Advertisement
ಕರ್ನಾಟಕ ವಚನ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ವತಿಯಿಂದ ನಗರದ ರಂಗ ಮಂದಿರದ ಆಯೋಜಿಸಿದ 5ನೇ ರಾಜ್ಯ ಮಟ್ಟದ ವಚನ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ವಚನಗಳು ಜಗತ್ತಿನ ಜನರಿಗೆ ನೀಡಿದ ಜೀವನ ಸಂವಿಧಾನ. ಆಡಳಿತಾತ್ಮಕ ಸಂವಿಧಾನ ತಿದ್ದುಪಡಿ ಮಾಡಬಹುದು. ಆದರೆ ಬಸವಾದಿ ಶರಣರ ಜೀವಪರ ಸಂವಿಧಾನವೆಂಬ ವಚನ ಸಾಹಿತ್ಯವನ್ನು ತಿದ್ದಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ಕಾಯಕ ಮತ್ತು ದಾಸೋಹದ ಮೂಲಕ ಗುಣಾತ್ಮಕ ಬದುಕು ಕಟ್ಟಿಕೊಳ್ಳಬೇಕೆಂದು ಶ್ರೀಮಂತ ಸಂಸ್ಕೃತಿಗೆ ನಾಂದಿ ಹಾಡಿದ ವಚನ ಸಾಹಿತ್ಯ ಜನ ಬದುಕಲಿ, ಜಗ ಬದುಕಲಿ ಎಂಬ ಸಂಕಲ್ಪ ಹೊತ್ತುಕೊಂಡು ರಚನೆಯಾಗಿವೆ. ಶರಣರು ನೈತಿಕ ಧಾರ್ಮಿಕ, ಆಧ್ಯಾತ್ಮಿಕತೆ ಜೊತೆಗೆ ಆರ್ಥಿಕ ಸಮಾನತೆ ನೀಡಿದರು. ಶರಣರು ನೀಡಿದ ಅಸಂಗ್ರಹ ಸೂತ್ರವನ್ನು ಇಂದಿನ ರಾಜಕಾರಣಿಗಳು ಅಳವಡಿಸಿಕೊಂಡರೆ ಸರ್ವರಿಗೂ ಸಮಬಾಳು ಸಮಪಾಲು ನೀತಿ ಜಾರಿಗೆ ಬಂದಂತಾಗುತ್ತದೆ. ಇಂದಿನ ಕಾಲದಲ್ಲಿ ಸಾರ್ವಜನಿಕ ಹುದ್ದೆಗಳನ್ನು ತಮ್ಮ ಕುಟುಂಬಸ್ಥರಿಗೆ ಮಾರಾಟವಾಗುತ್ತಿವೆ. ಆದ್ದರಿಂದ ರಾಜಕಾರಣದಲ್ಲಿ ಧರ್ಮದ ಅವಶ್ಯಕತೆ ಇದೆ ಎಂದರು.
ಜಗತ್ತಿನ ಎಲ್ಲಾ ತಲ್ಲಣಗಳಿಗೆ ವಚನ ಸಾಹಿತ್ಯ ಸಿದ್ದೌಷಧಿಯಾಗಿದೆ. ದೇವರಿಗೂ ಮತ್ತು ಮನುಷ್ಯರಿಗೂ ನೇರ ಸಂಪರ್ಕ ಕಲ್ಪಿಸಿದ ಬಸವಾದಿ ಶರಣರು ಇಷ್ಟಲಿಂಗವನ್ನು ಪೂಜಿಸಲು ಆಧ್ಯಾತ್ಮಿಕ ಸ್ವಾತಂತ್ರ್ಯ ನೀಡಿದ್ದಾರೆ. ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಅಹಂಕಾರ, ಅಧಿಕಾರದ ಮದ, ಕೀರ್ತಿವಾರ್ತೆಗಳಿಂದ ದೂರ ಉಳಿಯಬೇಕೆಂದು ಸೋಮಶೇಖರ ಸಲಹೆ ನೀಡಿದರು.
ಪರಿಷತ್ತಿನ ಸಂಸ್ಥಾಪಕ ರಾಜ್ಯಾಧ್ಯಕ್ಷ ಎಂ.ವಿ.ತ್ಯಾಗರಾಜ ಆಶಯ ನುಡಿಗಳನ್ನಾಡಿ ನಿರ್ಲಕ್ಷಿತ ವಚನಕಾರರನ್ನು ಮತ್ತು ಅವರು ರಚಿಸಿದ ವಚನಗಳನ್ನು ಬೆಳಕಿಗೆ ತರುವುದೇ ಪರಿಷತ್ತಿನ ಮೂಲ ಧ್ಯೇಯವಾಗಿದೆ. ವಚನ ಸಾಹಿತ್ಯ ಕೆಲವರಿಂದ ರಚನೆಯಾದವುಗಳಲ್ಲ. ಅದೊಂದು ಆಕಾಶವಿದ್ದಂತೆ. ಅದರ ಪರಿಕಲ್ಪನೆ ವಿಶಾಲವಾಗಿದೆ. ನಡೆ-ನುಡಿ ಒಂದಾಗಿಸಿಕೊಂಡು ವಚನಗಳನ್ನು ಶರಣರು ರಚಿಸಿದ್ದಾರೆ. ಹೀಗಾಗಿ ಅವರು ಜನರ ಮನಗಳಿಗೆ ತಲುಪಿವೆ. ನಾನು ಆಧುನಿಕ ವಚನಗಳ ವಿರೋಧಿಯಲ್ಲ. ಆದರೆ ನಮಗೆ ಆಧುನಿಕ ವಚನಗಳು ಬೇಡ. ಏಕೆಂದರೆ ಅವುಗಳಲ್ಲಿ ನಡೆ-ನುಡಿ ಒಂದಾಗಿರುವುದಿಲ್ಲ. ಆದ್ದರಿಂದ ಬಸವಾದಿ ಶರಣರ ಮೂಲ ವಚನಗಳನ್ನು ಶಾಲಾ ಕಾಲೇಜಿನ ಮಕ್ಕಳಿಗೆ ತಲುಪಿಸುವ ಅವಶ್ಯಕತೆ ಇದೆ. ಮಕ್ಕಳಿಗೆ ವಚನ ಓದಿಸಿದರೆ ಅವು ಅವರ ಹೃದಯದ ಮೇಲೆ ಧನಾತ್ಮಕ ಪರಿಣಾಮ ಬೀರಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಜಿಲ್ಲಾಧ್ಯಕ್ಷೆ ಸುನಿತಾ ಎಸ್.ದಾಡಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ನಾಡೋಜ ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರು ವಹಿಸಿದ್ದರು. ಸಮ್ಮುಖವನ್ನು ಹುಲಸೂರಿನ ಡಾ. ಶಿವಾನಂದ ಸ್ವಾಮಿಗಳು, ಡಾ. ಸಿದ್ಧರಾಮ ಬೆಲ್ದಾಳ ಶರಣರು ವಹಿಸಿದ್ದರು. ಅಧ್ಯಕ್ಷತೆಯನ್ನು ಪರಿಷತ್ತಿನ ಗೌರವಾಧ್ಯಕ್ಷೆ ಡಾ. ಗುರಮ್ಮಾ ಸಿದ್ದಾರೆಡ್ಡಿ ವಹಿಸಿದ್ದರು. ವೇದಿಕೆ ಮೇಲೆ ಮಾಜಿ ಸಚಿವೆ ಲೀಲಾವತಿ ಆರ್.ಪ್ರಸಾದ, ಚನ್ನಬಸವ ಬಳತೆ, ಭಾರತೀಯ ಬಸವ ಬಳಗದ ರಾಜ್ಯಾಧ್ಯಕ್ಷ ಬಾಬು ವಾಲಿ, ಕಸಾಪ ಅಧ್ಯಕ್ಷ ಸುರೇಶ ಚನಶೆಟ್ಟಿ, ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ.ಸಂಜೀವಕುಮಾರ ಅತಿವಾಳೆ, ಪ್ರಥಮ ದರ್ಜೆ ಗುತ್ತಿಗೆದಾರ ಗುರುನಾಥ ಕೊಳ್ಳೂರ, ಲಿಂಗಾಯತ ಅಭಿವೃದ್ಧಿ ಸಂಘದ ಅಧ್ಯಕ್ಷ ಬಿ.ಜಿ.ಶೆಟಕಾರ, ಹಾಸನದ ರವಿ ನಾಕಲಗೂಡು, ಬಾಗಲಕೋಟೆಯ ಶ್ರೀಶೈಲ ಕರಿಶಂಕರ, ಚಿಕ್ಕಬಳ್ಳಾಪುರದ ಕೆ.ಪಿ.ನವಮೋಹನ, ಗದಗದ ಮಹಾಂತೇಶ ಗಜೇಂದ್ರಗಡ, ಆರ್.ಬಿ.ವೆಂಕಟೇಶ ಉಪಸ್ಥಿತರಿದ್ದರು.