಸಚಿವರ ನೇತೃತ್ವದಲ್ಲಿ ಒಂದು ಸುತ್ತಿನ ಸಭೆ ನಡೆಸಿದ್ದು, ಶೀಘ್ರವೇ ಹೊಸ ನಿಯಮ ಜಾರಿಗೆ ತರಲಾಗುವುದು ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ನಿರಂತರವಾಗಿ ಅನುದಾನ ಪಡೆಯುವವರು ಸ್ವತಂತ್ರವಾಗಿ ಕಾರ್ಯಕ್ರಮ ನಡೆಸಬೇಕು. ಹೊಸ ಸಂಘ ಸಂಸ್ಥೆಗಳಿಗೆ ಪ್ರೋತ್ಸಾಹ ನೀಡಲು ಕ್ರಮ ಕೈಗೊಳ್ಳಲಿದ್ದೇವೆ. ಮೊದಲು ಕಾರ್ಯಕ್ರಮ ನಡೆಸಬೇಕು, ಅನಂತರ ಅನುದಾನ ಬಿಡುಗಡೆ ಮಾಡಲಾಗುವುದು. ವಿ. ಸುನಿಲ್‌ ಕುಮಾರ್‌,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ

-  ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next