ಕೊಪ್ಪ: ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಡಬ್ಬಲ್ ಎಂಜಿನ್ ಬಿಜೆಪಿ ಸರ್ಕಾರಕ್ಕೆ ಅರಣ್ಯ ವಾಸಿಗಳ ಸಂಕಷ್ಟಗಳು ಕಾಣಿಸುತ್ತಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದರೂ ಇನ್ನೂ ಮೂಲ ಸೌಕರ್ಯಗಳನ್ನು ನೀಡಲು ಸಾಧ್ಯವಾಗಿಲ್ಲ ಎಂದು ರಾಜ್ಯ ರೈತಸಂಘದ ಪ್ರಧಾನ ಕಾರ್ಯದರ್ಶಿ ಬಿ.ಆರ್. ಬಸವರಾಜ್ ಹೇಳಿದರು.
ಬಾಳಗಡಿಯಲ್ಲಿರುವ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಜನಶಕ್ತಿ ಸಂಘಟನೆಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅರಣ್ಯ ವಾಸಿಗಳ ಮೇಲೆ ವಿವಿಧ ಹೆಸರಿನಲ್ಲಿ ಯೋಜನೆಗಳನ್ನು ಜಾರಿಗೆ ತಂದು ಒಕ್ಕಲ್ಲೆಬ್ಬಿಸುವ ತಂತ್ರ ರೂಪಿಸುತ್ತಿವೆ. ಅರಣ್ಯ, ಬುಡಕಟ್ಟು, ಗಿರಿಜನ ವಾಸಿಗಳ ಮೇಲೆ ಸರ್ಕಾರಗಳು ಗಧಾ ಪ್ರಹಾರ ಮಾಡುತ್ತಿದೆ ಎಂದು ದೂರಿದರು.
ಹೋರಾಟಗಾರ ಕಲ್ಕುಳಿ ವಿಠಲ್ ಹೆಗ್ಡೆ ಮಾತನಾಡಿ, ಮಲೆನಾಡಿನಲ್ಲಿ ಅರಣ್ಯ ಸಮಸ್ಯೆಗಳು ಹಲವು ವರ್ಷಗಳಿಂದ ಕಾಡುತ್ತಿವೆ. 20 ವರ್ಷಗಳ ಹಿಂದೆ ಸುಪ್ರೀಂ ಕೋರ್ಟ್ 20 ಮರಗಳು ಇದ್ದಲ್ಲಿ ಅರಣ್ಯವೆಂದು ಹೊರಡಿಸಿದ ಆದೇಶವು ಜನದ್ರೋಹಿಯಾಗಿದೆ. ಅರಣ್ಯ ವಾಸಿಗಳಿಗೆ ಹಕ್ಕುಪತ್ರಗಳು ಸಿಗುತ್ತಿಲ್ಲ ಎಂದರು.
ಡೀಮ್ಡ್ ಫಾರೆಸ್ಟ್, ಕಸ್ತೂರಿ ರಂಗನ್ ವರದಿ ಇಂತಹ ಯೋಜನೆಗಳನ್ನು ಜಾರಿಗೆ ತಂದು ಜನ ವಿರೋಧಿ ಕಾಯ್ದೆಯನ್ನು ಸರ್ಕಾರ ಮಾಡುತ್ತಿದೆ. ಇಲ್ಲಿ ಹುಲಿಯೋಜನೆ ಅವಶ್ಯಕತೆ ಇಲ್ಲ, ಇಲ್ಲಿಗೆ ಹುಲಿ ಯೋಜನೆ ಬಂದಿದೆ. ಇದರ ಹಿಂದೆ ಷಡ್ಯಂತ್ರವಿದೆ ಎಂದು ಆರೋಪಿಸಿದ ಅವರು, ಮಲೆನಾಡ ವಾಸಿಗಳು ಎಚ್ಚೆತ್ತು ಹೋರಾಟದ ಮೂಲಕ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಬೇಕು ಎಂದು ಕರೆ ನೀಡಿದರು.
ಪ್ರತಿಭಟನೆಗೂ ಮುನ್ನ ಕುವೆಂಪು ವೃತ್ತದಿಂದ ಬಸ್ ನಿಲ್ದಾಣದವರೆಗೆ ಮೆರವಣಿಗೆ ನಡೆಸಿದರು. ರೈತಸಂಘದ ಮುಖಂಡ ನವೀನ್ ಕರುವಾನೆ, ಬಿಎಲ್‌ಪಿ ಮುಖಂಡ ಆನಂದ್ ಬೆಳಗೊಳ ಮಾತನಾಡಿದರು. ಜನಶಕ್ತಿ ಸಂಘಟನೆ ಕಾರ್ಯದರ್ಶಿ ಕೆ.ಎಲ್. ಅಶೋಕ್, ವೆಂಕಟೇಶ್, ಸುರೇಶ್ ಗಡಿಕಲ್ ಮುಂತಾದವರಿದ್ದರು.