Advertisement

ಪ್ರಜಾಪ್ರಭುತ್ವ ಮೌಲ್ಯ ಬಿತ್ತುವ ಸಾಹಿತ್ಯಕ್ಕೆ ಸಾವಿಲ್ಲ

01:23 PM Oct 07, 2017 | |

ಬಸವಕಲ್ಯಾಣ: ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಿತ್ತುವ, ಸಾಂವಿಧಾನಿಕ ತತ್ವಗಳನ್ನು ನಿರೂಪಿಸುವ ಹಾಗೂ ಸಾಮಾಜಿಕ ನ್ಯಾಯ ಎತ್ತಿ ಹಿಡಿವ ಸಾಹಿತ್ಯ ಎಲ್ಲ ಕಾಲಕ್ಕೆ ಜೀವಂತವಾಗಿರುತ್ತದೆ ಎಂದು ತುಮಕೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ| ವೆಂಕಟರೆಡ್ಡಿ ರಾಮರೆಡ್ಡಿ ಹೇಳಿದರು.

Advertisement

ಕನ್ನಡ ಸಾಹಿತ್ಯ ಪರಿಷತ್‌ ತಾಲೂಕು ಘಟಕದಿಂದ ನಾರಾಯಣಪುರ ಗ್ರಾಮದ ಸಾಹಿತಿ ಪ್ರೊ| ವೆಂಕಟರೆಡ್ಡಿ ರಾಮರೆಡ್ಡಿ ಅವರ ಮನೆಯಲ್ಲಿ ಏರ್ಪಡಿಸಿದ್ದ “ಮನೆಯಂಗಳದಲ್ಲಿ ಮಾತು’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಹಿತ್ಯ ಸಾಮಾಜವನ್ನು ಪರಿವರ್ತಿಸಬೇಕು. ರೈತರ ಆತ್ಮಹತ್ಯೆ ಸಮಸ್ಯೆ ಸಾಹಿತ್ಯದಲ್ಲಿ ಉಸಿರಾಡಬೇಕು ಎಂದು ಸಲಹೆ ನೀಡಿದರು.

ರೈತ ಬದುಕಿದರೆ ಜಗತ್ತು ಬದುಕುತ್ತದೆ. ರೈತರ ಬದುಕು ಹಸನಾಗಿಸುವ, ರೈತರ ಆಗುಹೋಗುಗಳ ಕುರಿತು ಸಾಹಿತ್ಯ
ನಿರೂಪಿಸಬೇಕು. ಬದುಕಿನ ವಿವಿಧ ಸ್ತರದ ಅನುಭವಗಳು ಸಾಹಿತ್ಯದಲ್ಲಿ ಸೇರಿದಾಗ ಬಹುತ್ವದ ಆಯಾಮ ಬರುತ್ತದೆ. ಕಸಾಪ ಕಥಾ ಕಮ್ಮಟ, ಕಾವ್ಯ ಕಮ್ಮಟಗಳನ್ನು ಏರ್ಪಡಿಸುವ ಮೂಲಕ ಈ ಭಾಗದಲ್ಲಿ ಸಾಹಿತ್ಯವನ್ನು ಜೀವಂತವಾಗಿಡಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಭಾಲ್ಕಿ ಕ್ಷೇತ್ರ ಶಿಕ್ಷಣಾಧಿಕಾರಿ ಸೂರ್ಯಕಾಂತ ಪಾಟೀಲ ಮಾತನಾಡಿ, ಸಾಹಿತ್ಯ, ಸಾಹಿತಿ ಮತ್ತು ಸಾಹಿತ್ಯಿಕ ಸಂಘಟನೆಗಳು ಸದಾ ಪ್ರಯೋಗಶೀಲ ಮತ್ತು ಕ್ರಿಯಾತ್ಮಕವಾಗಿರಬೇಕು. ಸಾಹಿತ್ಯ ಚಿಂತನೆಗಳಲ್ಲಿ
ಸಾಮಾಜಿಕ ಪ್ರಜ್ಞೆ ಸದಾ ಮಿಡಿಯುತ್ತಿರಬೇಕು ಎಂದರು.

ನಿವೃತ್ತ ಪ್ರಾಧ್ಯಾಪಕ ಪ್ರೊ| ಸಿ.ಬಿ. ಪರತಾಪುರೆ ಮಾತನಾಡಿ, ಕನ್ನಡ ಸಾಹಿತ್ಯಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಸಂದಿರುವುದು ಕನ್ನಡ ಸಾಹಿತ್ಯದ ಶ್ರೀಮಂತಿಕೆಯ ಪ್ರತೀಕವಾಗಿದೆ. 

Advertisement

ಕನ್ನಡ ಅಭಿಮಾನದ ಕೊರತೆಯಿಂದ ಇಂದು ನರಳುತ್ತಿದೆ. ಜನರಲ್ಲಿ ಕನ್ನಡಾಭಿಮಾನ ಬೆಳೆಸುವ ಕೆಲಸ ನಿರಂತರ ನಡೆಯುತ್ತಿರಬೇಕು. ನಗರ, ಹಳ್ಳಿ, ಮನೆ ಮನೆಗೆ ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ತಲುಪಿಸುವ ಕಾರ್ಯ
ಕಸಾಪದಿಂದ ನಡೆಯಲಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲೂಕು ಅಧ್ಯಕ್ಷ ಡಾ| ರುದ್ರಮಣಿ ಮಠಪತಿ ಮಾತನಾಡಿದರು. ಸಾಹಿತಿಗಳಾದ ವೀರಣ್ಣಾ ಮಂಠಾಳಕರ, ಮಹಾಂತೇಶ ಕುಂಬಾರ, ಹಬಿಬ್‌ ಸಾಬ್‌ ಮುಲ್ಲಾ, ಬಾಬುರೆಡ್ಡಿ ಪಾಟೀಲ ಸಂವಾದ ನಡೆಸಿದರು. ಬಸವಣ್ಣಪ್ಪಾ ನೆಲೋಗಿ ಪ್ರಾಸ್ತಾವಿಕ ಮಾತನಾಡಿದರು. ಗುವಿವಿಯಿಂದ ಗೌರವ ಡಾಕ್ಟರೇಟ್‌ ಪದವಿ ಪಡೆದ ಡಾ| ರುದ್ರಮಣಿ ಮಠಪತಿ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು.

ಪ್ರೊ| ಗಂಗಾಧರ ಸಾಲಿಮಠ, ರಾಜರೆಡ್ಡಿ ಪಾಟೀಲ, ಗೋವಿಂದರೆಡ್ಡಿ, ರವೀಂದ್ರ ಬುಡಗೆ, ಶಂಕರ ಕುಕ್ಕಾಪಾಟೀಲ, ಅಮರ, ವೀರಶೆಟ್ಟಿ ಪಾಟೀಲ ಉಪಸ್ಥಿತರಿದ್ದರು. ಭೀಮಾಶಂಕರ ಬಿರಾದಾರ ಸ್ವಾಗತಿಸಿದರು. ದೇವೇಂದ್ರ ಬರಗಾಲೆ ನಿರೂಪಿಸಿದರು. ರಮೇಶ ಉಮಾಪುರೆ
ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next