ನವದೆಹಲಿ: ಕರ್ನಾಟಕದಲ್ಲಿರುವ ಸಿದ್ದಿ ಸಮುದಾಯವನ್ನು ಪರಿಶಿಷ್ಟ ವರ್ಗಗಳ ಪಟ್ಟಿಗೆ ಸೇರ್ಪಡೆ ಮಾಡುವಂತೆ ರಾಜ್ಯ ಸರ್ಕಾರವು ಮನವಿ ಸಲ್ಲಿಸಿರುವುದು ನಿಜ ಎಂದು ಕೇಂದ್ರ ಸರ್ಕಾರ ಶುಕ್ರವಾರ ತಿಳಿಸಿದೆ.
ಕರ್ನಾಟಕ ಸರ್ಕಾರವು ಇಂಥದ್ದೊಂದು ಬೇಡಿಕೆ ಇಟ್ಟಿರುವುದು ನಿಜವೇ ಎಂದು ಸಂಸತ್‌ನಲ್ಲಿ ಕೇಳಿದ ಪ್ರಶ್ನೆಗೆ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಹಾಯಕ ಸಚಿವ ಸುದರ್ಶನ ಭಗತ್ ಈ ಉತ್ತರ ನೀಡಿದ್ದಾರೆ. ಬೆಳಗಾವಿ ಮತ್ತು ಧಾರವಾಡದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಸಿದ್ದಿ ಜನಾಂಗಕ್ಕೆ ಎಸ್‌ಟಿ ಸ್ಥಾನಮಾನ ನೀಡುವಂತೆ ರಾಜ್ಯ ಸರ್ಕಾರ ಮನವಿ ಮಾಡಿದೆ ಎಂದಿದ್ದಾರೆ.
ಇದೇ ವೇಳೆ, ಸರ್ಕಾರಿ ಸಭೆಗಳಲ್ಲಿ ಮಾಂಸಾ ಹಾರಗಳನ್ನು ನೀಡುವುದಕ್ಕೆ ನಿರ್ಬಂಧ, ಎಲ್‌ಜಿಬಿಟಿ ಸಮುದಾಯಕ್ಕೂ ಸಶಸ್ತ್ರ ಪಡೆಗಳಲ್ಲಿ ಕಾರ್ಯನಿರ್ವಹಿಸಲು ಸಮಾನ ಅವಕಾಶ ಒದಗಿಸುವುದು, ಆನ್‌ಲೈನ್ ಕ್ರೀಡೆಗಳಿಗೆ ನಿಯಂತ್ರಣ ಸೇರಿದಂತೆ ಸುಮಾರು 85 ಖಾಸಗಿ ಮಸೂದೆಗಳು ಶುಕ್ರವಾರ ಲೋಕಸಭೆಯಲ್ಲಿ ಮಂಡನೆಯಾಗಿವೆ.
ಅಧಿಕಾರಿಗಳೇ ಹೊಣೆ: ಇದೇ ವೇಳೆ, ಮರುಪಾವತಿಯಾಗದ ಸಾಲಗಳಿಗೆ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಸುಮಾರು 6 ಸಾವಿರ ಅಧಿಕಾರಿಗಳೇ ಕಾರಣವಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಲೋಕಸಭೆಗೆ ತಿಳಿಸಿದ್ದಾರೆ.
ಇನ್ನೊಂದೆಡೆ, ದೀರ್ಘಕಾಲದಿಂದ ವಹಿ ವಾಟು ನಡೆಸದೇ ಇದ್ದಂಥ 1 ಲಕ್ಷಕ್ಕೂ ಅಧಿಕ ಕಂಪನಿಗಳ ನೋಂದಣಿಯನ್ನು ಪ್ರಸಕ್ತ ವರ್ಷ ರದ್ದು ಮಾಡಿದ್ದೇವೆ ಎಂದು ಲೋಕಸಭೆಗೆ ಸಚಿವ ಚೌಧರಿ ಮಾಹಿತಿ ನೀಡಿದ್ದಾರೆ.
ಕಾವೇರಿಗೆ ಕೊಚ್ಚಿಹೋದ ಕಲಾಪ: ರಾಜ್ಯಸಭೆಯಲ್ಲಿ ಕಾವೇರಿ ವಿಚಾರವಾಗಿ ತಮಿಳುನಾಡಿನ ಪಕ್ಷಗಳು ಒಂದೇ ಸಮನೆ ಗದ್ದಲ ಎಬ್ಬಿಸಿದ ಕಾರಣ, ಕಲಾಪ ಕೊಚ್ಚಿಹೋಯಿತು. ಈ ನಡುವೆ, ಈ ವರ್ಷ ದೇಶದ 86 ಸಂಸ್ಥೆಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನ ಕಲ್ಪಿಸಲಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.