ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ದಟ್ಟ ಮಂಜು ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ಹಾಗೂ ಮಂಗಳವಾರ ಬೆಳಗ್ಗೆ ವಿಮಾನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.
ಸೋಮವಾರ ರಾತ್ರಿ ಮಂಜು ಹಿನ್ನೆಲೆಯಲ್ಲಿ ಆಲ್‌ವುತ್ತೂಮ್ ವಿಮಾನನಿಲ್ದಾಣಕ್ಕೆ (ದುಬಾೖ) ರಾತ್ರಿ 11.35ಕ್ಕೆ ತೆರಳಬೇಕಾಗಿದ್ದ ವಿಮಾನದ ವೇಳಾಪಟ್ಟಿ ಮಂಗಳವಾರ ಬೆಳಗ್ಗೆ 6.15ಕ್ಕೆ ಮರು ನಿಗದಿಗೊಂಡಿತ್ತು. ಆದರೆ ಬೆಳಗ್ಗೆಯೂ ಮಂಜು ಇದ್ದ ಕಾರಣ ಬೆಳಗ್ಗೆ 8.20 ಕ್ಕೆ ನಿರ್ಗಮಿಸಿತು.
ಬೆಂಗಳೂರಿನಿಂದ ಬೆಳಗ್ಗೆ 7ಕ್ಕೆ ಬರಬೇಕಾಗಿದ್ದ ವಿಮಾನ ವಿಳಂಬವಾಗಿ 9.05ಕ್ಕೆ ಆಗಮಿಸಿತು. ಇದೇ ವಿಮಾನ 7.55ಕ್ಕೆ ಮುಂಬಯಿಗೆ ನಿರ್ಗಮಿಸಬೇಕಾಗಿತ್ತು. ಆದರೆ ಬೆಂಗಳೂರಿನಿಂದ ಬರುವಾಗ ತಡವಾದ ಕಾರಣ 10ಕ್ಕೆ ಮುಂಬಯಿಗೆ ನಿರ್ಗಮಿಸಿತು.
ಆಲ್‌ವುತ್ತೂಮ್ ವಿಮಾನನಿಲ್ದಾಣದಿಂದ (ದುಬಾೖ) ಬೆಳಗ್ಗೆ 6ಕ್ಕೆ ಆಗಮಿಸಬೇಕಾಗಿದ್ದ ವಿಮಾನ ಮಂಜು ಹಿನ್ನೆಲೆಯಲ್ಲಿ ಕಣ್ಣೂರು ವಿಮಾನ ನಿಲ್ದಾಣಕ್ಕೆ ತೆರಳಿ ಬಳಿಕ 9.23ಕ್ಕೆ ಮರಳಿ ಮಂಗಳೂರಿಗೆ ಆಗಮಿಸಿತು.