ಮೈಸೂರು: ಮೈಸೂರು ವಿಶ್ವವಿದ್ಯಾನಿಲಯ ಸಿಬಿಸಿಎಸ್ ಪದ್ಧತಿ ಜಾರಿಗೆ ತಂದಿರುವುದರಿಂದ ಫಲಿತಾಂಶದಲ್ಲಿ ಉಂಟಾಗಿರುವ ದೋಷಗಳನ್ನು ಸರಿಪಡಿಸಿ ಫಲಿತಾಂಶ ಮತ್ತೆ ಪ್ರಕಟಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಎಐಡಿಎಸ್‌ಒ, ಎಐಡಿವೈಒ ಸಂಘಟನೆಗಳವತಿಯಿಂದ ವಿವಿಯ ಕಾರ್ಯಸೌಧ ಕ್ರಾಫರ್ಡ್ ಭವನದ ಎದುರು ಪ್ರತಿಭಟನೆ ನಡೆಸಲಾಯಿತು.
ಮೈಸೂರು ವಿವಿ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಅವೈಜ್ಞಾನಿಕವಾದ ಸಿಬಿಸಿಎಸ್ ಶೈಕ್ಷಣಿಕ ಪದ್ಧತಿಯನ್ನು ಯಾವುದೇ ಪೂರ್ವ ಸಿದ್ಧತೆಯಿಲ್ಲದೆ ಜಾರಿಗೆ ತಂದಿದೆ. ಇದರಿಂದ ವಿದ್ಯಾರ್ಥಿಗಳಿಗೆ ಗೊಂದಲ ಸೃಷ್ಟಿಯಾಗಿದೆ. ಈ ಪದ್ಧತಿಯ ಬಗ್ಗೆ ವಿದ್ಯಾರ್ಥಿಗಳು, ಅಧ್ಯಾಪಕರು ಅಥವಾ ಇದನ್ನು ಜಾರಿಗೆ ತಂದಿರುವ ವಿಶ್ವವಿದ್ಯಾನಿಲಯದ ಅಧಿಕಾರಿಗಳಿಗಾಗಲಿ ಸ್ಪಷ್ಟತೆ ಇಲ್ಲ ಎಂದು ಪ್ರತಿಭಟನಾಕಾರರು ದೂರಿದರು.
ಸಿಬಿಸಿಎಸ್ ಪದ್ಧತಿ ಜಾರಿಗೆ ವಿಶ್ವವಿದ್ಯಾನಿಲಯ, ಶೈಕ್ಷಣಿಕ ತಜ್ಞರಿರುವ ಶಿಕ್ಷಣ ಮಂಡಳಿ ಮತ್ತು ಸಿಂಡಿಕೇಟ್ ಸಭೆಯ ಅನುಮೋದನೆಯನ್ನೇ ಪಡೆದಿಲ್ಲ. ಶಿಕ್ಷಣ ತಜ್ಞರು, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು, ಪೋಷಕರ ಅಭಿಪ್ರಾಯ ಪಡೆಯದೇ ಹೊಸ ಪದ್ಧತಿ ಜಾರಿಗೊಳಿಸಿದೆ. ವಿದ್ಯಾರ್ಥಿಗಳು ಉತ್ತೀರ್ಣರಾಗಲು ಗಳಿಸಬೇಕಾದ ಕನಿಷ್ಠ ಅಂಕ, ಉತ್ತೀರ್ಣನಾಗಲು ವಿದ್ಯಾರ್ಥಿಗೆ ಇರುವ ಅವಕಾಶಗಳು,
ಪರೀಕ್ಷಾ ನೋಂದಣಿ ವಿಧಾನ ಇತ್ಯಾದಿ ಮೂಲ ಅಂಶಗಳೊಂದಿಗೆ ಈ ಪದ್ಧತಿಯನ್ನು ಜಾರಿಗೊಳಿಸಬೇಕಾದ ವಿಶ್ವವಿದ್ಯಾನಿಲಯದ ಹಿರಿಯ ಅಧಿಕಾರಿಗಳಲ್ಲೇ ಗೊಂದಲವಿದೆ. ಹೀಗಾಗಿ ಸಿಬಿಸಿಎಸ್ ಜಾರಿಯಿಂದ ಫಲಿತಾಂಶದಲ್ಲಾಗಿರುವ ದೋಷಗಳನ್ನು ಸರಿಪಡಿಸಿ ಮರು ಫಲಿತಾಂಶ ನೀಡಬೇಕು, ಯಾವುದೇ ಪೂರ್ವಸಿದ್ಧತೆಯಿಲ್ಲದೇ ತರಾತುರಿಯಲ್ಲಿ ಜಾರಿಗೆ ತಂದಿರುವ ಸಿಬಿಸಿಎಸ್ ಪದ್ಧತಿಯನ್ನು ಕೈಬಿಡಬೇಕು, ಮರುಮೌಲ್ಯಮಾಪನದ ದುಬಾರಿ ಶುಲ್ಕ ಇಳಿಸಬೇಕು ಎಂದರು.
ಪ್ರತಿಭಟನೆಯಲ್ಲಿ ವಿದ್ಯಾರ್ಥಿ ಸಂಘಟನೆಗಳ ಮುಖಂಡರಾದ ಎಂ.ಉಮಾದೇವಿ, ಹರೀಶ್ ಎಸ್.ಎಚ್, ಸುನೀಲ್, ಸುಮ, ಕಲಾವತಿ, ಅನಿಲ್, ಆಕಾಶ್‌ಕುಮಾರ್, ಚಂದ್ರಕಲಾ, ಆಸಿಯಾ ಬೇಗಂ, ಸೌಮ್ಯ ಕೇಶವ್, ಮಂಜು, ಮಹೇಂದ್ರ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.