Advertisement

ಸೌರ ಯುಗಾದಿ; ಜೀವನೋತ್ಸಾಹ, ನವಚೈತನ್ಯ ತುಂಬುವ ಹಬ್ಬ ವಿಷು

05:22 PM Apr 16, 2024 | Team Udayavani |

ಹಳೆಯದನ್ನು ಮರೆತು ಹೊಸತನ್ನು ಸ್ವಾಗತಿಸುವ, ನಿನ್ನೆಯ ಕಹಿಯನ್ನು ಮರೆತು ಸಿಹಿ ನೆನಪುಗಳೊಂದಿಗೆ ನಾಳೆಯ ಸಿಹಿ-ಕಹಿ ತುಂಬಿದ ಬದುಕಿಗೆ ಸ್ವಾಗತ ಕೋರುವ ಹಬ್ಬವೇ ಯುಗಾದಿ. ಸೌರಮಾನ ಕಾಲಗಣನೆ ಸೂರ್ಯನ ಚಲನೆಯನ್ನು ಆಧರಿಸಿದೆ. ಸೌರಮಾನ ಪದ್ಧತಿಯನ್ನು ಅನುಸರಿಸುವವರಿಗೆ ಸೌರ ಯುಗಾದಿ ಹೊಸ ವರ್ಷದ ಅಂದರೆ ಹೊಸ ಸಂವತ್ಸರದ ಮೊದಲ ದಿನ. ಕರಾವಳಿ ಜಿಲ್ಲೆಗಳಲ್ಲಿ ಸೌರ ಯುಗಾದಿಯನ್ನು ಅತ್ಯಂತ ಸಾಂಪ್ರದಾಯಿಕ ರೀತಿಯಲ್ಲಿ ಆಚರಿಸಲಾಗುತ್ತದೆ.

Advertisement

ಸೌರ ಯುಗಾದಿಯನ್ನು ವಿಷು ಹಬ್ಬ ಎಂದೂ ಕರೆಯಲಾಗುತ್ತದೆ. ಹಬ್ಬದ ನಿಮಿತ್ತ ಮನೆಯನ್ನು ಮಾವು-ಬೇವಿನ ಎಲೆಗಳ ತಳಿರುತೋರಣಗಳಿಂದ ಅಲಂಕರಿಸಲಾಗುತ್ತದೆ. ಯುಗಾದಿಯ ಹಿಂದಿನ ದಿನ (ಮೇಷ ಸಂಕ್ರಾಂತಿಯಂದು)ರಾತ್ರಿ ಪೂಜೆಗೆ ಮೊದಲು ದೇವರ ಮುಂದೆ ಕಣಿಯನ್ನು ಇಡಲಾಗುತ್ತದೆ.

ದೇವರ ಮುಂಭಾಗದಲ್ಲಿ ಅಷ್ಟದಳ ಪದ್ಮಾಕಾರದ ರಂಗೋಲಿ ಯನ್ನು ಬರೆದು ಅದರ ಮೇಲೆ ಹರಿವಾಣದಲ್ಲಿ ಅಕ್ಕಿಯನ್ನು ತುಂಬಿ ಸಿಪ್ಪೆ ಇರುವ ತೆಂಗಿನಕಾಯಿ, ವೀಳ್ಯದೆಲೆ, ಅಡಿಕೆ, ವಸಂತಕಾಲದ ಮಾವು, ಹಲಸು, ಮುಳ್ಳುಸೌತೆ, ಹಸಿ ಗೋಡಂಬಿ ಇವೇ ಮೊದಲಾದ ಕಾಯಿಪಲೆÂ, ಫ‌ಲಪುಷ್ಪಗಳನ್ನು ಇಟ್ಟು ಬಂಗಾರದ ಹಾರವನ್ನು ಹಾಕಲಾಗುತ್ತದೆ. ಅದರಲ್ಲಿಯೇ ಒಂದು ಕನ್ನಡಿಯನ್ನು ದೇವರಿಗೆ ಬೆನ್ನು ಹಾಕಿ ನೋಡುಗರಿಗೆ ಪ್ರತಿಬಿಂಬ ಕಾಣುವಂತೆ ಇಟ್ಟು ಹೊಸವರ್ಷದ ಪಂಚಾಂಗ, ಕುಂಕುಮ, ದೀಪಗಳನ್ನು ಇಡಲಾಗುತ್ತದೆ. ಈ ಜೋಡಣೆಯನ್ನು “ಕಣಿ’ ಎಂದು ಕರೆಯುತ್ತಾರೆ. ಕಣಿ ಇಟ್ಟ ಮೇಲೆ ರಾತ್ರಿ ಪೂಜೆ, ಮಂಗಳಾರತಿ ಬೆಳಗಬೇಕು.

ಕಣಿ ದರ್ಶನ
ಯುಗಾದಿಯಂದು ಬೆಳಗ್ಗೆ ಸೂರ್ಯೋದಯಕ್ಕಿಂತ 2 ಗಂಟೆ ಮುಂಚಿತವಾಗಿ ಎದ್ದು (ಉಷಃಕಾಲ) ಮುಖ ತೊಳೆದು ದೇವರಿಗೆ ನಮಿಸಿ, ಕಣಿದರ್ಶನ ಮಾಡಬೇಕು. ಪೂರ್ಣ ಫ‌ಲ ಧಾನ್ಯ ಸುವರ್ಣಾದಿ ಗಳನ್ನು ನೋಡಿ ದೀಪದ ಬೆಳಕಿನಲ್ಲಿ ಕನ್ನಡಿಯಲ್ಲಿ ಮುಖವನ್ನು ನೋಡಿ ಕುಂಕುಮವನ್ನು ಹಚ್ಚಿಕೊಂಡು ಮನೆಯಲ್ಲಿರುವ ಹಿರಿಯರಿಗೆ ನಮಿಸಬೇಕು. ಇದು ಯುಗಾದಿ ಹಬ್ಬದ ಮೊದಲ ಆಚರಣೆ.

ಸೌರವರ್ಷಾದಿ, ಚಾಂದ್ರ ಯುಗಾದಿ, ಬಲಿಪಾಡ್ಯ, ನರಕಚತುರ್ದಶಿ – ಈ ನಾಲ್ಕು ದಿನಗಳಲ್ಲಿ ಎಣ್ಣೆ ಹಚ್ಚಿ ತೈಲಾಭ್ಯಂಗ ಸ್ನಾನವನ್ನು ಮಾಡದಿದ್ದರೆ ಜೀವನ ನರಕವಾಗುತ್ತದೆ. ತೈಲಾಭ್ಯಂಗಸ್ನಾನವನ್ನು ಮುಗಿಸಿ ನಿತ್ಯಾನುಷ್ಠಾನ, ದೇವರ ಪ್ರಾರ್ಥನೆ, ಜಪಾದಿಗಳನ್ನು ನಡೆಸಿ ನೂತನ ವಸ್ತ್ರಧಾರಣೆಯನ್ನು ಮಾಡಬೇಕು. ಮಗದೊಮ್ಮೆ ದೇವರಿಗೂ ಗುರು-ಹಿರಿಯರಿಗೂ ವಂದಿಸಿ ಪಂಚಾಂಗ ಶ್ರವಣವನ್ನು ಮಾಡಬೇಕು.

Advertisement

ಪಂಚಾಗ ಪಠನ, ಶ್ರವಣ
ಮನೆಯ ಯಜಮಾನ ಕಣಿಯಲ್ಲಿ ಇಟ್ಟಿರುವ ಹೊಸ ವರ್ಷದ ಪಂಚಾಂಗವನ್ನು ತೆಗೆದು ನಮಿಸಿ ಓದಬೇಕು. ಮನೆಯ ಸದಸ್ಯರೆಲ್ಲರೂ ಕುಳಿತು ಕೇಳಬೇಕು. ಪಂಚಾಂಗ ಪುಸ್ತಕದ ಆರಂಭದ ಪುಟಗಳಲ್ಲಿ ಬರೆದ ಸಂವತ್ಸರಫ‌ಲ, ಹೊಸ ವರ್ಷದ ರಾಜ, ಮಂತ್ರಿ ಮುಂತಾದ ವಿಷಯಗಳನ್ನು ಓದಿದ ಮೇಲೆ ಹೊಸ ಸಂವತ್ಸರದಲ್ಲಿ ಗ್ರಹಣಗಳು, ಅಧಿಕ ಮಾಸ ಇತ್ಯಾದಿ ವಿಶೇಷಗಳನ್ನೂ ಗಮನಿಸಬೇಕು. ಕೊನೆಯಲ್ಲಿ ಯುಗಾದಿ ದಿನದ ತಿಥಿ-ವಾರ-ನಕ್ಷತ್ರ- ಯೋಗ – ಕರಣಗಳೆಂಬ ಪಂಚಾಂಗವನ್ನು ಶ್ರವಣ ಮಾಡಬೇಕು.

ಆ ಬಳಿಕ ಜೀವನದಲ್ಲಿ ಒದಗುವ ಸುಖ-ದುಃಖಗಳ, ಸಿಹಿ-ಕಹಿಗಳ ಪ್ರತೀಕವೆನಿಸುವ ಬೇವು- ಬೆಲ್ಲಗಳನ್ನು ದೇವರಿಗೆ ನಿವೇದಿಸಿ, ಶತಾಯುಷ್ಯದ ಗಟ್ಟಿ ದೇಹಕ್ಕಾಗಿ, ಸರ್ವಸಂಪತ್ಸಮೃದ್ಧಿಗಾಗಿ, ಸರ್ವಾರಿಷ್ಟ ನಿವಾರಣೆಗಾಗಿ ಬೇವು-ಬೆಲ್ಲಗಳನ್ನು ಸವಿಯಬೇಕು. ನಮ್ಮ ಕರಾವಳಿ ಪ್ರದೇಶದಲ್ಲಿ ಬೇವು-ಬೆಲ್ಲಗಳನ್ನು ಸವಿಯುವ ಸಂಪ್ರದಾಯವಿಲ್ಲ. ಅದರ ಬದಲಾಗಿ ಎಳ್ಳು-ಬೆಲ್ಲ ಸವಿಯುವ ಪದ್ಧತಿ ಕೆಲವೆಡೆ ರೂಢಿಯಲ್ಲಿದೆ.
ತೆಂಗಿನ ಕಾಯಿ ಹಾಲು, ಮುಳ್ಳುಸೌತೆ ಅಥವಾ ತರಕಾರಿ ಗಳನ್ನು ಹಾಕಿದ ಪಾಯಸವನ್ನು ದೇವರಿಗೆ ನಿವೇದಿಸಿ ಕುಟುಂಬದ ಸದಸ್ಯರೆಲ್ಲ ಒಟ್ಟು ಸೇರಿ ಮಧ್ಯಾಹ್ನದ ಭೋಜನವನ್ನು ಸವಿಯುತ್ತಾರೆ. ವಿಷುವಿನ ದಿನದಂದು ನೂತನ ಅಳಿಯನನ್ನು ಹಬ್ಬಕ್ಕೆ ಆಹ್ವಾನಿಸುವ ಪದ್ಧತಿಯೂ ಕೆಲವರಲ್ಲಿದೆ. ಅಲ್ಲದೆ ಅಕ್ಕತಂಗಿಯರು ಅಣ್ಣ ತಮ್ಮಂದಿರನ್ನು ತಮ್ಮ ಮನೆಗೆ ಆಹ್ವಾನಿಸಿ ಹಬ್ಬದ ಅಡುಗೆ ಯನ್ನು ಬಡಿಸಿ ಪ್ರೀತಿವಿಶ್ವಾಸ ಹಂಚಿಕೊಳ್ಳುತ್ತಾರೆ.

ಯುಗಾದಿಯ ದಿನದಂದು ನಾವು ಯಾವ ಸತ್ಕಾರ್ಯವನ್ನು ಮಾಡುತ್ತೇವೆಯೋ ಅದನ್ನು ವರ್ಷ ಪೂರ್ತಿ ನಡೆಸುತ್ತೇವೆಂಬ ನಂಬಿಕೆ ಜನಸಾಮಾನ್ಯರಲ್ಲಿ ಪ್ರಚಲಿತವಿದೆ. ಯುಗಾದಿ ದಿನ ಮಾಡಿದ ಸತ್ಸಂಕಲ್ಪ ವನ್ನು ಸತ್ಯಸಂಕಲ್ಪನಾದ ಭಗವಂತನು ಈಡೇರಿಸುತ್ತಾ ನೆಂಬ ವಿಶ್ವಾಸವಿದೆ.

ಹೊಸತನವೇ ಮಾನವನ ಸಿರಿನೋಟ. ಪ್ರಗತಿಯ ಶುಭನೋಟ. ಹಳೆಯ ಕಹಿನೆನಪುಗಳನ್ನು ಮರೆತು ನವನವೋನ್ಮೆàಶಶಾಲಿಯಾದ ಚೈತನ್ಯ-ಹುರುಪು ಪಡೆಯಬೇಕೆಂಬುದೇ ಯುಗಾದಿ ಹಬ್ಬದ ಸಂದೇಶ. ಪ್ರತೀ ವರ್ಷವೂ ಹಳೆ ಬೇರು ಹೊಸ ಚಿಗುರಿನೊಂದಿಗೆ ಮರು ಜನ್ಮ ಪಡೆಯುವ ಪ್ರಕೃತಿಯಂತೆ ನಮ್ಮ ಬದುಕೂ ನಳನಳಿಸಿ, ಕಂಗೊಳಿಸುವಂತಾಗಲಿ, ಕ್ರೋಧಿ ಸಂವತ್ಸರ ನಮ್ಮೆಲ್ಲರ ನಿರೀಕ್ಷೆ, ಕನಸುಗಳನ್ನು ನನಸಾಗಿಸಲಿ ಎಂದು ಆಶಿಸೋಣ.

Advertisement

Udayavani is now on Telegram. Click here to join our channel and stay updated with the latest news.

Next