Advertisement

ಪುತ್ತೂರು: ಪ್ರಾ.ಆ.ಕೇಂದ್ರ ವ್ಯಾಪ್ತಿಯಲ್ಲಿ ಕಾಣಿಸಿಕೊಂಡ ಡೆಂಗ್ಯೂ

02:40 AM Jul 08, 2017 | Karthik A |

ವಿಶೇಷ ವರದಿ

Advertisement

ಪುತ್ತೂರು: ತಾಲೂಕಿನಲ್ಲಿ ಮಳೆ ಪ್ರಮಾಣ ಏರುತ್ತಿರುವುದರ ಬೆನ್ನಿಗೇ ಸಾಂಕ್ರಾಮಿಕ ಜ್ವರ ಪ್ರಕರಣದಲ್ಲೂ ಏರಿಕೆಯಾಗುತ್ತಿರುವುದು ಆತಂಕ ಸೃಷ್ಟಿಸಿದೆ.ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ತಪಾಸಣೆಗೆ ಬರುವವರ ಸಂಖ್ಯೆ ಹೆಚ್ಚುತ್ತಿದೆ. ಆರೋಗ್ಯ ಇಲಾಖೆ ಅಧಿಕೃತ ಮಾಹಿತಿ ಪ್ರಕಾರ, ಸರಕಾರಿ ಆರೋಗ್ಯ ಕೇಂದ್ರದಲ್ಲಿ ಜೂನ್‌ನಿಂದ ಜುಲೈ ಮೊದಲ ವಾರದ ತನಕ 1, 500ಕ್ಕೂ ಅಧಿಕ ಜ್ವರ ಪ್ರಕರಣಗಳು ದಾಖಲಾಗಿವೆ.

ಈ ಅಂಕಿ – ಅಂಶದಲ್ಲಿ ಸರಕಾರಿ ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಲೆಕ್ಕಾಚಾರವನ್ನು ಒಳಗೊಂಡಿದ್ದು, ತಾಲೂಕಿನ ಖಾಸಗಿ ಆಸ್ಪತ್ರೆ ಹಾಗೂ ಹೊರ ತಾಲೂಕಿನ ಆಸ್ಪತ್ರೆಗಳಲ್ಲಿ ದಾಖಲಾದವರ ಸಂಖ್ಯೆ ಪ್ರತ್ಯೇಕವಾಗಿದೆ. ಹಾಗಾಗಿ ಜ್ವರ ಪ್ರಕರಣದ ಒಟ್ಟು ಸಂಖ್ಯೆ ದುಪ್ಪಟ್ಟಾಗಲಿದೆ. ಸುಮಾರು 2,500ಕ್ಕೂ ಮಿಕ್ಕಿ ಜನರು ಜ್ವರ ಬಾಧೆಗೆ ಒಳಗಾಗಿರಬಹುದೆಂದು ಶಂಕಿಸಲಾಗಿದೆ.

ತಾಲೂಕು ಆಸ್ಪತ್ರೆ ವಿವರ
ಪುತ್ತೂರು ತಾಲೂಕು ಆಸ್ಪತ್ರೆಯಲ್ಲಿ 1,005 ಜ್ವರ ಪ್ರಕರಣ ಪತ್ತೆಯಾಗಿದೆ. 462 ಮಂದಿಗೆ ಮಲೇರಿಯ ತಪಾಸಣೆ ನಡೆದಿದ್ದು, ಇದರಲ್ಲಿ 8 ಪ್ರಕರಣ ದೃಢಪಟ್ಟಿದೆ. 545 ಮಂದಿಗೆ ಡೆಂಗ್ಯೂ ತಪಾಸಣೆ ನಡೆದಿದ್ದು, ಯಾವುದೇ ಪ್ರಕರಣ ದೃಢಪಟ್ಟಿಲ್ಲ. ಟೈಫಾಯಿಡ್‌ ಜ್ವರ ಸಂಬಂಧಿಸಿ 135 ಮಂದಿಯಲ್ಲಿ 2 ಪ್ರಕರಣ ದೃಢಪಟ್ಟಿದೆ. ಇಲ್ಲಿ ಈ ತನಕ ಇಲಿಜ್ವರ ಪ್ರಕರಣ ಪತ್ತೆಯಾಗಿಲ್ಲ.

ಪ್ರಾ. ಆ. ಕೇಂದ್ರ
ಹನ್ನೆರಡು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 64 ಡೆಂಗ್ಯೂ, 27 ಇಲಿ ಜ್ವರ, ಮಲೇರಿಯಾ-17 ಪ್ರಕರಣ ಪತ್ತೆಯಾಗಿವೆ. ಈಶ್ವರಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡೆಂಗ್ಯೂ- 3, ಇಲಿಜ್ವರ-1, ಕಡಬ ಸಮುದಾಯ ಕೇಂದ್ರದಲ್ಲಿ ಡೆಂಗ್ಯೂ- 25, ಮಲೇರಿಯ-1, ಕಾಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡೆಂಗ್ಯೂ- 5, ಇಲಿ ಜ್ವರ-3, ಕೊçಲ ಆರೋಗ್ಯ ಕೇಂದ್ರದಲ್ಲಿ ಡೆಂಗ್ಯೂ-2, ಇಲಿ ಜ್ವರ-1, ಕೊಳ್ತಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಲಿ ಜ್ವರ-3. ನೆಲ್ಯಾಡಿ ಆರೋಗ್ಯ ಕೇಂದ್ರದಲ್ಲಿ ಡೆಂಗ್ಯೂ-9, ಮಲೇರಿಯಾ – 2, ಪಾಣಾಜೆ ಆರೋಗ್ಯ ಕೇಂದ್ರದಲ್ಲಿ ಡೆಂಗ್ಯೂ – 2, ಇಲಿಜ್ವರ-4, ಸರ್ವೆ ಆರೋಗ್ಯ ಕೇಂದ್ರದಲ್ಲಿ ಡೆಂಗ್ಯೂ-1, ಇಲಿಜ್ವರ-1, ಶಿರಾಡಿ ಆರೋಗ್ಯ ಕೇಂದ್ರದಲ್ಲಿ ಡೆಂಗ್ಯೂ – 4, ಇಲಿಜ್ವರ-2, ತಿಂಗಳಾಡಿ ಆರೋಗ್ಯ ಕೇಂದ್ರ ದಲ್ಲಿ ಡೆಂಗ್ಯೂ-6, ಇಲಿಜ್ವರ-2, ಮಲೇರಿಯಾ-2, ಉಪ್ಪಿನಂಗಡಿ ಸಮುದಾಯ ಕೇಂದ್ರದಲ್ಲಿ ಡೆಂಗ್ಯೂ-3, ಇಲಿಜ್ವರ -4, ಮಲೇರಿಯಾ-3 ಪ್ರಕರಣ ವರದಿಯಾಗಿವೆ.

Advertisement

ಹೆಚ್ಚಿದ ಸೊಳ್ಳೆ ಕಾಟ
ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಸೊಳ್ಳೆ ಕಾಟವೂ ಆರಂಭಗೊಂಡಿದೆ. ಮಳೆ ನೀರಿನ ಶೇಖರಣೆಯ ಸ್ಥಳ, ಅಡಿಕೆ, ರಬ್ಬರ್‌ ಸೇರಿದಂತೆ ಕೃಷಿ ತೋಟಗಳಲ್ಲಿ ಸೊಳ್ಳೆ ವಿಪರೀತ ಪ್ರಮಾಣದಲ್ಲಿ ಕಾಣಿಸಿಕೊಂಡಿದೆ. ಮನೆ ಪರಿಸರದಲ್ಲಿ ರಾತ್ರಿ ವೇಳೆ ಸೊಳ್ಳೆ ಕಾಟ ಹೆಚ್ಚಾಗಿದೆ. 

ಜಾಗೃತಿ ಇರಲಿ ಸರ್ವರಲಿ
– ಮನೆ ಸುತ್ತಮುತ್ತ ಸ್ವಚ್ಛವಾಗಿಟ್ಟುಕೊಳ್ಳಬೇಕು.

– ಹೆಚ್ಚು ಕಾಲದಿಂದ ನೀರು ನಿಂತಿದ್ದರೆ, ತೆರವುಗೊಳಿಸಿ. 

– ಹೊಂಡಗಳಲ್ಲಿ ನೀರಿದ್ದರೆ, ಮಣ್ಣು ತುಂಬಿ ನೀರು ನಿಲ್ಲದಂತೆ ನೋಡಿಕೊಳ್ಳಿ.

– ಸೊಳ್ಳೆ ಉತ್ಪತ್ತಿ ತಾಣಗಳನ್ನು ಹುಡುಕಿ ನಾಶ ಮಾಡಿ.

– ಕೃಷಿ ತೋಟದಲ್ಲೂ ಸೊಳ್ಳೆಗಳ ಉತ್ತತ್ತಿ ತಾಣಗಳಿದ್ದರೆ (ಅಡಿಕೆ ಹಾಳೆಯಲ್ಲಿನ ನೀರು ಇತ್ಯಾದಿ) ನಾಶಪಡಿಸಿ.

– ರಾತ್ರಿ ಹೊತ್ತು ಸೊಳ್ಳೆ ಕಾಟದಿಂದ ಪಾರಾಗಲು ಸೊಳ್ಳೆ ಪರದೆಯಂಥ ರಕ್ಷಣಾ ಕ್ರಮ ಅನುಸರಿಸಿ.

– ಒಂದುವೇಳೆ ಜ್ವರದ ಸೂಚನೆ ಸಿಕ್ಕರೆ ಸ್ವಯಂ ಚಿಕಿತ್ಸೆಗೆ ಒಳಗಾಗದೇ, ಹತ್ತಿರದ ಆಸ್ಪತ್ರೆಗೆ ಹೋಗಿ ವೈದ್ಯರಿಂದ ತಪಾಸಣೆ ಮಾಡಿಸಿಕೊಳ್ಳಿ.

– ಅಗತ್ಯ ಬಿದ್ದರೆ ರಕ್ತ ತಪಾಸಣೆ ಮಾಡಿಸಿ.

Advertisement

Udayavani is now on Telegram. Click here to join our channel and stay updated with the latest news.

Next