Advertisement

ಜ್ಯೇಷ್ಠತೆ ವಿಸ್ತರಣಾ ಕಾಯ್ದೆ ಅನುಷ್ಠಾನಕ್ಕೆ ಆಗ್ರಹ

12:36 PM Jun 29, 2018 | |

ಮೈಸೂರು: ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿರುವ ಸರ್ಕಾರದ ನಾಗರಿಕ ಸೇವೆಗಳಲ್ಲಿರುವ ನೌಕರರಿಗೆ ತತ್ಪರಿಣಾಮದ ಜ್ಯೇಷ್ಠತೆಯನ್ನು ವಿಸ್ತರಿಸುವ ಕಾಯ್ದೆ-2017 ಅನ್ನು ಮುಂದಿನ ಒಂದು ವಾರದೊಳಗೆ ಪೂರ್ಣಪ್ರಮಾಣದಲ್ಲಿ ಜಾರಿಗೊಳಿಸುವಂತೆ ಮಾಜಿ ಮೇಯರ್‌ ಪುರುಷೋತ್ತಮ್‌ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು. 

Advertisement

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ಬಿ.ಕೆ.ಪವಿತ್ರ ಪ್ರಕರಣದಲ್ಲಿನ ಮೌಖೀಕ ನಿರ್ದೇಶನದಂತೆ ಸುಪ್ರಿಂಕೋರ್ಟ್‌ ನೀಡಿದ ಆದೇಶವನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಇದರ ಪರಿಣಾಮ ರಾಜ್ಯದಲ್ಲಿ ಅಂದಾಜು 50ಕ್ಕೂ ಹೆಚ್ಚು ನೌಕರರು ಮತ್ತು ಅಧಿಕಾರಿಗಳು ಜೇಷ್ಠತೆಯಲ್ಲಿ ಕೆಳ ಕ್ರಮಾಂಕದಲ್ಲಿ ನಿಯೋಜಿತರಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ 2017ರಲ್ಲಿ ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿರುವ ಸರ್ಕಾರಿ ನೌಕರರಿಗೆ ತತ್ಪರಿಣಾಮದ ಜ್ಯೇಷ್ಠತೆಯನ್ನು ವಿಸ್ತರಿಸುವ ವಿಧೇಯಕವನ್ನು ಮಂಡಿಸಿದ್ದು, ರಾಷ್ಟ್ರಪತಿಗಳು ಸಹ ಇದಕ್ಕೆ ಅಂಕಿತ ಹಾಕಿ ಜೂ.15ರಂದು ರಾಜ್ಯಕ್ಕೆ ಕಳುಹಿಸಿದ್ದಾರೆ. ಆದ್ದರಿಂದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ  ಮುಂದಿನ ಒಂದು ವಾರದಲ್ಲಿ ಮಸೂದೆಯನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸಬೇಕೆಂದು ಒತ್ತಾಯಿಸಿದರು. 

ಅಲ್ಲದೆ ಕಾಯ್ದೆ ಅನುಷ್ಠಾನದಿಂದ ಹಿಂಬಡ್ತಿ ಹೊಂದಿರುವ ಎಲ್ಲಾ ಪರಿಶಿಷ್ಟ ಜಾತಿ/ವರ್ಗಗಳ ನೌಕರರ ಹಿಂಬಡ್ತಿ ಆದೇಶವನ್ನು ರದ್ದುಪಡಿಸಿ ಯಥಾಸ್ಥಿತಿ ಮುಂದುವರೆಸಬೇಕು. ಆ ಮೂಲಕ ಹಿಂಬಡ್ತಿ ಹೊಂದಿದ ನೌಕರರಿಗೆ ನಿಗದಿಯಾದ ವೇತನ ರದ್ದುಗೊಳಿಸಿ, ಜ್ಯೇಷ್ಠತಾ ಪಟ್ಟಿ ತಯಾರಿಕೆಯಲ್ಲಿ ಲೋಪವಾಗದಂತೆ ಅಧಿಕಾರಿಗಳಿಗೆ ಸೂಕ್ತ ತರಬೇತಿ ನೀಡಬೇಕಿದೆ.

ಜತೆಗೆ 50 ಸಾವಿರ ನೌಕರರ ಹಿಂಬಡ್ತಿಗೆ ಕಾರಣರಾದ ಆಡಳಿತ ಸುಧಾರಣಾ ಇಲಾಖೆ ಪ್ರಧಾನ ಕಾರ್ಯದರ್ಶಿ, ಉಪಕಾರ್ಯದರ್ಶಿ, ಅಧೀನ ಕಾರ್ಯದರ್ಶಿಗಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕಿದೆ ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆ ರಾಜಾಧ್ಯಕ್ಷ ದ್ಯಾವಪ್ಪನಾಯಕ, ಅಹಿಂದ ಮುಖಂಡ ಸೋಮಯ್ಯ ಮಲೆಯೂರು, ಎಪಿಎಂಸಿ ಸದಸ್ಯ ಜವರಪ್ಪ ಹಾಜರಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next