Advertisement

ಮತ್ತೆ ಆತಂಕ ಹುಟ್ಟಿಸಿದೆ ಡೆಂಗ್ಯೂ!

09:51 AM May 13, 2022 | Team Udayavani |

ಮಹಾನಗರ: ಕೆಲವು ದಿನಗಳಿಂದ ನಗರದಲ್ಲಿ ಬಿಟ್ಟು ಬಿಟ್ಟು ಮಳೆಯಾಗು ತ್ತಿರುವ ಜತೆಗೆ ನೆರೆಯ ಉಡುಪಿ, ಕಾಸರಗೋಡು ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣ ಏರಿಕೆಯಾಗುತ್ತಿರುವುದು ಮಂಗಳೂರಿನಲ್ಲಿ ಡೆಂಗ್ಯೂ ಆತಂಕವನ್ನು ಮತ್ತೆ ಹೆಚ್ಚಳ ಮಾಡಿದೆ.

Advertisement

ಜೋರಾಗಿ ಮಳೆ ಸುರಿದು ಒಂದೆರಡು ದಿನ ಬಿಸಿಲೇ ಇದ್ದರೆ, ಮಳೆಯ ಹನಿಯ ಮೂಲಕ ಡೆಂಗ್ಯೂ ಸೊಳ್ಳೆ ಉತ್ಪತ್ತಿಗೆ ಕಾರಣವಾಗುತ್ತದೆ. ನಗರದಲ್ಲಿ ಕಳೆದ ಕೆಲವು ದಿನಗಳಿಂದ ಇಂತಹದೇ ವಾತಾವರಣ ಇರುವುದು ಡೆಂಗ್ಯೂ ಆತಂಕಕ್ಕೆ ಕಾರಣವಾಗಿದೆ. ಇನ್ನು, ಉಡುಪಿ ಮತ್ತು ಕಾಸರಗೋಡು ಜಿಲ್ಲೆಯಲ್ಲಿಯೂ ಡೆಂಗ್ಯೂ ಪ್ರಕರಣ ದಿನದಿಂದ ದಿನಕ್ಕೆ ಏರಿಕೆ ಯಾಗುತ್ತಿರುವುದು ಮಂಗಳೂರಿಗೆ ತಲೆನೋವು ಸೃಷ್ಟಿಸಿದೆ.

ದ.ಕ. ಜಿಲ್ಲೆಯಲ್ಲಿ 4 ತಿಂಗಳುಗಳಲ್ಲಿ 47 ಡೆಂಗ್ಯೂ ಪ್ರಕರಣ ಕಂಡು ಬಂದಿದ್ದು, ಅದರಲ್ಲಿ 19 ಪ್ರಕರಣ ಪಾಲಿಕೆ ವ್ಯಾಪ್ತಿಯದ್ದು. ಡೆಂಗ್ಯೂ ನಿಯಂತ್ರಣದ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ವಿಶೇಷ ಮುತುವರ್ಜಿ ವಹಿಸಲು ಮುಂದಾ ಗಿದೆ. ಸದ್ಯ ಪಾಲಿಕೆ ವ್ಯಾಪ್ತಿ ಸಹಿತ, ಜಿಲ್ಲೆಗಳಲ್ಲಿ ಮನೆ ಮನೆ ಸರ್ವೇ ನಡೆಸಲು ನಿರ್ಧರಿಸಲಾಗಿದೆ. ಆಶಾ ಕಾರ್ಯಕರ್ತೆಯರು, ಮಲೇರಿಯಾ ನಿಯಂತ್ರಣಾ ಕಾರ್ಯಕರ್ತರು, ಆರೋಗ್ಯ ಸುರಕ್ಷತಾ ಅಧಿಕಾರಿಗಳು, ಪಾಲಿಕೆ ವ್ಯಾಪ್ತಿಯಲ್ಲಿ ಎಂಪಿ ಡಬ್ಲ್ಯು ಕಾರ್ಯಕರ್ತರು ಮನೆ ಮನೆ ಭೇಟಿ ನೀಡಿ ಈಡೀಸ್‌ ಸೊಳ್ಳೆ ಉತ್ಪಾದನ ತಾಣಗಳನ್ನು ಗುರುತಿಸಿ, ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಮಾಹಿತಿ ನೀಡುತ್ತಿದ್ದಾರೆ.

ರೋಗ ಲಕ್ಷಣಗಳೇನು?

ಡೆಂಗ್ಯೂ ಜ್ವರ ಉಂಟಾದ ತತ್‌ಕ್ಷಣ ಮಕ್ಕಳು ಅಥವಾ ದೊಡ್ಡವರಲ್ಲಿ ರೋಗ ಲಕ್ಷಣ ಹೆಚ್ಚಾಗಿ ಕಂಡುಬರುವುದಿಲ್ಲ. ಆದರೆ ದಿನ ಕಳೆದಂತೆ ನಾಲ್ಕರಿಂದ ಏಳು ದಿನಗಳ ಬಳಿಕ ಒಂದೊಂದು ಲಕ್ಷಣ ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ತಲೆನೋವು, ಮೈ ಕೈ ನೋವು, ಕೀಲು ನೋವು, ವಾಕರಿಕೆ, ವಾತ, ಕಣ್ಣುಗಳ ಹಿಂಭಾಗ ನೋವು, ದೇಹದ ಅಲ್ಲಲ್ಲಿ ಕಲೆಗಳು ಕಾಣಿಸಿಕೊಳ್ಳುತ್ತದೆ.

Advertisement

ಸಾರ್ವಜನಿಕರು ಕುದಿಸಿ ಆರಿಸಿದ ಉಗುರು ಬೆಚ್ಚಗಿನ ನೀರನ್ನೇ ಕುಡಿಯ ಬೇಕು. ಸ್ನಾನಕ್ಕೂ ಬಿಸಿನೀರನ್ನು ಉಪಯೋಗಿಸಬೇಕು. ತಲೆ ಮೇಲೆ ನೀರು ಹಾಕಿ ಕೊಂಡಾಗ ಶೀತ ಅಧಿಕ ವಾಗಿ ಜ್ವರ, ತಲೆನೋವು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಜ್ವರ ಕಡಿಮೆಯಾಗುವವರೆಗೆ ತಲೆ ಸ್ನಾನ ಮಾಡದಿರುವುದೇ ಉತ್ತಮ ಎನ್ನುತ್ತಾರೆ ವೈದ್ಯರು.

ವಿಶೇಷ ನಿಗಾ ನಗರದಲ್ಲಿ ಕೆಲವು ದಿನಗಳಿಂದ ಬಿಟ್ಟು ಬಿಟ್ಟು ಮಳೆಯಾಗಿದ್ದು, ಜಿಲ್ಲೆಯಲ್ಲಿ ಡೆಂಗ್ಯೂ ಆತಂಕಕ್ಕೆ ಕಾರಣವಾಗಿದೆ. ನಾಲ್ಕು ತಿಂಗಳುಗಳಲ್ಲಿ ಜಿಲ್ಲೆಯಲ್ಲಿ 47 ಡೆಂಗ್ಯೂ ಪ್ರಕರಣ ಕಂಡುಬಂದಿದ್ದು, ಅದರಲ್ಲಿ 19 ಪ್ರಕರಣ ಪಾಲಿಕೆ ವ್ಯಾಪ್ತಿಯದ್ದು. ಜನ ಸ್ವಯಂ ಮುನ್ನೆಚ್ಚರಿಕೆ ವಹಿಸಬೇಕು. ಹಾಗಿದ್ದರೆ ಮಾತ್ರ ರೋಗ ನಿಯಂತ್ರಣ ಸಾಧ್ಯ. -ಡಾ| ನವೀನ್‌ಚಂದ್ರ ಕುಲಾಲ್‌, ಜಿಲ್ಲಾ ರೋಹವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next