Advertisement

Govt.,: ಆರ್ಥಿಕ ಹೊರೆ ತಗ್ಗಿಸಲು ನಿಗಮ-ಮಂಡಳಿ ವಿಲೀನ?

01:24 AM Oct 01, 2024 | Team Udayavani |

ಬೆಂಗಳೂರು: ಒಂದೆಡೆ 80ಕ್ಕೂ ಅಧಿಕ ನಿಗಮ-ಮಂಡಳಿಗಳ ಅಧ್ಯಕ್ಷರು/ಉಪಾಧ್ಯಕ್ಷರ ಹುದ್ದೆಗಳಿಗೆ ಪೈಪೋಟಿ ನಡೆದಿದೆ. ಮತ್ತೊಂದೆಡೆ ಆಕಾಂಕ್ಷಿಗಳ ಸಂಖ್ಯೆ ಮೂರ್‍ನಾಲ್ಕು ಪಟ್ಟು ಇರುವು ದರಿಂದ ಸದಸ್ಯರ ಆಯ್ಕೆಗೆ ಸಮಿತಿ ಮಾಡಿದ್ದು ಅಂತಿಮಗೊಳಿಸಲು ಕಸರತ್ತು ನಡೆದಿದೆ.

Advertisement

ಈ ಮಧ್ಯೆಅದೇ ನಿಗಮ-ಮಂಡಳಿಗಳು ಸರಕಾರಕ್ಕೆ ಹೊರೆ ಯಾಗುತ್ತಿದ್ದು, ವಿಲೀನಗೊಳಿಸುವ ನಿಟ್ಟಿನಲ್ಲಿ ಸಾಧ್ಯಾಸಾಧ್ಯತೆಗಳ ಪರಿಶೀಲನೆಗೆ ಆಡಳಿತ ಸುಧಾರಣ ಆಯೋಗ-2 ಮುಂದಾಗಿದೆ.

ರಾಜ್ಯದಲ್ಲಿ 164 ವಿವಿಧ ನಿಗಮ-ಮಂಡಳಿ ಗಳಿವೆ. ಅವುಗಳಲ್ಲಿ 52-53 ಮಾತ್ರ ಕ್ರಿಯಾಶೀಲವಾಗಿವೆ. ಈ ನಡುವೆ ಅವುಗಳ ನಿರ್ವಹಣೆ ವೆಚ್ಚ ಮೂರ್‍ನಾಲ್ಕು ಪಟ್ಟು ಹೆಚ್ಚಳವಾಗಿದೆ. ಇದರಿಂದ ಸರಕಾರದ ಮೇಲೆ ಆರ್ಥಿಕ ಹೊರೆ ಬೀಳುತ್ತಿದೆ. ಇದನ್ನು ತಗ್ಗಿಸಲು “ಕ್ರಿಯಾಶೀಲವಲ್ಲದ ನಿಗಮ-ಮಂಡಳಿಗಳನ್ನು ವಿಲೀನಗೊಳಿಸುವ ಅಗತ್ಯವಿದೆ. ಸಾಧ್ಯತೆಯನ್ನು ಪರಿಶೀಲಿಸಲು ವಿವರವಾದ ವಿಶ್ಲೇಷಣೆ ಆರಂಭಿಸಲಾಗಿದೆ’ ಎಂದು ಆಡಳಿತ ಸುಧಾರಣ ಆಯೋಗದ ಅಧ್ಯಕ್ಷ ಆರ್‌.ವಿ. ದೇಶಪಾಂಡೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಅನಗತ್ಯ ನಿಗಮ-ಮಂಡಳಿಗಳನ್ನು ರದ್ದುಗೊಳಿಸಲು ಶಿಫಾರಸು ಮಾಡುತ್ತೀರಾ ಎಂದಾಗ, ಅದು ರಾಜಕೀಯ ವಿಚಾರವಾಗಿದ್ದು ಸರಕಾರ ನಿರ್ಧಾರ ಕೈಗೊಳ್ಳಲಿದೆ. ಎಷ್ಟೋ ನಿಗಮ-ಮಂಡಳಿಗಳಿಗೆ ಏನು ಕೆಲಸ ಮಾಡಬೇಕು ಅಂತ ನಿರ್ದಿಷ್ಟವಾಗಿ ಗೊತ್ತೇ ಇಲ್ಲ. ಹಾಗಾಗಿ ಆಯೋಗವು ಎಲ್ಲಿ ಕೆಲಸ ಇಲ್ಲವೋ ಅಥವಾ ಯಾವುವು ನಿಷ್ಕ್ರಿಯವಾಗಿವೆಯೋ ಅವುಗಳನ್ನು ಗುರುತಿಸಿ, ಪಾರದರ್ಶಕವಾಗಿ ಅಗತ್ಯ ಶಿಫಾರಸು ಮಾಡಲಿದೆ. ಅದನ್ನು ಆಧರಿಸಿ ಸರಕಾರ ಸೂಕ್ತ ತೀರ್ಮಾನ ಕೈಗೊಳ್ಳಬೇಕಾಗುತ್ತದೆ’ ಎಂದರು.

ಬಿಪಿಎಲ್‌ ಮಾನದಂಡ ಪರಿಷ್ಕರಣೆ
ಇದಲ್ಲದೆ ಅನರ್ಹರು ಆದ್ಯತಾ ಪಡಿತರ ಚೀಟಿ (ಬಿಪಿಎಲ್‌) ಹೊಂದಿ ದ್ದಾರೆ. ಇದರಿಂದಲೂ ಸರಕಾರಕ್ಕೆ ಸಾಕಷ್ಟು ಹೊರೆ ಆಗುತ್ತಿದೆ. ಈ ಹಿನ್ನೆಲೆ ಯಲ್ಲಿ ಬಿಪಿಎಲ್‌ಗೆ ಈಗಿರುವ ಮಾನದಂಡಗಳನ್ನು ಪರಿಶೀಲಿಸಲು, ಆದಾಯ ಪ್ರಮಾಣಪತ್ರ ನೀಡುವ ಪ್ರಕ್ರಿಯೆಯನ್ನೂ ಪರಿಶೀಲಿಸಲು ಹೆಚ್ಚುವರಿ ಮುಖ್ಯಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಉಪ ಸಮಿತಿ ರಚಿಸಲಾಗಿದೆ. ಇದು ಸರಕಾರದ ಪ್ರಾಯೋಜಿತ ಯೋಜನೆಗಳ ಬಗ್ಗೆ ಪರಿಶೀಲನೆ ಮತ್ತು ಸಲಹೆ ನೀಡಲಿದೆ ಎಂದರು.

Advertisement

ಆಯೋಗದ ಶಿಫಾರಸುಗಳು
ಕಳೆದ ಜನವರಿಯಲ್ಲಿ ಆಯೋಗದ ಅಧ್ಯಕ್ಷರಾಗಿ ಆರ್‌.ವಿ. ದೇಶಪಾಂಡೆ ಅಧಿಕಾರ ವಹಿಸಿಕೊಂಡಿದ್ದು ಈ ಅವಧಿಯಲ್ಲಿ 19 ಇಲಾಖೆಗಳಿಗೆ ಸಂಬಂಧಿಸಿದಂತೆ ಮಾಡಿದ ಶಿಫಾರಸುಗಳ ಪ್ರಗತಿ ಹೀಗಿದೆ.
-2,871 ಶಿಫಾರಸು ಮಾಡಲಾಗಿದೆ
-853 ಶಿಫಾರಸುಗಳನ್ನು ಅನುಷ್ಠಾನಗೊಳಿಸಲಾಗಿದೆ
-592 ಅನುಷ್ಠಾನದ ವಿವಿಧ ಹಂತದಲ್ಲಿವೆ
-245 ಸರಕಾರದ ಮಟ್ಟದಲ್ಲಿ ಬಾಕಿ ಉಳಿದ ಶಿಫಾರಸುಗಳು
-1,181 ಇಲಾಖೆ ಹಂತದಲ್ಲಿ ಬಾಕಿ ಇರುವ ಶಿಫಾರಸುಗಳು

ಏಕೆ ಈ ಕ್ರಮ?
-ಒಟ್ಟು 164 ನಿಗಮ-ಮಂಡಳಿ
-ಸಕ್ರಿಯವಾಗಿರುವುದು ಕೇವಲ 52-53 ಮಾತ್ರ
-ಅನಗತ್ಯ ನಿಗಮ- ಮಂಡಳಿ ಗಳಿಂದ ಸರಕಾರಕ್ಕೆ ಹೊರೆ
-ಆಯೋಗದ ಅಧ್ಯಕ್ಷ ಆರ್‌. ವಿ. ದೇಶಪಾಂಡೆಯಿಂದ ವಿಲೀನದ ಸುಳಿವು

ಹೊರೆ ತಗ್ಗಿಸಲು ಆಯೋಗದ ಉಪಕ್ರಮಗಳು
-ಅನರ್ಹ ಬಿಪಿಎಲ್‌ ರದ್ದುಗೊಳಿಸುವುದು, ಈ ಕಾರ್ಡ್‌ ಹೊಂದಲು ಇರುವ ಮಾನದಂಡಗಳ ಪರಿಶೀಲನೆಗೆ ಉಪಸಮಿತಿ
-ಇಲಾಖೆಗಳು, ನಿಗಮ-ಮಂಡಳಿಗಳನ್ನು ವಿಲೀನಗೊಳಿಸಲು ಪರಿಶೀಲನೆ
– ಸರಕಾರಿ ಯೋಜನೆಗಳು ಮತ್ತು ಕಾರ್ಯಕ್ರಮಗಳ ಸಮಗ್ರ ಪರಿಶೀಲನೆ
-ಬಹುತೇಕ ಸರಕಾರಿ ಸೇವೆಗಳನ್ನು ನಗದುರಹಿತ, ಆನ್‌ಲೈನ್‌, ಎಂಡ್‌-ಟು-ಎಂಡ್‌ ಸೇವೆಗಳಾಗಿ ಪರಿವರ್ತನೆ
– ಸಹಾಯಕ ಹುದ್ದೆಗಳನ್ನು ಅಗತ್ಯವಿದ್ದಷ್ಟು ಇಟ್ಟುಕೊಂಡು, ಉಳಿದವುಗಳನ್ನು ತಾಂತ್ರಿಕ ಹುದ್ದೆಗಳಾಗಿ ಪರಿವರ್ತನೆ
– ಕೆಲವು ತಾಂತ್ರಿಕ ಹುದ್ದೆಗಳನ್ನು ರೈತ ಸಂಪರ್ಕ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, ಅಟಲ್‌ ಜೀ ಜನಸ್ನೇಹಿ ಕೇಂದ್ರ, ಪೊಲೀಸ್‌ ಠಾಣೆಗಳಂತಹ ಕಚೇರಿಗಳಲ್ಲಿ ಬಳಸಿಕೊಳ್ಳುವುದು.

81 ನಿಗಮ-ಮಂಡಳಿಗಳ ನೇಮಕಾತಿ ಇನ್ನೂ ಬಾಕಿ
ಪ್ರಸ್ತುತ 83 ನಿಗಮ-ಮಂಡಳಿಗಳಿಗೆ ಅಧ್ಯಕ್ಷರು/ ಉಪಾಧ್ಯಕ್ಷರ ನೇಮಕಾತಿ ಮಾಡಲಾಗಿದ್ದು 81 ಬಾಕಿ ಇವೆ. 1,300ಕ್ಕೂ ಅಧಿಕ ಸದಸ್ಯರು/ ನಿರ್ದೇಶಕರ ಆಯ್ಕೆ ಪ್ರಕ್ರಿಯೆ ನಡೆದಿದೆ. 5 ಸಾವಿರಕ್ಕೂ ಅಧಿಕ ಅರ್ಜಿಗಳು ಬಂದಿದ್ದು ಸಮಿತಿಯು ಜನಪ್ರತಿನಿಧಿಗಳಿಗೆ ಇಂತಿಷ್ಟು ಹೆಸರುಗಳನ್ನು ಶಿಫಾರಸು ಮಾಡುವಂತೆ ಕೋಟಾ ವ್ಯವಸ್ಥೆ ಮಾಡಿದೆ.

ಆಯೋಗವು ಉಳಿದ 20 ಇಲಾಖೆಗಳಿಗೆ ಸಂಬಂಧಿಸಿದಂತೆ 2,168 ಶಿಫಾರಸು ಮಾಡಿದ್ದು ಈ ಪೈಕಿ ಇದುವರೆಗೆ ಕೇವಲ 12 ಶಿಫಾರಸುಗಳು ಅನುಷ್ಠಾನಗೊಂಡಿವೆ. 192 ಸರಕಾರದ ಮಟ್ಟದಲ್ಲಿ ಮತ್ತು 1,771 ಇಲಾಖೆ ಹಂತದಲ್ಲಿ ಬಾಕಿ ಇವೆ. ಶಿಫಾರಸುಗಳ ಅನುಷ್ಠಾನ ಪ್ರಕ್ರಿಯೆ ನಿರೀಕ್ಷೆಗಿಂತ ತುಂಬ ನೀರಸವಾಗಿದೆ.
– ಆರ್‌.ವಿ. ದೇಶಪಾಂಡೆ, ಅಧ್ಯಕ್ಷರು, ಆಡಳಿತ ಸುಧಾರಣ ಆಯೋಗ

Advertisement

Udayavani is now on Telegram. Click here to join our channel and stay updated with the latest news.

Next