ಕಾರವಾರ: ಸರ್ಕಾರಿ ಶಾಲೆಗಳನ್ನು ಮುಚ್ಚಬಾರದು ಎಂಬ ಬೇಡಿಕೆ ಸೇರಿದಂತೆ ವಿದ್ಯಾರ್ಥಿಗಳ ವಿವಿಧ ಸಮಸ್ಯೆಗಳನ್ನು ಪರಿಹರಿಸಲು ಆಗ್ರಹಿಸಿ ವಿದ್ಯಾರ್ಥಿ ಫೆಡರೇಶನ್ ಆಫ್ ಇಂಡಿಯಾ ಸಂಘಟನೆ ಪದಾಧಿಕಾರಿಗಳು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಗೆ ಮನವಿ ಸಲ್ಲಿಸಿದರು.
ವಿದ್ಯಾರ್ಥಿಗಳ ಸಂಖ್ಯೆ ಮತ್ತು ಮಾದರಿ ಶಾಲೆ ನೆಪದಲ್ಲಿ ರಾಜ್ಯದಲ್ಲಿ 13,800 ಸರ್ಕಾರಿ ಶಾಲೆಗಳನ್ನು ಮುಚ್ಚಲು ರಾಜ್ಯ ಸರ್ಕಾರ ಹೊರಟಿರುವುದನ್ನು ತೀವ್ರವಾಗಿ ವಿರೋಧಿಸುತ್ತೇವೆ ಎಂದು ಎಸ್‌ಎಫ್‌ಐ ಪದಾಧಿಕಾರಿಗಳು ಹೇಳಿದರು.
ಕೋವಿಡ್ ನಂತರ ಸರ್ಕಾರಿ ಶಾಲೆಗಳಿಗೆ ದಾಖಲಾತಿ ಒಂದು ಕಡೆ ಹೆಚ್ಚಾಗಿದೆ. ಜತೆಗೆ ಈ ಶೈಕ್ಷಣಿಕ ವರ್ಷದಲ್ಲಿ 10 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಡ್ರಾಫ್ ಔಟ್ ಆಗಿದ್ದಾರೆ. ಆದ್ದರಿಂದ ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ಧಿ ಮಾಡಿ ಸರ್ಕಾರಿ ಶಿಕ್ಷಣ ವ್ಯವಸ್ಥೆ ಬಲಪಡಿಸುವ ಬದಲು ರಾಜ್ಯ ಸರ್ಕಾರ ಸರ್ಕಾರಿ ಶಾಲೆಗಳನ್ನು ಮುಚ್ಚಿದರೆ ಶೇ.31 ರಷ್ಟು ಗ್ರಾಮಗಳಲ್ಲಿ ಸರ್ಕಾರಿ ಶಾಲೆಯೇ ಇಲ್ಲದಂತಾಗುತ್ತದೆ. ಇದರಿಂದ ಬಡವರು, ತಳ ಸಮುದಾಯಗಳ ಗ್ರಾಮೀಣ ಮಕ್ಕಳು ಶಿಕ್ಷಣದಿಂದ ವಂಚಿತರಾಗುವ ಅಪಾಯವಿದೆ ಎಂದು ಸರ್ಕಾರ ಎಚ್ಚರಿಸಿದರು.
ಎಲ್ಲಾ ವಿದ್ಯಾರ್ಥಿಗಳಿಗೆ ವಸತಿ ನೀಡಿ: ರಾಜ್ಯದಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳ ಸಮಸ್ಯೆ ತೀವ್ರವಾಗಿದೆ. ಹಾಸ್ಟೆಲ್ ಸೀಟಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಸರ್ಕಾರ ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಂತೆ ಹಾಸ್ಟೆಲ್‌ಗಳ ಸಂಖ್ಯೆ ಹೆಚ್ಚು ಮಾಡಬೇಕಿತ್ತು. ಆದರೆ ಬದಲಿಗೆ ವಸತಿ ಶಿಕ್ಷಣ ಸಂಸ್ಥೆಗಳ ಪದ್ಧತಿಯಲ್ಲಿ ಎಸ್ಸಿ,ಎಸ್ಟಿ ವಿದ್ಯಾರ್ಥಿಗಳ ಹಾಸ್ಟೆಲ್ ಪ್ರವೇಶಕ್ಕೆ ಅನಗತ್ಯ ಕೌನ್ಸಿಲಿಂಗ್ ಪದ್ಧತಿ ತಂದಿರುವುದರಿಂದ ಬಡ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೀಟು ಸಿಗುತ್ತಿಲ್ಲ. ಆದ್ದರಿಂದ ಕೌನ್ಸಿಲಿಂಗ್ ಪದ್ಧತಿ ಕೈಬಿಟ್ಟು ಹಳೆ ಪದ್ಧತಿ ಮುಂದುವರಿಸಬೇಕು ಹಾಗೂ ಅರ್ಜಿ ಹಾಕಿದ ಎಲ್ಲಾ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೀಟು ಸಿಗುವಂತಾಗಲು ಹಾಸ್ಟೆಲ್‌ಗಳ ಸಂಖ್ಯೆ ಹೆಚ್ಚು ಮಾಡಬೇಕು ಎಂದು ಮುಖ್ಯಮಂತ್ರಿಗಳನ್ನು ಮನವಿಯಲ್ಲಿ ಆಗ್ರಹಿಸಲಾಗಿದೆ.
ಶೈಕ್ಷಣಿಕ ಪ್ರೋತ್ಸಾಹ ಜಾರಿಗೊಳಿಸಿ: ವಿದ್ಯಾರ್ಥಿಗಳಿಗೆ ನೀಡದೆ ಬಾಕಿ ಇರುವ ಬೈಸಿಕಲ್, ಸಮವಸ್ತÅ, ವಿದ್ಯಾರ್ಥಿ ವೇತನ, ವಿದ್ಯಾಸಿರಿ, ಪಠ್ಯಪುಸ್ತಕ, ಫೆಲೋಶಿಫ್ ಮುಂತಾದ ಶೈಕ್ಷಣಿಕ ಪ್ರೋತ್ಸಾಹ ಯೋಜನೆಗಳನ್ನು ರಾಜ್ಯ ಸರ್ಕಾರ ಕಳೆದ ಎರಡು ವರ್ಷಗಳಿಂದ ಬಾಕಿ ಉಳಿಸಿದೆ. ಇವೆಲ್ಲ ನಿಗದಿತ ಶೈಕ್ಷಣಿಕ ವೇಳೆಯೊಳಗೆ ಸಮರ್ಪಕವಾಗಿ ನೀಡಬೇಕು. ಆ ಮೂಲಕ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆ ಆಗದಂತೆ ಕ್ರಮ ವಹಿಸಬೇಕು. ಹಾಗೂ ಈ ಯೋಜನೆಗಳಿಗೆ ಅನುದಾನ ಹೆಚ್ಚಿಸಬೇಕು ಎಂಬ ಬೇಡಿಕೆಯನ್ನು ಮನವಿಯಲ್ಲಿ ಇಡಲಾಗಿದೆ.
ಪಠ್ಯ ಪುಸ್ತಕಗಳ ಕೋಮುವಾದೀಕರಣ ಹಾಗೂ ಸಾವರ್ಕರ್ ಬುಲ್‌ಬುಲ್ ಹಕ್ಕಿ ಮೇಲೆ ಪ್ರಯಾಣದ ಅವೈಜ್ಞಾನಿಕ ಪಾಠ ತೆಗೆಯಲು ಒತ್ತಾಯಿಸಿ ಎಸ್ ಎಫ್‌ಐ ಒತ್ತಾಯಿಸಿದೆ. ಪಠ್ಯಪರಿಷ್ಕರಣೆ ಹೆಸರಿನಲ್ಲಿ ರಾಜ್ಯ ಬಿಜೆಪಿ ಸರ್ಕಾರ ಕೋಮುವಾದಿ ಮತ್ತು ಸಂಘ ಪರಿವಾರದ ವಿಚಾರಗಳನ್ನು ಪಠ್ಯದ ಮೂಲಕ ವಿದ್ಯಾರ್ಥಿಗಳ ಮನಸ್ಸಿನಲ್ಲಿ ವಿಷಬೀಜ ಬಿತ್ತಲು ಮುಂದಾಗಿದೆ ಇದು ನಿಲ್ಲಬೇಕು. ಕೇಸರಿಕರಣಗೊಂಡಿರುವ ಪಠ್ಯಗಳನ್ನು ವಾಪಸ್ ಪಡೆದುಕೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಶಿಕ್ಷಕರ, ಉಪನ್ಯಾಸಕ, ಪ್ರಾಧ್ಯಾಪಕರ ಹುದ್ದೆಗಳ ಭರ್ತಿ ಮಾಡಿ ಗುಣಮಟ್ಟದ ಬೋಧನೆ ಕಲ್ಪಿಸಲು ಆಗ್ರಹಿಸಲಾಗಿದೆ. ಶಿಕ್ಷಣ ಇಲಾಖೆಯಲ್ಲಿನ ಭ್ರಷ್ಟಾಚಾರದ ತನಿಖೆ ನಡೆಸಿ ಕಡಿವಾಣ ಹಾಕಲು ಭ್ರಷ್ಟ, ಬೇಜವಾಬ್ದಾರಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರನ್ನು ವಜಾ ಮಾಡಬೇಕು ಎಂದು ಸಹ ಒತ್ತಾಯಿಸಲಾಗಿದೆ.
ಎಸ್‌ಎಫ್‌ಐ ಮುಖಂಡರಾದ ಸುನಿಲ ಪಾಟೀಲ, ಅಬ್ದುಲ್ ಶೇಖ್, ವಿರೇಶ ರಾಠೊಡ, ಶೇಖಪ್ಪ ಬಳ್ಳಾರಿ, ಮಲ್ಲಿಕಾರ್ಜುನ, ಯಲ್ಲಪ್ಪ, ಪ್ರಜುನ್ನ ಮತ್ತು ವಸಂತ ಹಾಗೂ ಮುಂತಾದವರು ಹಾಜರಿದ್ದರು.