ಮುಂಬಯಿ: ರಾಜ್ಯ ಖಾತೆ ಸಚಿವ ಸ್ಥಾನ ಬೇಡ ಎಂದು ಮಹಾರಾಷ್ಟ್ರದ ಎನ್ ಡಿಎ ಮಿತ್ರ ಪಕ್ಷ ಎನ್ ಸಿಪಿ(ಅಜಿತ್ ಪವಾರ್)ಬಣ ಹೇಳಿದೆ.
ಎನ್‌ಸಿಪಿ(ಅಜಿತ್ ಪವಾರ್ ಬಣ) ಹಿರಿಯ ನಾಯಕ, ರಾಜ್ಯ ಸಭಾ ಸದಸ್ಯ ಪ್ರಫುಲ್ ಪಟೇಲ್ ಮಾತನಾಡಿ ‘ನಮ್ಮ ಪಕ್ಷಕ್ಕೆ ಸ್ವತಂತ್ರ ಉಸ್ತುವಾರಿ ಹೊಂದಿರುವ ರಾಜ್ಯ ಖಾತೆ ನೀಡಲಾಗುತ್ತದೆ ಎಂದು ನಿನ್ನೆ ರಾತ್ರಿ ನಮಗೆ ತಿಳಿಸಲಾಯಿತು.ನಾನು ಈ ಹಿಂದೆ ಕೇಂದ್ರ ಸರಕಾರದಲ್ಲಿ ಕ್ಯಾಬಿನೆಟ್ ಸಚಿವನಾಗಿದ್ದೆ, ಆದ್ದರಿಂದ ಇದು ನನಗೆ ಹಿಂಬಡ್ತಿ ನೀಡಿದಂತಾಗುತ್ತದೆ ಎಂದು ನಾವು ಬಿಜೆಪಿ ನಾಯಕತ್ವಕ್ಕೆ ತಿಳಿಸಿದ್ದೇವೆ. ಈಗಾಗಲೇ ನಮಗೆ ಕೆಲವು ದಿನ ಕಾಯಲು ಹೇಳಿದ್ದಾರೆ, ಅವರು ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ’ ಎಂದು ಪ್ರಧಾನಿ ಮೋದಿ ಮತ್ತು ಸಚಿವರು ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ಮುನ್ನ ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, “ಎನ್‌ಸಿಪಿ(ಅಜಿತ್ ಪವಾರ್ ಬಣ) ಪಕ್ಷಕ್ಕೆ ಸ್ವತಂತ್ರ ಉಸ್ತುವಾರಿ ರಾಜ್ಯ ಖಾತೆ ಒಂದು ಸ್ಥಾನವನ್ನು ನೀಡಲಾಗಿದೆ. ಆದರೆ ಅವರು ಕ್ಯಾಬಿನೆಟ್ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿ ಅವರ ಕಡೆಯಿಂದ ಪ್ರಫುಲ್ ಪಟೇಲ್ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಪಟೇಲ್ ಅವರು ಈಗಾಗಲೇ ಸಚಿವರಾಗಿದ್ದವರು, ಆದ್ದರಿಂದ, ಅವರು ರಾಜ್ಯ ಖಾತೆ ವಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ’ ಎಂದು ಹೇಳಿದರು.
‘ ಮೈತ್ರಿಕೂಟದೊಂದಿಗೆ ಸರಕಾರ ರಚನೆಯಾದಾಗ ಕೆಲವು ಮಾನದಂಡಗಳನ್ನು ಹೊಂದಿರಬೇಕು. ಆದರೆ ಒಂದು ಪಕ್ಷಕ್ಕಾಗಿ ಮಾನದಂಡಗಳನ್ನು ಬದಲಾಗಿಸುವುದಿಲ್ಲ. ಸಂಪುಟ ಯಾವಾಗ ವಿಸ್ತರಣೆ ಆಗುತ್ತದೋ ಆ ಸಮಯದಲ್ಲಿ ಅವರ ನೆನಪಾಗುತ್ತದೆ’ ಎಂದು ಹೇಳಿದರು.
ಮಹಾರಾಷ್ಟ್ರದ ರಾಯಗಢದ ಲೋಕಸಭಾ ಕ್ಷೇತ್ರದಿಂದ ಸುನಿಲ್ ತಟ್ಕರೆ ಅವರು ಎನ್‌ಸಿಪಿ(ಅಜಿತ್ ಪವಾರ್ ಬಣ)ದಿಂದ ಆಯ್ಕೆಯಾದ ಏಕೈಕ ಸಂಸದರಾಗಿದ್ದಾರೆ.