ದಾವಣಗೆರೆ: ಏಳನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಯಥಾವತ್ತಾಗಿ ಜಾರಿ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಅಂಚೆ ಇಲಾಖೆ ನೌಕರರು ಗುರುವಾರ ಕೆಲಸ ಸ್ಥಗಿತಗೊಳಿಸಿ, ಪ್ರತಿಭಟಿಸಿದ್ದಾರೆ. ಗಡಿಯಾರಕಂಬದ ಬಳಿಯ ಪ್ರಧಾನ ಅಂಚೆ ಕಚೇರಿ ಬಳಿ ಜಮಾಯಿಸಿದ ನೌಕರರು ತಮ್ಮ ಬೇಡಿಕೆಗೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಲು ಆಗ್ರಹಿಸಿದರು.
7ನೇ ವೇತನ ಆಯೋಗವು ಆರಂಭಿಕ ವೇತನ 24 ಸಾವಿರ ರೂ. ಇರಬೇಕೆಂದು ಶಿಫಾರಸ್ಸು ಮಾಡಿದೆ. ಆದರೆ, ಕೇಂದ್ರ ಸರ್ಕಾರ 18 ಸಾವಿರ ರೂ. ಮಾತ್ರ ನೀಡುವುದಾಗಿ ಹೇಳುತ್ತಿದೆ. ಇನ್ನು ಮೂಲ ವೇತನ ಹೆಚ್ಚಳ ಆಧರಿಸಿ, ಮನೆ ಬಾಡಿಗೆ ವೆಚ್ಚ ನೀಡುವ ಪರಿಪಾಠ ಮೊದಲಿನಿಂದ ಇತ್ತು. ಆದರೆ, ಈ ಬಾರಿ ಹಳೆಯ ಬಾಡಿಗೆ ಭತ್ಯೆ ಮುಂದುವರಿಸುವ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರಿ ನೌಕರರ ವೇತನ ವಿಷಯದಲ್ಲಿ ಇದುವರೆಗೆ ಎಂದೂ ತಾರತಮ್ಯ ಆಗಿಲ್ಲ. ಈ ಬಾರಿಯ ಸರ್ಕಾರ ಈ ರೀತಿ ಮಾಡುತ್ತಿರುವುದು ಸರಿಯಲ್ಲ. ಈ ಹಿಂದೆ ಇದ್ದಂತೆಯೇ ವೇತನ ಹೆಚ್ಚಳ ಕುರಿತು ಕ್ರಮ ವಹಿಸಬೇಕು. ಹೊಸದಾಗಿ ನೌಕರಿ ಸೇರುವವರಿಗೆ ಪಿಂಚಣಿ ಸವಲತ್ತು ನೀಡಲು ಸಾಧ್ಯವಿಲ್ಲ ಎಂಬ ನೆಪವೊಡ್ಡಿ ಹೊಸ ಪಿಂಚಣಿ ಯೋಜನೆ ಜಾರಿ ಮಾಡಲಾಗಿದೆ.
ಈ ಯೋಜನೆ ಪ್ರಕಾರ ಸರ್ಕಾರ ತನ್ನ ನೌಕರರಿಗೆ ಯಾವುದೇ ಪಿಂಚಣಿ ವಂತಿಗೆ ನೀಡುವುದಿಲ್ಲ. ಬದಲಿಗೆ ನೌಕರರೇ ತಮ್ಮ ಪಿಂಚಣಿ ಮೊತ್ತ ನೀಡಬೇಕಿದೆ. ಇದರಿಂದ ನೌಕರರ ನಿವೃತ್ತಿ ನಂತರದ ಜೀವನ ಸುಗಮವಾಗಿರಲು ಸಾಧ್ಯ ಇಲ್ಲ. ಇದನ್ನು ಮನಗಂಡು ಸರ್ಕಾರ ಹಳೆ ಪಿಂಚಣಿ ಪದ್ಧತಿ ಮುಂದುವರಿಸಿಕೊಂಡು ಹೋಗಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇನ್ನು ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡುವಂತಹ ನೌಕರರನ್ನು ಖಾಯಂ ಮಾಡಿಲ್ಲ.
ಖಾಯಮಾತಿಗೆ ಆಗ್ರಹಿಸಿ, ಹಲವು ದಿನಗಳಿಂದ ನಾವು ಹೋರಾಟ ಮಾಡುತ್ತಾ ಬಂದಿದ್ದೇವೆ. ಅನೇಕ ಬಾರಿ ಮನವಿ ಸಹ ಸಲ್ಲಿಸಿದ್ದೇವೆ. ಆದರೆ, ಇದುವರೆಗೆ ಕೇಂದ್ರ ಸರ್ಕಾರ ಬೇಡಿಕೆಗೆ ಸ್ಪಂದಿಸಿಲ್ಲ. ಕೂಡಲೇ ಸರ್ಕಾರ ಈ ನೌಕರರ ಖಾಯಂಗೆ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಗ್ರಾಮೀಣ ಅಂಚೆ ನೌಕರರ ಸಂಘ, ಅಂಚೆ ನೌಕರರ ಒಕ್ಕೂಟದ ಲಿಂಗಾನಾಯ್ಕ, ಹರೀಶ್, ವೆಂಟಕರಾಮಯ್ಯ, ಟಿ. ಮುಕುಂದ ನೇತೃತ್ವ ವಹಿಸಿದ್ದರು.