Advertisement

ಸಾಲಮನ್ನಾ ಷರತ್ತು ಪುನರ್‌ಪರಿಶೀಲಿಸಲು ಆಗ್ರಹ

02:01 PM Jul 09, 2018 | |

ಮೈಸೂರು: ರಾಜ್ಯದ ರೈತರ ಸಂಪೂರ್ಣ ಬೆಲೆ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಇದೀಗ ಕೇವಲ ಸುಸ್ತಿ ಉಳಿಸಿಕೊಂಡಿರುವ ರೈತರ ಬೆಳೆ ಸಾಲ 2 ಲಕ್ಷ ರೂ.ಗಳನ್ನು ಮನ್ನಾ ಮಾಡುವುದಾಗಿ ತೀರ್ಮಾನಿಸಿ ರೈತ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ರಾಜ್ಯ ರೈತ ಸಂಘ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

Advertisement

ಅವಧಿ ವಿಸ್ತರಿಸಿ: ಚುನಾವಣೆಗೂ ಮುನ್ನ ರೈತರ ಸಂಪೂರ್ಣ ಸಾಲವನ್ನು ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದರು. ಹೀಗಾಗಿ ರೈತರ ಬೆಳೆ ಸಾಲ 53 ಸಾವಿರ ಕೋಟಿ ರೂ.ಗಳನ್ನು ಸಂಪೂರ್ಣವಾಗಿ ಮನ್ನಾ ಮಾಡುವ ಬಗ್ಗೆ ರಾಜ್ಯದ ರೈತರ ಸಾಕಷ್ಟು ನಿರೀಕ್ಷೆ ಹೊಂದಿದ್ದರು.

ಆದರೆ, ಕುಮಾರಸ್ವಾಮಿ ಇದೀಗ ಕೇವಲ ಸುಸ್ತಿ ಉಳಿಸಿಕೊಂಡಿರುವ ರೈತರ ಬೆಳೆ ಸಾಲ 2 ಲಕ್ಷ ರೂ. ಸಾಲ ಮನ್ನಾ ಮಾಡುವುದಾಗಿ ತೀರ್ಮಾನಿಸಿರುವ ಮೂಲಕ ರೈತರ ನಿರೀಕ್ಷೆಯನ್ನು ಹುಸಿಯಾಗಿಸಿದ್ದಾರೆ. ಜೊತೆಗೆ ಸುಸ್ತಿ ಇರುವ ರೈತರ ಬೆಳೆಸಾಲ ಮನ್ನಾ ಮಾಡಲು 2009 ಏಪ್ರಿಲ್‌ 1 ರಿಂದ 2017ರ ಡಿಸೆಂಬರ್‌ 31ರವರೆಗೆ ಸೀಮಿತಗೊಳಿಸಿರುವುದು ಸರಿಯಲ್ಲ.

ಈ ಹಿನ್ನೆಲೆಯಲ್ಲಿ ಷರತ್ತನ್ನು ಪುನರ್‌ ಪರಿಶೀಲಿಸುವ ಮೂಲಕ ಪ್ರಸ್ತುತ ನಿಗದಿಗೊಳಿಸಿರುವ ಅವಧಿಗೂ ಹಿಂದೆ ಬೆಳೆ ಸಾಲವನ್ನು ಉಳಿಸಿಕೊಂಡಿರುವ ರೈತರಿಗೂ ಅನ್ವಯವಾಗುವಂತೆ ಮೇ 31 ರವರೆಗೆ ವಿಸ್ತರಿಸಿ, ಸಂಪೂರ್ಣ ಬೆಳೆ ಸಾಲ ಮನ್ನಾ ಮಾಡಲು ಸರ್ಕಾರ ಮುಂದಾಗಬೇಕೆಂದು ಆಗ್ರಹಿಸಿದರು.

ಸಿಎಂ ನೇರ ಹೊಣೆ: ಸಾಲ ಮನ್ನಾ ನಿರೀಕ್ಷೆಯಲ್ಲಿದ್ದ ರೈತರಿಗೆ ಮುಖ್ಯಮಂತ್ರಿಗಳ ನಿರ್ಧಾರದಿಂದ ಭಾರೀ ಅಘಾತವಾಗಿದ್ದು, ಇದೇ ಕಾರಣದಿಂದ ಚಾಮರಾಜನಗರ ಜಿಲ್ಲೆಯ ರೈತ ಚಿಕ್ಕಸ್ವಾಮಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Advertisement

ಅದೇ ರೀತಿಯಲ್ಲಿ ಸಾಲಬಾಧೆಯಿಂದ ವಿಜಯಪುರ ಜಿಲ್ಲೆಯ ರೈತ ಸಂಗಣ್ಣ ಸಂಗಬಸಪ್ಪ ಕಪನೂರ ಮತ್ತು ಬಾಗಲಕೋಟೆ ಜಿಲ್ಲೆ ರಾಮಪ್ಪ ಅಂಬಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಾವಿಗೆ ಮುಖ್ಯಮಂತ್ರಿಗಳೇ ನೇರ ಹೊಣೆಯಾಗಿದ್ದಾರೆ ಎಂದು ಆಪಾದಿಸಿದ ಅವರು, ಆತ್ಮಹತ್ಯೆಗೆ ಶರಣಾಗಿರುವ ಈ ಮೂವರು ರೈತರ ಮನೆಗೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ನೀಡಬೇಕೆಂದು ಒತ್ತಾಯಿಸಿದರು.

ಬೆಲೆ ನಿಗದಿ ಹೊಸದಲ್ಲ: ಸೆಂಟ್ರಲ್‌ ಅಗ್ರಿಕಲ್ಚರ್‌ ಪ್ರೈಸ್‌ ಕಮಿಟಿ(ಸಿಎಪಿಸಿ) ವರ್ಷದಿಂದ ವರ್ಷಕ್ಕೆ ಬೆಳೆಗಳಿಗೆ ಬೆಲೆ ನಿಗದಿ ಮಾಡುತ್ತದೆ. ಇದು ಕೇಂದ್ರ ಸರ್ಕಾರ ಮಾಡಿರುವುದಲ್ಲ, ಬದಲಿಗೆ ವಾಡಿಕೆಯಂತೆ ಬೆಲೆ ನಿಗದಿ ಮಾಡಿದೆ. ಹೀಗಾಗಿ ಇದು ವಿಜೃಂಭಣೆ ಪಡೆದುಕೊಳ್ಳಲು ಕಾರಣವೇನೆಂದು ತಿಳಿದಿಲ್ಲ ಎಂದರು. 

ಸಾಲ ಮನ್ನಾ ಬಗ್ಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ನಡವಳಿಕೆ ಬಗ್ಗೆ ರೈತ ಸಂಘ ಯಾವ ಕಾರ್ಯಕ್ರಮ ರೂಪಿಸಬೇಕೆಂದು ತೀರ್ಮಾನಿಸಲು ಸೋಮವಾರ ಬೆಂಗಳೂರಿನಲ್ಲಿ ಸಂಘದ ರಾಜ್ಯ ಪದಾಧಿಕಾರಿಗಳ ಸಭೆ ಕರೆಯಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಎಂ.ಎಸ್‌. ಅಶ್ವಥ್‌ ನಾರಾಯಣ ರಾಜೇ ಅರಸ್‌, ಎಚ್‌.ಸಿ.ಲೋಕೇಶ್‌ ರಾಜೇ ಅರಸ್‌, ಹೊಸಕೋಟೆ ಬಸವರಾಜ್‌, ಪಿ.ಮರಂಕಯ್ಯ, ಮಂಡಕಳ್ಳಿ ಮಹೇಶ್‌, ನಾಗನಹಳ್ಳಿ ವಿಜೇಂದ್ರ ಹಾಜರಿದ್ದರು.

ಸರ್ಕಾರಿ ಶಾಲೆ ಮುಚ್ಚಬೇಡಿ: ಕಡಿಮೆ ಸಂಖ್ಯೆ ವಿದ್ಯಾರ್ಥಿಗಳಿದ್ದಾರೆಂಬ ಕಾರಣಕ್ಕೆ ರಾಜ್ಯದ 28 ಸಾವಿರಕ್ಕೂ ಹೆಚ್ಚು ಶಾಲೆಗಳನ್ನು ಮುಚ್ಚುವ ಸರ್ಕಾರದ ತೀರ್ಮಾನ ಸರಿಯಲ್ಲ. ಈ ನಿರ್ಧಾರದಿಂದ ಗ್ರಾಮೀಣ ಭಾಗದ ಮಕ್ಕಳ ಕಲಿಕೆಗೆ ತೀವ್ರ ಹಿನ್ನಡೆಯಾಗಲಿದ್ದು, ಆದ್ದರಿಂದ ಸರ್ಕಾರ ಕೂಡಲೇ ಈ ತೀರ್ಮಾನ ಕೈಬಿಡಬೇಕು. ಇಲ್ಲದಿದ್ದರೆ ಸಾಹಿತಿಗಳು, ಕನ್ನಡ ಚಳವಳಿಗಾರರು, ಬರಹಗಾರರು ಮತ್ತು ಜನಪರ ಹೋರಾಟಗಾರರೊಂದಿಗೆ ಪ್ರತಿಭಟನೆ ನಡೆಸುವುದಾಗಿ ರೈತ ಮುಖಂಡರು ಎಚ್ಚರಿಕೆ ನೀಡಿದರು. 

ಇಸ್ರೇಲ್‌ ಪದ್ಧತಿ ಬೇಸಾಯ ಅಗ್ರಿ ಬಿಸಿನೆಸ್‌ ಲಾಬಿಯಾಗಿದ್ದು, ಇದರಿಂದ ರೈತ ಸಮುದಾಯ ಸಂಕಷ್ಟಕ್ಕೆ ಸಿಲುಕಲಿದೆ. ಹೀಗಾಗಿ ಈ ಪದ್ಧತಿ ಪ್ರಯೋಗದ ಬಗ್ಗೆ ಬಜೆಟ್‌ನಲ್ಲಿ ಘೋಷಿಸಿರುವ ನಿರ್ಧಾರವನ್ನು ಕೈಬಿಡಬೇಕು. ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿಗೆ ಒತ್ತು ನೀಡಲು ಘೋಷಿಸಿರುವುದನ್ನು ಸಂಘ ಸ್ವಾಗತಿಸುತ್ತದೆ. 
-ಬಡಗಲಪುರ ನಾಗೇಂದ್ರ, ಪ್ರಧಾನ ಕಾರ್ಯದರ್ಶಿ, ರೈತ ಸಂಘ. 

Advertisement

Udayavani is now on Telegram. Click here to join our channel and stay updated with the latest news.

Next