Advertisement

ವಾರದೊಳಗೆ ಕೊಬ್ಬರಿ ನಫೆಡ್‌ ಕೇಂದ್ರ ತೆರೆಯಲು ಆಗ್ರಹ

04:08 PM Jan 14, 2023 | Team Udayavani |

ತಿಪಟೂರು: ಕೊಬ್ಬರಿ ಬೆಲೆ ತೀರ ಕುಸಿದಿದ್ದರೂ ನಫೆಡ್‌ ತೆರೆದು ಕೊಬ್ಬರಿ ಕೊಂಡುಕೊಳ್ಳದೇ ರಾಜ್ಯ ಸರ್ಕಾರ ರೈತ ವಿರೋಧಿ ಧೋರಣೆ ಅನುಸರಿಸುತ್ತಿದ್ದು, ಒಂದು ವಾರದೊಳಗೆ ನಫೆಡ್‌ ತೆರೆಯದಿದ್ದರೆ ಜ.25ರಂದು ತಾಲೂಕಿನ ಕೆ.ಬಿ.ಕ್ರಾಸ್‌ನ ಎರಡು ಹೈವೆಗಳನ್ನು ಬಂದ್‌ ಮಾಡಿ ಪ್ರತಿಭಟಿಸಲಾಗುವುದು ಎಂದು ತಿಪಟೂರು ಹೋರಾಟ ಸಮಿತಿ ಅಧ್ಯಕ್ಷ ಹಾಗೂ ಕಾಂಗ್ರೆಸ್‌ ಮುಖಂಡ ಲೋಕೇಶ್ವರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

Advertisement

ನಗರದ ಕಲ್ಪತರು  ಗ್ರ್ಯಾಂಡ್‌ನ‌ಲ್ಲಿ ಶುಕ್ರವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕ್ವಿಂಟಲ್‌ ಕೊಬ್ಬರಿಗೆ 750 ರೂ. ಪ್ರೋತ್ಸಾಹ ಧನ ನೀಡಿ ಮೂರು ವಾರಗಳಾದರೂ ಇನ್ನೂ ಅಧಿಕೃತವಾಗಿ ಜಾರಿಯಾಗಿಲ್ಲ. ಕೊಬ್ಬರಿಗೆ ಬೆಲೆಯಿಲ್ಲದೆ ರೈತರು ಕಂಗಾಲಾಗಿದ್ದು, ಮುಂದಿನ ದಿನಗಳಲ್ಲಿ ಮತ್ತೆಲ್ಲಿ ಬೆಲೆ ಕಡಿಮೆಯಾಗುತ್ತದೆ ಎಂಬ ಭಯದಿಂದ ಮಾರುಕಟ್ಟೆಗೆ ಕೊಬ್ಬರಿ ತರುತ್ತಿದ್ದಾರೆ ಎಂದರು.

ಸ್ಪಂದಿಸುತ್ತಿಲ್ಲ: ಈಗಿರುವ ಬೆಲೆ ರೈತರ ಖರ್ಚಿಗೆ ಸಾಕಾಗುತ್ತಿಲ್ಲ. ಆರ್ಥಿಕ ಸಂಕಷ್ಟದಿಂದ ರೈತರು ಪರಿತಪಿಸುತ್ತಿದ್ದು, ಇಲ್ಲಿನ ಸಚಿವರಿಗೆ ಯಾರ ಕಷ್ಟವೂ ಅರ್ಥವಾಗುತ್ತಿಲ್ಲ. ಕೊಬ್ಬರಿ ಬೆಲೆಯನ್ನು ಹೆಚ್ಚಿಸಬೇಕೆಂದು ತಿಪಟೂರು ಬಂದ್‌ಗೂ ಕರೆದುಕೊಡಲಾಯಿತು. ಹಲವು ತಾಲೂಕುಗಳಲ್ಲಿ ಪ್ರತಿಭಟನೆ ಹಮ್ಮಿಕೊಂಡು ಹೋರಾಟ ಮಾಡಿದರೂ ಸರ್ಕಾರ ಸ್ಪಂದಿಸುತ್ತಿಲ್ಲ.

ಕೇಸ್‌ ಹಾಕಿದರೂ ಪರವಾಗಿಲ್ಲ: ಕಲ್ಪತರು ನಾಡಿನಲ್ಲಿ ತೆಂಗು ಮೂಲ ಬೆಳೆಯಾಗಿದ್ದು, ತೆಂಗು ಬೆಳೆಗಾರರು ನಲುಗಿ ಹೋಗುತ್ತಿದ್ದಾರೆ. ನಮ್ಮ ತಿಪಟೂರು ಹೋರಾಟ ಸಮಿತಿ ರೈತ ಪರವಾಗಿದ್ದು, ತಾಲೂಕಿನ ಕೆ.ಬಿ.ಕ್ರಾಸ್‌ನಲ್ಲಿರುವ ಬೀದರ್‌ -ಮೈಸೂರು ಹಾಗೂ ಶಿವಮೊಗ್ಗ-ಹೊನ್ನಾವರ ಹೈವೆಗಳನ್ನು ಬಂದ್‌ ಮಾಡುವ ಮೂಲಕ ಕೊಬ್ಬರಿ ಬೆಲೆ ಹೆಚ್ಚಿಸುವಂತೆ ಒತ್ತಡ ಹಾಕಲಾಗುವುದು. ನಮ್ಮ ಮೇಲೆ ಕೇಸ್‌ ಹಾಕಿ ಜೈಲಿಗೆ ಕಳುಹಿಸಿದರೂ ನಾವು ಹೈವೆ ಬಂದ್‌ ಮಾಡುವುದು ಖಚಿತ ಎಂದರು.

ತಿಪಟೂರು, ತುರುವೇಕೆರೆ, ಚಿಕ್ಕನಾಯಕನಹಳ್ಳಿ, ಗುಬ್ಬಿ ತಾಲೂಕುಗಳಿಂದ ಸುಮಾರು 5 ಸಾವಿರಕ್ಕೂ ಹೆಚ್ಚು ರೈತರು ಭಾಗವಹಿಸಲಿದ್ದಾರೆ. ಈ ಬಂದ್‌ ಪಕ್ಷಾತೀತವಾಗಿದ್ದು ರಾಜಕೀಯ ಮುಖಂಡರು ಭಾಗವಹಿಸುವಂತೆ ಆಹ್ವಾನ ನೀಡಲಾಗುವುದು. ವಿವಿಧ ಸಂಘ ಸಂಸ್ಥೆಗಳು, ರೈತಪರ ಸಂಘಟನೆಗಳು, ಸಾರ್ವಜನಿಕರು ಭಾಗವಹಿಸಲಿದ್ದಾರೆ. ಸರ್ಕಾರ ಶಾಶ್ವತ ನಫೆಡ್‌ ತೆರೆದು ರೈತರಿಗೆ ಅನುಕೂಲ ಕಲ್ಪಿಸಬೇಕು. ಕ್ವಿಂಟಲ್‌ ಕೊಬ್ಬರಿಗೆ ರೂ.3 ಸಾವಿರ ರೂ.ಪ್ರೋತ್ಸಾಹ ಧನ ನೀಡಬೇಕು. ಇದರಿಂದ ರೈತರಿಗೆ ಕ್ವಿಂಟಲ್‌ ಕೊಬ್ಬರಿಗೆ 15 ಸಾವಿರ ರೂ. ಸಿಗಲಿದೆ ಎಂದರು.

Advertisement

ಸರ್ಕಾರ ರೈತರ ಬಗ್ಗೆ ಉದಾಸೀನತೆ ತಾಳದೆ ಒಂದು ವಾರದೊಳಗೆ ನಫೆಡ್‌ ತೆರೆದು ಕೊಬ್ಬರಿ ಖರೀದಿ ಮಾಡಬೇಕೆಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ನಗರಸಭೆ ಉಪಾಧ್ಯಕ್ಷ ಸೊಪ್ಪುಗಣೇಶ್‌, ಸದಸ್ಯರಾದ ಭಾರತಿ ಮಂಜುನಾಥ್‌, ಆಶಿಫಾಬಾನು, ಲೋಕೇಶ್ವರ ಅಭಿಮಾನಿ ಬಳಗದ ನಾಗರಾಜು, ಶಶಿಧರ್‌, ಸಿದ್ದರಾಮಣ್ಣ, ಗಿರೀಶ್‌, ರಾಜಶೇಖರ್‌, ಪಂಚಾಕ್ಷರಿ, ಕಾಂತರಾಜು, ನಟರಾಜು, ಮಲ್ಲೇಶ್‌, ಗಂಗಣ್ಣ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next