ವಿಜಯಪುರ: ನಿವೃತ್ತ ವೇತನ ಪರಿಷ್ಕರಣೆಗೆ ಆಗ್ರಹಿಸಿ ಬಿಎಸ್‌ಎನ್‌ಎಲ್ ನಿವೃತ್ತ ನೌಕರರು ಗುರುವಾರದಿಂದ ನಗರದಲ್ಲಿರುವ ಪ್ರಧಾನ ವ್ಯವಸ್ಥಾಪಕರ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಆರಂಭಿಸಿದರು.
ಕೇಂದ್ರ ಸರಕಾರದ ನಿವೃತ್ತಿ ನೌಕರರ 7ನೇ ವೇತನ ಆಯೋಗದ ಶಿಫಾರಸಿನ ಅನ್ವಯಂತೆ 1-1-2016ರಿಂದ ನಿವೃತ್ತ ವೇತನ ಪರಿಷ್ಕರಿಸಿದೆ. ನಿವೃತ್ತಿ ಹೊಂದಿದವರೂ ಸಹ ಕೇಂದ್ರ ನಿವೃತ್ತಿ ವೇತನದಾರರು 1972 ಪ್ರಕಾರ ನಿವೃತ್ತಿ ವೇತನ ಪಡೆಯುತ್ತಿದ್ದಾರೆ. 2017ರಂದು ಜನೇವರಿ 1ರಿಂದ ಪಿಂಚಣಿದಾರರ ನಿವೃತ್ತಿ ವೇತನ ಪರಿಷ್ಕರಿಸಬೇಕಾಗಿದೆ. ಆದರ ದೂರವಾಣಿ ಇಲಾಖೆ ಅನೇಕ ಕಾರಣ ನೀಡಿ ನಿವೃತ್ತಿ ವೇತನ ನೀಡದೆ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ದೂರಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆ ಮುಖಂಡ ಎಸ್.ಆರ್. ನಾಯಕ, 2007ರಲ್ಲಿ ಪಿಂಚಣಿ ಪರಿಷ್ಕರಣೆ ಆಗಿತ್ತು. ನಂತರದಲ್ಲಿ ಜಾರಿಯಾದ ಏಳನೇ ವೇತನ ಆಯೋಗವು ಬಿ.ಎಸ್.ಎನ್.ಎಲ್. ನೌಕರರಿಗೆ ಔದ್ಯೋಗಿಕ ತುಟ್ಟಿ ಭತ್ಯೆ ಸಿಗುವ ಕಾರಣದಿಂದಾಗಿ, ಪಿಂಚಣಿಯನ್ನು ಪರಿಷ್ಕರಿಸಲಿಲ್ಲ. ಹೀಗಾಗಿ ಬಿ.ಎಸ್.ಎನ್.ಎಲ್. ನೌಕರರಿಗೆ ಈಗ 1-1-2017ರಿಂದ ಪಿಂಚಣಿ ಪರಿಷ್ಕರಣೆ ಆಗಬೇಕಿದೆ. ನಿವೃತ್ತ ನೌಕರರ ಪಿಂಚಣಿ ಪರಿಷ್ಕರಣೆಗೂ, ಸೇವೆಯಲ್ಲಿರುವ ಬಿ.ಎಸ್.ಎನ್.ಎಲ್. ನೌಕರರ ವೇತನ ಪರಿಷ್ಕರಣೆಗೂ ಯಾವುದೇ ಸಂಬಂಧವಿರುವುದಿಲ್ಲ. ಆದರೂ ಪಿಂಚಣಿ ಪರಿಷ್ಕರಣೆ ವಿಷಯದಲ್ಲಿ ವಿಳಂಬ ನೀತಿ ಅನುಸರಿಲಾಗುತ್ತಿದೆ
ಎಂದು ಕಿಡಿ ಕಾರಿದರು.
2007ರಲ್ಲಿ ಅನುಷ್ಠಾನಕ್ಕೆ ಬಂದ ಎರಡನೇ ವೇನ ಪರಿಷ್ಕರಣೆಯ ಸಂದರ್ಭದಲ್ಲಿ ಪಿಂಚಣಿ ಪರಿಷ್ಕರಣೆಯ ಆದೇಶವು 2011ರಲ್ಲಿ ನೀಡಲಾಗಿತ್ತು. ಈ ರೀತಿ ವಿಳಂಬ ಮಾಡದೇ ತ್ವರಿತವಾಗಿ 3ನೇ ವೇತನ ಪರಿಷ್ಕರಣೆ ಆದೇಶದ ಸಂದರ್ಭದಲ್ಲೇ ಪಿಂಚಣಿ ಪರಿಷ್ಕರಣೆಯ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.
ಕೆ.ಜಿ. ದೇಶಪಾಂಡೆ, ಎಂ.ಡಿ.ಸೂರ್ಯವಂಶಿ, ಪ್ರಕಾಶ ಜೀರಂಕಲಗಿ, ಸಿ.ಎಸ್. ಹಿರೇಮಠ, ಕೆ.ಆರ್. ಸಾವಳಸಂಗ ಮಾತನಾಡಿದರು. ಎಸ್.ಎಲ್. ಕುಲಕರ್ಣಿ, ಎಂ.ಜಿ. ಬಿಜ್ಜರಗಿ, ಡಿ.ಎಸ್.ಎನ್.ಇ.ಎ. ವಿ.ಆರ್. ತೇಲಗಾರ, ವಿ.ಡಿ.ನಾಯಕ, ಎಸ್.ಎನ್. ಚಿಕ್ಕಣ್ಣವರ, ಎಸ್.ಎಂ. ಹಗ್ಗದ, ಪಿ.ಐ. ಗಿರಾಣಗಲ್ಲಿ, ಎಸ್.ಆರ್. ಮಕಾನದಾರ, ಬಾಗಲಕೋಟೆ, ವಿಜಯಪುರ ಜಿಲ್ಲೆಯ ಬಿ.ಎಸ್.ಎನ್. ಎಲ್. ಯೂನಿಯನ್ ಈ ಸಂಘಟನೆಗಳ ಪದಾಧಿಕಾರಿಗಳು ಬಹುಸಂಖ್ಯೆಯಲ್ಲಿ ಉಪಸ್ಥಿತರಿದ್ದರು.