ಹುಮನಾಬಾದ: ರೋಹಿತ ಚಕ್ರತೀರ್ಥ ಪರಿಷ್ಕರಿಸಿದ ಪಠ್ಯ-ಪುಸ್ತಕ ಸರ್ಕಾರ ಹಿಂದೆಪಡೆದು ಹಳೆಯ ಬರಗೂರ ಸಮಿತಿಯ ಪಠ್ಯಗಳನ್ನೇ ಪ್ರಸಕ್ತ ಸಾಲಿನಲ್ಲಿ ವಿತರಿಸಬೇಕು. ಗೊಂದಲಕ್ಕೆ ಕಾರಣವಾದ ಶಿಕ್ಷಣ ಸಚಿವ ಬಿ.ಸಿ ನಾಗೇಶ ಅವರಿಂದ ರಾಜೀನಾಮೆ ಪಡೆಯಬೇಕು ಎಂದು ಒತ್ತಾಯಿಸಿ ಅಹಿಂದ ಒಕ್ಕೂಟದ ಹಾಗೂ ವಿವಿಧ ದಲಿತ ಪರ ಸಂಘಟನೆಗಳ ಒಕ್ಕೂಟದಿಂದ ಪಟ್ಟಣದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅಹಿಂದ ಮುಖಂಡ ಬಾಬು ಟೈಗರ್, ಶಾಲೆಗಳು ಆರಂಭವಾಗಿ ತಿಂಗಳು ಕಳೆದರು ಕೂಡ ಸರ್ಕಾರ ಶಾಲಾ ಮಕ್ಕಳಿಗೆ ಪಠ್ಯ-ಪುಸ್ತಕ ವಿತರಣೆ ಮಾಡುವಲ್ಲಿ ವಿಫಲಗೊಂಡಿದೆ. ಅಲ್ಲದೆ, ಶಿಕ್ಷಣ ಸಚಿವರ ಮೌಖೀಕ ಆದೇಶದಿಂದ ರಚನೆಗೊಂಡಿರುವ ರೋಹಿತ ಚಕ್ರತೀರ್ಥ ದೇಶದ್ರೋಹಿ ಕಲಂ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಬೇಕು. ಶಾಲಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ದೇಶದ ಸತ್ಯ ಇತಿಹಾಸ ತಿಳಿಸುವ ಕೆಲಸ ಆಗಬೇಕು. ಆದರೆ, ಸರ್ಕಾರಗಳು ಮಾತ್ರ ಮಕ್ಕಳಿಗೆ ತಪ್ಪು ದಾರಿಗೆ ಏಳೆಯುವ ಕೆಲಸ ಮಾಡುತ್ತಿವೆ ಎಂದು ಆರೋಪಿಸಿದರು.
ದಲಿತ ಮುಖಂಡ ಲಕ್ಷ್ಮೀಪುತ್ರ ಮಾಳಗೆ ಮಾತನಾಡಿ, ಸರ್ಕಾರಗಳು ಮಕ್ಕಳ ಶಿಕ್ಷಣದ ಕುರಿತು ಜಾಗೃತಿ ವಹಿಸಬೇಕು. ಪಠ್ಯದಲ್ಲಿ ಸುಳ್ಳು ಸಂದೇಶಗಳು ಸಾರುವುದು, ಮಹಾನ್ ವ್ಯಕ್ತಿಗಳ ಪರಿಚಯ ಪಠ್ಯದಿಂದ ತೆಗೆಯುವ ಕೆಲಸ ಆಗುತ್ತಿರುವುದು ದಲಿತ ಸಂಘಟನೆಗಳು ಖಂಡಿಸುತ್ತವೆ. ಕೂಡಲೇ ಸರ್ಕಾರಗಳು ತಪ್ಪುಗಳನ್ನು ತಿದ್ದುಕೊಂಡು ಹಳೇ ಪಠ್ಯಕ್ರಮ ಮುಂದುವರೆಸುವ ಜೊತೆಗೆ ವಿವಾದಕ್ಕೆ ಕಾರಣರಾದ ಸಚಿವರು, ಸಮಿತಿ ಮುಖಂಡರನ್ನು ಬಂಧಿಸಿ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಮೂಲಕ ಸಲ್ಲಿಸಲಾಯಿತು. ಅಲ್ಲದೆ, ಪ್ರತಿಭಟನಾನಿರತರು, ರೋಹಿತ ಚಕ್ರತೀರ್ಥ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸುರೇಶ ಘಾಂಗರೆ, ವೈಜಿನಾಥ ಸಿಂಧೆ, ಗೌತಮ್ ಚವ್ಹಾಣ, ಗಣಪತಿ ಅಷ್ಟೂರೆ, ಗೌತಮ ಪ್ರಸಾದ, ದತ್ತು ಪರಿಟ, ಮಕ್ಸೂದ್ ಸಿಂಧನಕೇರಾ ಸೇರಿದಂತೆ ಅನೇಕರು ಇದ್ದರು.