Advertisement

ರಾಜ್ಯಪಾಲರ ಅನುಮೋದನೆಗೆ ಆಗ್ರಹಿಸಿ ದಸಂಸ ಪ್ರತಿಭಟನೆ

12:47 PM Sep 16, 2017 | Team Udayavani |

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರ ಮುಂಬಡ್ತಿ ಸಂಬಂಧ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆಗೆ ರಾಜ್ಯಪಾಲರು ತಕ್ಷಣ ಅನುಮೋದನೆ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಶುಕ್ರವಾರ ನೂರಾರು ಕಾರ್ಯಕರ್ತರು ನಗರದ ಮೌರ್ಯವೃತ್ತದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು. 

Advertisement

ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರ ಹಿತಕ್ಕಾಗಿ ಮುಂಬಡ್ತಿ ಸಂಬಂಧ ಸುಗ್ರೀವಾಜ್ಞೆ ಹೊರಡಿಸಿ, ಇದರ ಅನುಮೋದನೆಗೆ ರಾಜ್ಯಪಾಲರಿಗೆ ಕಳಿಸಿತ್ತು. ಆದರೆ, ರಾಜ್ಯಪಾಲರು ಕೆಲವು ವಿವರಣೆಗಳನ್ನು ಕೇಳಿ ವಾಪಸ್‌ ಕಳುಹಿಸಿದ್ದಾರೆ. ಇದು ದುರದೃಷ್ಟಕರವಾಗಿದ್ದು, ಕೂಡಲೇ ಇದಕ್ಕೆ ಅನುಮೋದನೆ ನೀಡಬೇಕು ಎಂದು ಒತ್ತಾಯಿಸಿದರು. 

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಮಂಗ್ಳೂರು ವಿಜಯ್‌, ಮುಂಬಡ್ತಿ ಮಾತ್ರವಲ್ಲ; ಸರ್ಕಾರ ದಲಿತ ಗುತ್ತಿಗೆದಾರರಿಗೆ ಎಲ್ಲ ಟೆಂಡರ್‌ಗಳಲ್ಲಿ 50 ಲಕ್ಷ ರೂ.ವರೆಗೆ ಮೀಸಲಾತಿ ನೀಡಲು ತೀರ್ಮಾನಿಸಿ ಆದೇಶ ಹೊರಡಿಸಿ, ಗುತ್ತಿಗೆಯಲ್ಲಿನ ಮೀಸಲಾತಿ ಆಜ್ಞೆಯ ಸುಗ್ರೀವಾಜ್ಞೆಯನ್ನು ರಾಜ್ಯಪಾಲರಿಗೆ ಕಳುಹಿಸಿದೆ. ಆದರೆ, ಅದನ್ನು ರಾಷ್ಟ್ರಪತಿಗಳಿಗೆ ಕಳುಹಿಸುವ ಮೂಲಕ ದಲಿತ ವಿರೋಧಿ ಧೋರಣೆ ಅನುಸರಿಸಿದ್ದಾರೆ ಎಂದು ಆರೋಪಿಸಿದರು.

ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಲಕ್ಷ್ಮೀ ನಾರಾಯಣ ನಾಗವಾರ ಮಾತನಾಡಿ, ಬಿಜೆಪಿಯು ದಲಿತರನ್ನು ಓಲೈಸಲು ದಲಿತರ ಮನೆಗಳಿಗೆ ತೆರಳಿ ಊಟ ಮಾಡುತ್ತಾರೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಜನ್ಮದಿನಾಚರಣೆ ಆಚರಿಸುತ್ತಾರೆ. ಆದರೆ, ಮತ್ತೂಂದೆಡೆ ದಲಿತ ವಿರೋಧಿ ನಿಲುವುಗಳನ್ನು ಅನುಸರಿಸುತ್ತಿರುವ ರಾಜ್ಯಪಾಲರ ಧೋರಣೆಗೆ ಮೌನ ವಹಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಸರ್ಕಾರ ಕೈಗೊಂಡಿದ್ದ ಮುಂಬಡ್ತಿ ಸುಗ್ರೀವಾಜ್ಞೆ ವಾಪಸ್‌ ಕಳುಹಿಸಿರುವ ರಾಜ್ಯಪಾಲರು, ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಆದರೆ, ಹೀಗೆ ಕೇಳಿರುವ ಪ್ರಶ್ನೆಗಳಲ್ಲಿ ಯಾವುದೇ ಅರ್ಥಗಳಿಲ್ಲ. ಸುಗ್ರೀವಾಜ್ಞೆಯ ಅಗತ್ಯತೆ ಬಗ್ಗೆ ಪ್ರಶ್ನಿಸಿರುವ ರಾಜ್ಯಪಾಲರು ಸಂವಿಧಾನಿಕ ಸವಲತ್ತುಗಳು ನಾಶವಾಗುತ್ತಿರುವ ಬಗ್ಗೆ ಯಾವತ್ತೂ ಮಾತನಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Advertisement

ರಾಜ್ಯಪಾಲರು ತಕ್ಷಣ ಎಸ್ಸಿ-ಎಸ್ಟಿ ನೌಕರರ ಮುಂಬಡ್ತಿ ಸಂಬಂಧ ರಾಜ್ಯ ಸರ್ಕಾರದ ಸುಗ್ರೀವಾಜ್ಞೆಗೆ ಅನುಮೋದನೆ ನೀಡಬೇಕು. ಇಲ್ಲದಿದ್ದರೆ, ರಾಜ್ಯಾದ್ಯಂತ ಬೃಹತ್‌ ಹೋರಾಟ ನಡೆಸಲಾಗುವುದು ಎಂದು ಲಕ್ಷ್ಮೀ ನಾರಾಯಣ ನಾಗವಾರ ಎಚ್ಚರಿಕೆ ನೀಡಿದರು. ಧರಣಿಯಲ್ಲಿ ದೇವರಾಜ ಅರಸು ಸಂಶೋಧನ ಕೇಂದ್ರದ ನಿರ್ದೇಶಕ ಪ್ರೊ.ಎನ್‌.ವಿ.ನರಸಿಂಹಯ್ಯ, ದಲಿತ ಮುಖಂಡರಾದ ಜೀವನಹಳ್ಳಿ ಆರ್‌.ವೆಂಕಟೇಶ್‌, ಕಲ್ಲಪ್ಪ ಕಾಂಬಳೆ, ಕೆಂಪಣ್ಣ ಸಾಗ್ಯ, ತರೀಕೆರೆ ನಾಗರಾಜ್‌ ಮತ್ತಿತರರು ಭಾಗವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next