ಕಲಬುರಗಿ: ಕೃಷಿ ಇಲಾಖೆಯಲ್ಲಿ ಅನುವುಗಾರರ ಸೇವೆಯನ್ನು ಮುಂದುವರೆಸಬೇಕು ಮತ್ತು ಅವರಿಗೆ ಮಾಸಿಕ 10 ಸಾವಿರ ರೂ. ವೇತನ ನಿಗದಿಪಡಬೇಕೆಂದು ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಶುಕ್ರವಾರ ಶ್ರಮಜೀವಿಗಳ ವೇದಿಕೆ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಯಿತು.
ಕೃಷಿ ಚಟುವಟಿಕೆಗಳಿಗೆ ರೈತರಿಗೆ ಸೂಕ್ತ ಮಾಹಿತಿ ನೀಡುವುದು ಬೆಳೆ ಸಮೀಕ್ಷೆ ಮೊದಲಾದ ಕೆಲಸಗಳನ್ನು ರೈತರ ಜತೆಗೂಡಿ ಬೇರು ಮಟ್ಟದಲ್ಲಿ ಅನುವುಗಾರರು ಕೆಲಸ ಮಾಡುತ್ತಿದ್ದಾರೆ. ಆದರೆ, ಕೃಷಿ ಸಚಿವ ಬಿ.ಸಿ.ಪಾಟೀಲ್ ಮತ್ತು ಅಧಿಕಾರಿಗಳು ಸೇರಿಕೊಂಡು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಬೆಳೆ ಸಮೀಕ್ಷೆ ಹಾಗೂ ಮತ್ತಿತರ ಕೆಲಸಗಳಿಗೆ ಅನುವುಗಾರರನ್ನು ಬಳಸಿಕೊಳ್ಳಬೇಡಿ ಎಂದು ಕೃಷಿ ಅಧಿಕಾರಿಗಳಿಗೆ ಕೃಷಿ ಸಚಿವ ಬಿ.ಸಿ. ಪಾಟೀಲ್ ಮೌಖೀಕ ಸೂಚನೆ ನೀಡಿದ್ದಾರೆ. ಇದರಿಂದ ಅನುವುಗಾರರನ್ನು ಅತಂತ್ರಕ್ಕೆ ಸಿಲುಕುವಂತೆ ಆಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ಕಳೆದ ಹಲವಾರು ವರ್ಷಗಳಿಂದ ಕೃಷಿ ಇಲಾಖೆಯಲ್ಲಿ ಅನುವುಗಾರರು ಕಾರ್ಯ ನಿರ್ವಹಿಸುತ್ತಿದ್ದಾರೆ. ರೈತರಿಗೆ ಬೆಳೆಗಳ ಬಗ್ಗೆ ಸಲಹೆ-ಸೂಚನೆ ಹಾಗೂ ಅವರಿಗೆ ಬೆಳೆಹಾನಿ ಸಮೀಕ್ಷೆ, ಸಿರಿಧಾನ್ಯಗಳನ್ನು ಬೆಳೆಯಲು ಪ್ರೋತ್ಸಾಹ ನೀಡುವುದು, ಮಣ್ಣು ಪರೀಕ್ಷೆ ಮೊದಲಾದ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಈಗ ಅನುವುಗಾರರ ಹಿತರಕ್ಷಣೆ ಮಾಡದೆ ಕೃಷಿ ಸಚಿವರು ಜೀವನದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಬೆಳೆ ಸಮೀಕ್ಷೆ ಹಾಗೂ ಮತ್ತಿತರ ಕೆಲಸಗಳಿಗೆ ಅನುವುಗಾರರನ್ನು ಬಳಸಿಕೊಳ್ಳಬೇಡಿ ಎಂದು ಕೃಷಿ ಅಧಿಕಾರಿಗಳಿಗೆ ಸಚಿವರು ಮೌಖೀಕ ಸೂಚನೆ ನೀಡಿದ್ದು, ಖಂಡನೀಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೃಷಿ ಸಚಿವರು ಆ್ಯಪ್ ಮೂಲಕ ರೈತರು ಸ್ವಯಂ ಬೆಳೆ ಸಮೀಕ್ಷೆ ಮಾಡುವ ಅವಕಾಶ ಕಲ್ಪಿಸಿದ್ದಾರೆ. ಆದರೆ, ಎಷ್ಟು ಜನ ರೈತರ ಬಳಿಯಲ್ಲಿ ಸ್ಮಾರ್ಟ್ ಫೋನ್ ಇರುತ್ತದೆ ಎಂಬುದು ಯೋಚಿಸದೆ ಈ ನಿರ್ಧಾರ ಮಾಡಿದಂತಿದೆ. ರೈತರು ಆ್ಯಪ್ ಮೂಲಕ ಬೆಳೆ ಸಮೀಕ್ಷೆ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಇನ್ನೂ ಬೆಳೆ ಸಮೀಕ್ಷೆ ಪ್ರಗತಿ ಕಂಡಿಲ್ಲ. ಬೆಳೆ ಸಮೀಕ್ಷೆಯನ್ನು ಅನುವುಗಾರರು ಮಾಡಿದರೆ ಕೇವಲ 5 ರೂ. ಸರ್ಕಾರ ನೀಡುತ್ತದೆ. ಈಗ ರೈತರು ಬೇರೆಯವರ ಬಳಿ ನೂರಾರು ರೂಪಾಯಿ ಕೊಟ್ಟು ಮಾಡಿಸಿಕೊಳ್ಳುವಂತ ಸ್ಥಿತಿಯನ್ನು ಸರ್ಕಾರವೇ ನಿರ್ಮಿಸಿದೆ ಎಂದೂ ಆರೋಪಿಸಿದರು.
ಸಿಎಂ ಯಡಿಯೂರಪ್ಪನವರು ಮಧ್ಯಪ್ರವೇಶವನ್ನು ಕೂಡಲೇ ಮಾಡಬೇಕು. ಬೆಳೆ ಸಮೀಕ್ಷೆ ಇನ್ನಿತರ ಕೆಲಸಗಳಿಗೆ ಅನುವುಗಾರರನ್ನು ಬಳಸಿಕೊಳ್ಳಬೇಕು. ಬಿ.ಸಿ. ಪಾಟೀಲರನ್ನು ಕೃಷಿ ಖಾತೆಯಿಂದ ಬದಲಾವಣೆ ಮಾಡಿ ಮತ್ತೂಬ್ಬರಿಗೆ ವಹಿಸಿಕೊಡಬೇಕು. ಇಲ್ಲದೆ ಹೋದರೆ ಮುಖ್ಯಮಂತ್ರಿಗಳ ಮನೆ ಇಲ್ಲವೇ ಕಚೇರಿ ಮುಂಭಾಗದಲ್ಲಿ ಹೋರಾಟ ನಡೆಸಬೇಕಾಗುತ್ತದೆ ಪ್ರತಿಭಟನಾನಿತರರು ಎಚ್ಚರಿಕೆ ನೀಡಿದರು.
ಶ್ರಮಜೀವಿಗಳ ವೇದಿಕೆ ಅಧ್ಯಕ್ಷ ಚಂದ್ರಶೇಖರ ಹಿರೇಮಠ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಜಗದೀಶ ಗಿರಕೆ, ಮಹಾಂತಪ್ಪ ನರೊಣಿ, ಸಿದ್ರಾಮಪ್ಪ ಧಂಗಾಪುರ, ಬಸವರಾಜ ಬೆಳಗುಂಪಾ, ರೇವಣಸಿದ್ದಪ್ಪ ಹಾಗರಗಿ, ರಿಯಾಜುದ್ದೀನ್ ಮಂಗಲಗಿ, ಕಲ್ಯಾಣಿ ದೇವಂತಗಿ, ಬಸವರಾಜ ಬಿರಾದಾರ, ವೀರಪಾಕ್ಷಿ ಗುಂಡಗುರ್ತಿ ಸೇರಿ ಹಲವು ಅನುವುಗಾರರು ಭಾಗವಹಿಸಿದ್ದರು