ತುಮಕೂರು: ಕೋವಿಡ್ 19 ವೈರಸ್‌ನಿಂದ ಲಾಕ್‌ಡೌನ್ ಆಗಿರುವ ಹಿನ್ನೆಲೆಯಲ್ಲಿ ಖಾಸಗಿ ಬಸ್ ಮಾಲೀಕರು ತೀವ್ರ ಸಂಕಷ್ಟ ಎದುರಿಸು ತ್ತಿದ್ದು, ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿ ಸಿದರೆ ಮಾತ್ರ ಖಾಸಗಿ ಬಸ್‌ಗಳು ರಸ್ತೆಗೆ ಇಳಿಯ ಲಿವೆ ಎಂದು 14 ಜಿಲ್ಲೆಗಳ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷರು ಹೇಳಿದರು.
ನಗರಕ್ಕೆ ಸಮೀಪದ ಹಿರೇಹಳ್ಳಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಖಾಸಗಿ ಬಸ್ ಮಾಲೀಕರ ಸಂಘದ ತುಮಕೂರು ಜಿಲ್ಲಾಧ್ಯಕ್ಷ ಬಿ.ಎಸ್.ಬಲಶಾಮಸಿಂಗ್, ನಮ್ಮ ಜಿಲ್ಲೆಯೂ ಸೇರಿದಂತೆ ಶಿವಮೊಗ್ಗ, ಚಿತ್ರದುರ್ಗ, ದಾವಣ ಗೆರೆ, ಬಳ್ಳಾರಿ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಮೈಸೂರು, ಚಿಕ್ಕ ಮಗಳೂರು, ಚಾಮರಾಜನಗರ ಸೇರಿದಂತೆ 14 ಜಿಲ್ಲೆಗಳ ಖಾಸಗಿ ಬಸ್ ಮಾಲೀಕರ ಸಂಘದ ಜಿಲ್ಲಾಧ್ಯಕ್ಷರು ಸೇರಿ ಸಭೆ ನಡೆಸಲಾಗಿದೆ ಎಂದರು.
ರಿಯಾಯಿತಿ ನೀಡಲು ಮನವಿ: ಈ ಸಭೆಯಲ್ಲಿ ಒಮ್ಮತದ ತೀರ್ಮಾನಕ್ಕೆ ಬಂದು ನಮ್ಮ ಬೇಡಿಕೆಗಳ ಈಡೇರಿಕೆಗೆ ಸರ್ಕಾರಕ್ಕೆ ಒಕ್ಕೊರಲ ಮನವಿ ಸಲ್ಲಿಸಲಾಗುವುದು. ಕೋವಿಡ್-19 ನಿಂದ ಮಾ.24ರಿಂದಲೇ ಸಾರಿಗೆ ಪ್ರಾಧಿಕಾರದ ಆದೇಶದಂತೆ ಖಾಸಗಿ ಬಸ್‌ಗಳನ್ನು ನಿಲ್ಲಿಸಲಾಗಿದೆ. ಕೆಎಂವಿಟಿ ಆಕ್ಟ್ ಪ್ರಕಾರ ರಾಜ್ಯ ಸರ್ಕಾರವು ಬಸ್‌ಗಳ ತ್ರೆçಮಾಸಿಕ ತೆರಿಗೆಯನ್ನು ಮುಂಗಡವಾಗಿ ಪಡೆಯುತ್ತಿದ್ದು, ಇದನ್ನು ಮರುಪರಿಶೀಲಿಸಿ ತೆರಿಗೆ ಮುಕ್ತ ಹಾಗೂ ರಿಯಾಯಿತಿ ನೀಡಲು ಅವಕಾಶವಿದೆ ಇದನ್ನು ಪರಿಶೀಲಿಸಿ ಪರಿಗಣಿಸಬೇಕೆಂದು ಒತ್ತಾಯಿಸಿದರು.
ತೆರಿಗೆ ಮನ್ನಾ ಮಾಡಿ: ಚಿತ್ರದುರ್ಗ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಟಿ.ಎ. ಲಿಂಗಾರೆಡ್ಡಿ ಮಾತನಾಡಿ, 2020ರವರೆಗೆ ತೆರಿಗೆಯನ್ನು ಮನ್ನಾ ಮಾಡಿ ಮತ್ತೆ 2021ರ ಮಾರ್ಚ್‌ವರೆಗೆ ಶೇ.50ರಷ್ಟು ತೆರಿಗೆ ಪಾವತಿಗೆ ಅವಕಾಶ ಕಲ್ಪಿಸಬೇಕು. ಈಗಾಗಲೇ ಖಾಸಗಿ ಬಸ್‌ಗಳನ್ನು ನಿರುಪಯುಕ್ತತೆಗಾಗಿ ಸರೆಂಡರ್ ಮಾಡಿದ್ದು, ಈ ಅವಧಿಯನ್ನು ಬಿಟ್ಟು ಮುಂದಿನ ಅವಧಿಗೆ ತೆರಿಗೆ ವಿನಾಯಿತಿ ಕೊಟ್ಟು ಮತ್ತು ಡಿಸೆಂಬರ್ ನಂತರ ಶೇ.50ರಷ್ಟು ವಿನಾಯ್ತಿ ನೀಡಬೇಕು ಎಂದರು.
ನಮಗೂ ಪ್ಯಾಕೇಜ್ ಘೋಷಿಸಿ: ಕೋಲಾರ ಜಿಲ್ಲಾಧ್ಯಕ್ಷ ಶುಭಾಷ್ ರೆಡ್ಡಿ ಮಾತನಾಡಿ, ನಮ್ಮಿಂದ ತ್ರೆçಮಾಸಿಕ ತೆರಿಗೆಯನ್ನು ಮುಂಗಡವಾಗಿ ಪಡೆಯುತ್ತಿದ್ದು, ಇದನ್ನು 15 ದಿನಗಳ ಬದಲಾಗಿ ಒಂದು ತಿಂಗಳ ಮುಂಗಡವಾಗಿ ಪಡೆಯಬೇಕು. ಈಗಾಗಲೇ ವಿವಿಧ ಟ್ಯಾಕ್ಸಿ, ಆಟೋ ಚಾಲಕರಿಗೆ ಪ್ಯಾಕೇಜ್ ಘೋಷಣೆ ಮಾಡಿದಂತೆ ಖಾಸಗಿ ಬಸ್‌ಗಳ ಚಾಲಕರಿಗೂ ನೀಡಬೇಕೆಂದು ಆಗ್ರಹಿಸಿದರು.
ಸ್ಪಷ್ಟ ನಿಲುವು ಪ್ರಕಟಿಸಿ: ಲಾಕ್‌ಡೌನ್ ಸಡಿಲಿಕೆ ನಂತರ ಖಾಸಗಿ ಬಸ್ ಓಡಿಸಲು ಸೂಚನೆ ಬಂದಲ್ಲಿ, ಪ್ರಯಾಣಿಕರ ಸಾಗಾಟದ ಸಂಖ್ಯೆಯು ಪ್ರತಿ ಬಸ್‌ಗೆ 48 ಜನ ಇದ್ದು, ಶೇ.33ಕ್ಕೆ ಇಳಿಸಬಹುದು. ಜೊತೆಗೆ ಅಂತರ್ ಜಿಲ್ಲಾ ಓಡಾಟಕ್ಕೆ ನಿರ್ಬಂಧ ಬರಬಹುದು. ಬಸ್‌ಗಳಲ್ಲಿ ಪ್ರಯಾಣಿಕರು ಮಾಸ್ಕ್ ಧರಿಸುವುದು ಕಡ್ಡಾಯ, ಸ್ಯಾನಿಟೈಸರ್ ಬಳಸುವುದು ಕಡ್ಡಾಯ, ಸ್ಕ್ರೀನಿಂಗ್ ತಪಾಸಣೆ ಕಡ್ಡಾಯ ಎಂದು ಸರ್ಕಾರ ಏನಾದರೂ ಆದೇಶಿಸಿದರೆ ನಾವು ಅವೆಲ್ಲವನ್ನು ನಿಭಾಯಿಸಲು ಕಷ್ಟಸಾಧ್ಯವಾಗಲಿದೆ.
ಇವೆಲ್ಲಾ ಒಂದು ರೀತಿಯ ಗೊಂದಲ ಉಂಟಾದಂತೆ ಆಗುತ್ತದೆ. ಆದ್ದರಿಂದ ಸರ್ಕಾರ ಸ್ಪಷ್ಟ ನಿಲುವು ಪ್ರಕಟಿಸಬೇಕೆಂದು ಒತ್ತಾಯಿಸಿದರು. ವಿವಿಧ ಜಿಲ್ಲೆಗಳ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷರು ಇದ್ದರು.