Advertisement

ಈ ಬಾರಿಯಾದರೂ ಈಡೇರುವವೇ ಬೇಡಿಕೆ?

12:59 PM Mar 02, 2021 | Team Udayavani |

ಬೆಳಗಾವಿ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸರ್ಕಾರ ಮತ್ತು ಭಾರತೀಯ ಜನತಾ ಪಕ್ಷದಲ್ಲಿ ಗಡಿ ಜಿಲ್ಲೆ ಬೆಳಗಾವಿಗೆ ನಿರೀಕ್ಷೆ ಮಾಡದಷ್ಟು ಸ್ಥಾನಮಾನ, ಅವಕಾಶ ಸಿಕ್ಕಿದೆ. ರಾಜಕಾರಣಿಗಳು ಜಾಕ್‌ಪಾಟ್‌ ಮೇಲೆ ಜಾಕ್‌ಪಾಟ್‌ ಹೊಡೆದಿದ್ದಾರೆ.

Advertisement

ಆದರೆ ಸಾಮಾನ್ಯ ಜನರು ಹಾಗೂ ಹೋರಾಟಗಾರರು ನಿರೀಕ್ಷೆ ಮಾಡಿದ ಮತ್ತು ತಮ್ಮ ಸುದೀರ್ಘ‌ ಬೇಡಿಕೆಗಳಿಗೆ ವರ್ಷದುದ್ದಕ್ಕೂ ಸರ್ಕಾರದ ಕಡೆ ಮುಖ ಮಾಡಿಯೇ ನಿಲ್ಲಬೇಕಾಗಿದೆ.

ಗಡಿ ಭಾಗದ ಪ್ರದೇಶ ಹಾಗೂ ಅಲ್ಲಿನ ಜನರೆಂದರೆ ಸರ್ಕಾರಕ್ಕೆ ಒಂದು ರೀತಿಯ ತಾತ್ಸಾರ ಮನೋಭಾವ. ಬೇಡಿಕೆಗಳಿಗೆ ಸಿಗುವ ಸ್ಪಂದನೆ ಅಷ್ಟಕಷ್ಟೆ ಎಂಬುದು ಮೊದಲಿಂದಲೂ ಕೇಳಿಬರುವ ಆರೋಪ. ಇದು ಯಡಿಯೂರಪ್ಪ ಸರ್ಕಾರದಲ್ಲಿ ಸಹ ಮುಂದುವರಿದಿದೆ. ಬೇಡಿಕೆಗಿಂತ ಹೆಚ್ಚು ರಾಜಕೀಯ ಪ್ರಾತಿನಿಧ್ಯ ಬಿಟ್ಟರೆ ಈಸರ್ಕಾರದಲ್ಲಿ ಸಿಕ್ಕಿದ್ದು ನಿರಾಸೆಯ ಗಂಟು. ಮುಖ್ಯವಾದ ಬೇಡಿಕೆಗಳು ಇನ್ನೂ ಕಾಯಬೇಕಾದ ಹಂತದಲ್ಲೇ ಇವೆ.

ಈಗ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತೂಂದು ಬಜೆಟ್‌ ಮಂಡನೆ ಮಾಡಲು ಸಿದ್ದತೆ ಮಾಡಿಕೊಂಡಿರುವಸಂದರ್ಭದಲ್ಲಿ ಬಹು ದಿನಗಳ ಬೇಡಿಕೆ, ಜನರ ನಿರೀಕ್ಷೆಗಳು ಮರಳಿ ಪ್ರಸ್ತಾಪವಾಗಿವೆ. ಸರ್ಕಾರಕ್ಕೆ ನೆನಪುಮಾಡಿಕೊಡುವ ಪ್ರಯತ್ನ ಮಾಡಲಾಗಿದೆ. ತಾವೇ ನೀಡಿದ ಮಾತಿನಂತೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ತಕ್ಷಣ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಅನುಕೂಲವಾಗುವ ಸರ್ಕಾರದ ಮುಖ್ಯ ಕಚೇರಿಗಳು ಸುವರ್ಣ ವಿಧಾನಸೌಧಕ್ಕೆ ಬರಬೇಕಿತ್ತು.

ಈ ಭಾಗಕ್ಕೆ ಸಂಬಂಧಪಟ್ಟ ನಿರ್ಣಯಗಳು ಇಲ್ಲಿಯೇ ಆಗಬೇಕಿದ್ದವು. ಆದರೆ ಸುವರ್ಣ ವಿಧಾನಸೌಧಕ್ಕೆ ರಾಜ್ಯ ಕಚೇರಿಗಳ ಬದಲು ಕೆಲವೊಂದು ಜಿಲ್ಲಾ ಕಚೇರಿಗಳುಬಂದಿರುವದು ಸರ್ಕಾರದ ನಿರ್ಲಕ್ಷಕ್ಕೆ ನಿದರ್ಶನ ಎಂಬುದು ಕನ್ನಡ ಹೋರಾಟಗಾರರ ಅಸಮಾಧಾನ. ಮರೆತು ಹೋದ ಮಾತುಗಳು; 2018ರಲ್ಲಿ ಉತ್ತರ ಕರ್ನಾಟಕದ ಮಠಾಧೀಶರು ಸುವರ್ಣ ವಿಧಾನಸೌಧಕ್ಕೆ ಸರ್ಕಾರಿ ಕಚೇರಿಗಳ ಸ್ಥಳಾಂತರಕ್ಕೆ ಆಗ್ರಹಿಸಿ ಹೋರಾಟ ನಡೆಸಿದಾಗ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿದ್ದ ವಿರೋಧ ಪಕ್ಷದ ನಾಯಕ ಯಡಿಯೂರಪ್ಪ ಮೈತ್ರಿ ಸರ್ಕಾರದ ಮುಖ್ಯಮಂತ್ರಿಗಳ ವಿರುದ್ಧ ವಾಗ್ಧಾಳಿ ನಡೆಸಿದ್ದಲ್ಲದೆ ತಮ್ಮ ಸರ್ಕಾರ ಬಂದ ಕೂಡಲೇ ಪ್ರಮುಖ ಕಚೇರಿಗಳ ಸ್ಥಳಾಂತರ ಮಾಡುವ ಮಾತು ಕೊಟ್ಟಿದ್ದರು. ಅಷ್ಟೇಆಲ್ಲ, ಸರ್ಕಾರ ರಚನೆ ಮಾಡಿದ ಬಳಿಕ ಸುವರ್ಣವಿಧಾನಸೌಧದಲ್ಲಿ ಎರಡು ತಿಂಗಳಿಗೊಮ್ಮೆ ಸಚಿವಸಂಪುಟ ಸಭೆ ನಡೆಸುವ ಭರವಸೆ ಸಹ ನೀಡಿದ್ದರು.ಆದರೆ ಈ ಎರಡೂ ಮಾತುಗಳು ಯಡಿಯೂರಪ್ಪಅವರಿಗೆ ಈಗ ನೆನಪಿಲ್ಲ. ಭರವಸೆಗಳು ಎಲ್ಲಿ ಎಡವಿದವು ಎಂಬುದು ಗೊತ್ತಿಲ್ಲ.

Advertisement

ಸುವರ್ಣ ವಿಧಾನಸೌಧವನ್ನು ಉತ್ತರ ಕರ್ನಾಟಕದ ಶಕ್ತಿ ಕೇಂದ್ರವನ್ನಾಗಿ ಮಾಡಲಾಗುವುದು ಎಂದು ಹೇಳಿದ್ದ ಮುಖ್ಯಮಂತ್ರಿಗಳು ಎರಡು ವರ್ಷದಿಂದ ಅದರಕಡೆ ತಿರುಗಿ ನೋಡಿಲ್ಲ. ಪ್ರತಿ ವರ್ಷ ನಿರ್ವಹಣೆಗೆ 8ರಿಂದ 10 ಕೋಟಿ ಖರ್ಚು ಮಾಡುತ್ತಿರುವ ಸರ್ಕಾರಕ್ಕೆ ಸುವರ್ಣ ವಿಧಾನಸೌಧ ಬಿಳಿಆನೆಯಾಗಿ ಬದಲಾಗಿದೆ.

ಜಿಲ್ಲಾ ವಿಭಜನೆ : ಜಿಲ್ಲಾ ವಿಭಜನೆ ಸರ್ಕಾರದ ಮುಂದಿರುವ ದೊಡ್ಡ ಸವಾಲು. ಹಿಂದಿನ ಎಲ್ಲ ಸರ್ಕಾರಗಳು ಈ ವಿಷಯದಲ್ಲಿ ನುಡಿದಂತೆ ನಡೆದುಕೊಂಡಿಲ್ಲ ಎಂಬ ಅಸಮಾಧಾನ ಹೊಸ ಜಿಲ್ಲೆಗಾಗಿ ಕಾಯುತ್ತಿರುವ ಚಿಕ್ಕೋಡಿ ಹಾಗೂ ಗೋಕಾಕ

ಭಾಗದ ಜನರಲ್ಲಿದೆ. ಹೊಸ ಸರ್ಕಾರ ರಚನೆಯಾದಾಗ ಮತ್ತು ಬಜೆಟ್‌ ಸಮಯದಲ್ಲಿ ಈ

ವಿಷಯ ಸಂಪ್ರದಾಯದಂತೆ ಕೇಳಿಬರುತ್ತಲೇ ಇದೆ. ಆದರೆ ಪರಿಹಾರ ಮಾತ್ರ ಸಿಕ್ಕಿಲ್ಲ. ಆಡಳಿತಾತ್ಮಕ ಅನುಕೂಲತೆಯ ದೃಷ್ಟಿಯಿಂದ ಬೆಳಗಾವಿ ಜಿಲ್ಲೆ ವಿಭಜನೆಯಾಬೇಕು. ಈಗಾಗಲೇ 14ತಾಲೂಕುಗಳಿಂದ ಜಿಲ್ಲಾಡಳಿತದ ಮೇಲೆ ದೊಡ್ಡ ಹೊರೆ ಬಿದ್ದಿದೆ. ಅಥಣಿ ತಾಲೂಕಿನ ಜನರು ಜಿಲ್ಲಾ ಕೇಂದ್ರಕ್ಕೆ ಬರಲು 150 ಕಿಲೋಮೀಟರ್‌ ಕ್ರಮಿಸಬೇಕು. ಇಲ್ಲಿಗೆ ಬಂದರೂ ಕೆಲಸ ಆಗುತ್ತದೆ ಎಂಬ ವಿಶ್ವಾಸ ಇಲ್ಲ. ಈ ಎಲ್ಲ ಕಾರಣದಿಂದ ಹೊಸ ಜಿಲ್ಲೆಗಳನ್ನು ಮಾಡಬೇಕು ಎಂಬಬೇಡಿಕೆ ದಶಕಗಳಿಂದ ಇದೆ. ತಾಂತ್ರಿಕ ಸಮಸ್ಯೆ ಕಾರಣ ಮುಂದೆ ಮಾಡುತ್ತಿರುವ ಸರ್ಕಾರ ಈಗ ಯಾವ ರೀತಿ ಸ್ಪಂದಿಸುತ್ತದೆ ಎಂಬ ಕುತೂಹಲ ಹೋರಾಟಗಾರರಲ್ಲಿದೆ.

ಮುಗಿಯದ ನೀರಿನ ಕನವರಿಕೆ :

ಮಹದಾಯಿ ನ್ಯಾಯಾಧೀಕರಣದ ತೀರ್ಪಿನಿಂದ ಕಳಸಾ-ಬಂಡೂರಿ ಸಮಸ್ಯೆ ಬಗೆಹರಿಯಿತು. ಇನ್ನು ನಮ್ಮ ನೀರಿನ ಬವಣೆ ದೂರವಾಯಿತು ಎಂದು ಸಂತಸಗೊಂಡಿದ್ದ ಮಲಪ್ರಭಾ ನದಿ ವ್ಯಾಪ್ತಿಯ ನಾಲ್ಕು ಜಿಲ್ಲೆಗಳ 11 ತಾಲೂಕುಗಳ ಜನರಿಗೆ ಸರ್ಕಾರದ ಉದಾಸೀನ ಮನೋಭಾವ ಮತ್ತೆ ನಿರಾಸೆ ಉಂಟುಮಾಡಿದೆ. ಕಳಸಾ-ಬಂಡೂರಿ ನೀರಿನ ಕನವರಿಕೆ ಮೊದಲಿನ ಹಾಗೆಯೇಮುಂದುವರಿದಿದೆ. ಕಳೆದ ಬಜೆಟ್‌ದಲ್ಲಿ ಕಳಸಾ-ಬಂಡೂರಿ ಕಾಮಗಾರಿಗೆ ಸರ್ಕಾರ 500ಕೋಟಿ ರೂ. ತೆಗೆದಿಡಲಾಗಿದೆ ಎಂದು ಘೋಷಿಸಿದಾಗ ಎಲ್ಲ ಕಡೆ ವಿಜಯೋತ್ಸ ವ ಆಚರಣೆ ಮಾಡಲಾಗಿತ್ತು. ಆದರೆ ಬಜೆಟ್‌ ಬಳಿಕ ಕಳಸಾ ನಾಲಾ ಪ್ರದೇಶದಲ್ಲಿ ಯಾವುದೇ ಸಕಾರಾತ್ಮಕ ಬೆಳವಣಿಗೆಗಳು ನಡೆಯಲೇ ಇಲ್ಲ. ಇದಕ್ಕೆ ಪ್ರತಿಯಾಗಿ ಗೋವಾ ಸರ್ಕಾರದ ಆಕ್ಷೇಪ ಹಾಗೂ ಆರೋಪಗಳು ಕರ್ನಾಟಕ ಸರ್ಕಾರದ ಇಚ್ಛಾಶಕ್ತಿಯನ್ನು ಪ್ರಶ್ನೆ ಮಾಡುವಂತಿವೆ.

 

ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next