Advertisement

Congress ಭಿನ್ನಮತ ಸ್ಫೋಟ: ಅನ್ಸಾರಿಯನ್ನು ಹೊರ ಹಾಕುವಂತೆ ಶ್ರೀನಾಥ ಆಗ್ರಹ

08:44 PM Apr 08, 2024 | Team Udayavani |

ಗಂಗಾವತಿ: ಕೈ ಅಭ್ಯರ್ಥಿ ಕೆ.ರಾಜಶೇಖರ ಹಿಟ್ನಾಳ ಅವರನ್ನು ಸೋಲಿಸಲು ಅಂತರಿಕವಾಗಿ ಬಿಜೆಪಿ ಜತೆ ಒಪ್ಪಂದ ಮಾಡಿಕೊಂಡು,ಕಾಂಗ್ರೆಸ್ ಹಿರಿಯ ಮುಖಂಡರ ವಿರುದ್ಧ ಬಾಯಿಗೆ ಬಂದ ಹಾಗೆ ಟೀಕೆ ಮಾಡಿ ಪಕ್ಷ ಹಾಗೂ ಕೈ ಅಭ್ಯರ್ಥಿ ಕೆ.ರಾಜಶೇಖರ ಹಿಟ್ನಾಳ ಇಮೇಜ್ ಹಾಳು ಮಾಡುತ್ತಿರುವ ಮಾಜಿ ಸಚಿವ ಇಕ್ಬಾಲ್ ಅನ್ಸಾರಿಯನ್ನು ಕೂಡಲೇ ಕಾಂಗ್ರೆಸ್ ನಿಂದ ಉಚ್ಛಾಟಿಸುವಂತೆ ಮಾಜಿ ಎಂಎಲ್ಸಿ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ಆರ್.ಶ್ರೀನಾಥ ಕೆಪಿಸಿಸಿ ರಾಜ್ಯಾಧ್ಯಕ್ಷರನ್ನು ಒತ್ತಾಯಿಸಿದ್ದಾರೆ.

Advertisement

ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಅನ್ಸಾರಿ ನಿವಾಸದಲ್ಲಿ ಇತ್ತೀಚಿಗೆ ಜರುಗಿದ ಕಾಂಗ್ರೆಸ್ ಸಭೆ ಅದು ಅನ್ಸಾರಿ ಸ್ವಾರ್ಥಕ್ಕಾಗಿ ಮಾಡಿದ ಸಭೆಯಾಗಿತ್ತು.ವೇದಿಕೆಯಲ್ಲಿದ್ದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ಎಸ್ ತಂಗಡಗಿಯವರು ಅನ್ಸಾರಿ ಮಾತಿಗೆ ವಿರೋಧ ವ್ಯಕ್ತಪಡಿಸದೇ ಇರುವುದಯ ಸರಿಯಲ್ಲ.ಮಾಜಿ ಸಂಸದ ಎಚ್.ಜಿ.ರಾಮುಲು,ಮಾಜಿ ಸಚಿವ ಎಂ.ಮಲ್ಲಿಕಾರ್ಜುನ ನಾಗಪ್ಪ ಸೇರಿ ಹಲವರನ್ನು ಅನ್ಸಾರಿ ಬಹಳ ಕೆಟ್ಟ ಶಬ್ದಗಳ ಮೂಲಕ ಟೀಕೆ ಮಾಡಿದ್ದಾರೆ.ಲೋಕಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಮತಯಾಚನೆ ಮಾಡದೇ ಸ್ವ ಪಕ್ಷದವರನ್ನು ಬೈಯಲು ಅನ್ಸಾರಿ ಕಾಂಗ್ರೆಸ್ ವೇದಿಕೆಯನ್ನು ಬಳಕೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ಸರಕಾರ ರಾಜ್ಯದಲ್ಲಿದ್ದು ಸರಕಾರದ ಯೋಜನೆಗಳನ್ನು ಮುಂದಿಟ್ಟುಕೊಂಡು ಮತದಾರರ ಹತ್ತಿರ ಮತ ಕೇಳದೆ ಹಳೆಯ ಪುರಾಣ ಹೇಳುವ ಮೂಲಕ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆ. ನನಗೆ ಅನ್ಸಾರಿ ಜತೆ ಯಾವುದೇ ದ್ವೇಷ ಇಲ್ಲ. ನಮ್ಮ ಮನೆಯಲ್ಲಿ ಬೆಳೆದ ವ್ಯಕ್ತಿ ಈಗ ವಯಸ್ಸನ್ನು ಲೆಕ್ಕಿಸದೇ ನಮ್ಮ ತಂದೆ ಎಚ್.ಜಿ.ರಾಮುಲು ಅವರನ್ನು ಟೀಕೆ ಮಾಡುವುದು ಸರಿಯಲ್ಲ.ಮೊದಲು ಲೋಕಸಭಾ ಚುನಾವಣೆಯಲ್ಲಿ ಕೈ ಅಭ್ಯರ್ಥಿಯನ್ನು ಗೆಲ್ಲಿಸಿ ಮೇ 07 ನಂತರ ಪರಸ್ಪರ ಟೀಕೆ ಮಾಡೋಣ. ಕೈ ನಾಯಕರನ್ನು ಟೀಕೆ ಮಾಡಿ ಸಮಯ ಕಳೆದು ಕೈ ಅಭ್ಯರ್ಥಿಯನ್ನು ಸೋಲಿಸುವ ಅನ್ಸಾರಿ ಷಡ್ಯಂತ್ರ ಕಾಂಗ್ರೆಸ್ ಕಾರ್ಯಕರ್ತರಿಗೆ ಅರ್ಥವಾಗಿದೆ ಎಂದು ಕಿಡಿ ಕಾರಿದರು.

ತಂಗಡಗಿ ವಿಫಲ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾನು,ಮಲ್ಲಿಕಾರ್ಜುನ ನಾಗಪ್ಪ ಹಾಗೂ ಇಕ್ಬಾಲ್ ಅನ್ಸಾರಿ ಮೂರು ಜನ ಟಿಕೆಟ್ ಆಕಾಂಕ್ಷಿಗಳಾಗಿದ್ದೇವು ಅದೃಷ್ಟ ಅನ್ಸಾರಿಗೆ ಟಿಕೆಟ್ ದೊರಕಿತು. ಟಿಕೆಟ್ ಪಡೆದ ಅನ್ಸಾರಿ ಪ್ರಚಾರ ಹಾಗೂ ಪಕ್ಷದ ಕಾರ್ಯಕ್ರಮಗಳಿಗೆ ನಮ್ಮನ್ನು ಕರೆದಿಲ್ಲ. ನನ್ನನ್ನು ಹೊಸಪೇಟೆ ಕ್ಷೇತ್ರಕ್ಕೆ ಉಸ್ತುವಾರಿ ಹಾಕಿದ್ದರಿಂದ ಅಲ್ಲಿಗೆ ತೆರಳಿ ಗವಿಯಪ್ಪನವರ ಪರವಾಗಿ ಪ್ರಚಾರ ಮಾಡಿದೆ. ನಮ್ಮನ್ನು ಅನ್ಸಾರಿ ಆ ಜನ್ಮ ವೈರಿಗಳೆಂದು ಬೈಯುತ್ತಿದ್ದಾರೆ.ನಾನು ಎಂದಿಗೂ ಅನ್ಸಾರಿಯನ್ನು ಶತ್ರು ಎಂದು ಟೀಕೆ ಮಾಡುವುದಿಲ್ಲ. ಈಗಲೂ ಜತೆಯಾಗಿ ಕೆಲಸ ಮಾಡಲು ನಾವು ಸಿದ್ಧವಾಗಿದ್ದೇವೆ. ಜಿಲ್ಲಾ ಉಸ್ತುವಾರಿ ಸಚಿವರಾಗಿ ಶಿವರಾಜ್ ತಂಗಡಗಿ ವಿಫಲರಾಗಿದ್ದು ರಾಯರೆಡ್ಡಿ ಅಥವಾ ಕೆ.ರಾಘವೇಂದ್ರ ಹಿಟ್ನಾಳ ಅವರಿಗೆ ಸಚಿವ ಸ್ಥಾನ ನೀಡುವಂತೆ ಲೋಕಸಭಾ ಚುನಾವಣೆ ನಂತರ ಒತ್ತಾಯಿಸಲಾಗುತ್ತದೆ ಎಂದರು.

ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಖಚಿತವಾಗಿದೆ. ಪಕ್ಷ ಸಂಘಟನೆಯ ಮೂಲಕ ಚುನಾವಣೆಯಲ್ಲಿ ಭರ್ಜರಿ ಗೆಲುವು ಪಡೆಯಲಾಗುತ್ತದೆ ಎಂದರು.ಈ ಸಂದರ್ಭದಲ್ಲಿ ಮಾಜಿ ಸಚಿವ ಎಂ.ಮಲ್ಲಿಕಾರ್ಜುನ ನಾಗಪ್ಪ, ಸರ್ವೇಶ ವಸ್ತ್ರದ್,ಅರಸಿನಕೇರಿ ಹನುಮಂತಪ್ಪ,ಶಾಮೀದ್ ಮನಿಯಾರ್,ರಾಜಶೇಖರ ಮುಸ್ಟೂರು,ಚೆಗೂರು ಹನುಮಂತಪ್ಪ, ಬಿ.ಕೃಷ್ಣಪ್ಪ‌ಕೋಡಿ ನಾಗೇಶ,ಸಿದ್ದಯ್ಯ ಗುರುವಿನ್, ಸೋಮನಾಥ ಪಟ್ಟಣಶೆಟ್ಟಿ,ಸಂದೀಪ, ಅಯೂಬ್,ರಮೇಶ ಗೌಳಿ ಸೇರಿ ಅನೇಕರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next