ಜೇವರ್ಗಿ: ಸರಕಾರಿ ಗೋಮಾಳ, ಅರಣ್ಯ ಭೂಮಿ ಜಮೀನು ಸಾಗುವಳಿ ಮಾಡಿರುವ ರೈತರ ಹೆಸರಿಗೆ ಹಕ್ಕು ಪತ್ರ ವಿತರಿಸುವಂತೆ ಒತ್ತಾಯಿಸಿ ಶುಕ್ರವಾರ ಕರ್ನಾಟಕ ಪ್ರಾಂತ ರೈತ ಸಂಘ ತಾಲೂಕು ಘಟಕದ ವತಿಯಿಂದ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಕಳೆದ ಅನೇಕ ವರ್ಷಗಳಿಂದ ಗೋಮಾಳ, ಅರಣ್ಯ ಭೂಮಿ ಸಾಗುವಳಿ ಮಾಡುತ್ತಾ ಬಂದಿರುವ ರೈತರಿಗೆ ಹಕ್ಕು ಪತ್ರ ವಿತರಿಸದೇ ವಿನಾಕಾರಣ ಕಾಲಹರಣ ಮಾಡಲಾಗುತ್ತಿದೆ. ಇದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಸರ್ಕಾರ ರೈತರ ನೆರವಿಗೆ ಧಾವಿಸಿ ಹಕ್ಕು ಪತ್ರ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಕೆಲವು ದಿನಗಳಿಂದ ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದ ತೊಗರಿ, ಹತ್ತಿ ಬೆಳೆಗಳು ಹಳದಿ ಬಣ್ಣಕ್ಕೆ ತಿರುಗಿ ನಾಶವಾಗಿವೆ. ಕಳೆದ ಮೂರ್‍ನಾಲ್ಕು ವರ್ಷಗಳಿಂದ ಅತಿವೃಷ್ಟಿ, ಅನಾವೃಷ್ಟಿ, ಕೊರೊನಾದಿಂದ ರೈತರು ತೀವ್ರ ತೊಂದರೆ ಅನುಭವಿಸಿದ್ದಾರೆ. ಆದ್ದರಿಂದ ಕೂಡಲೇ ಸರ್ಕಾರ ಪ್ರಸಕ್ತ ವರ್ಷ ಹಾಗೂ ಕಳೆದ ವರ್ಷ ಬೆಳೆಹಾನಿಯಾದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕೂಟದ ಸರ್ಕಾರ ಸಾಲ ಮನ್ನಾ ಮಾಡಿದ್ದು, ರೈತರಿಗೆ ಹೊಸ ಸಾಲ ಮಂಜೂರಿ ಮಾಡ ಬೇಕು. ಮಳೆಗೆ ಹಾನಿಯಾದ ಮನೆಗಳಿಗೆ 50ಸಾವಿರ ರೂ., ಬಿದ್ದ ಮನೆಗಳಿಗೆ 5ಲಕ್ಷ ರೂ.ಪರಿಹಾರ ಕೊಡಬೇಕು. 60 ವರ್ಷದ ವಯೋವೃದ್ಧ ರೈತರಿಗೆ ಮತ್ತು ಕಾರ್ಮಿಕರಿಗೆ ಕನಿಷ್ಟ ತಿಂಗಳಿಗೆ 7500ರೂ. ಮಾಸಾಶನ ಮಂಜೂರು ಮಾಡಬೇಕು. ರೈತರು ಬೆಳೆದ ಬೆಳೆಗಳಿಗೆ ಡಾ| ಸ್ವಾಮಿನಾಥನ್ ವರದಿ ಪ್ರಕಾರ ಬೆಂಬಲ ಬೆಲೆ ನಿಗದಿಪಡಿಸಬೇಕು. ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿರುವ ರೈತರ ಸಾಲ ಮನ್ನಾ ಮಾಡಬೇಕು. ಬಿಪಿಎಲ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿದರೂ ಕಾರ್ಡ್ ನೀಡುತ್ತಿಲ್ಲ. ಕೂಡಲೇ ಅರ್ಜಿ ಸಲ್ಲಿಸಿದ ಎಲ್ಲರಿಗೂ ಹೊಸ ರೇಷನ್ ಕಾರ್ಡ ವಿತರಣೆ ಮಾಡಬೇಕು ಎಂದು ಒತ್ತಾಯಿಸಿದರು. ನಂತರ ತಹಶೀಲ್ದಾರ್ ಸಂಜೀವಕುಮಾರ ದಾಸರ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ವೆಂಕೋಬರಾವ ವಾಗಣಗೇರಾ, ಸಕ್ರೆಪ್ಪ ಹರನೂರ, ಮಲ್ಕಪ್ಪ ಹರನೂರ, ಶಂಕರಲಿಂಗ ರೇವನೂರ, ಉಸ್ಮಾನ್ ಅಲಿ ಹರನೂರ, ನಾಗಪ್ಪ ಸಂಕೇಶ್ವರ ಕೋಳಕೂರ ಹಾಗೂ ರೈತರು, ಕೂಲಿಕಾರ್ಮಿಕರು, ಮಹಿಳೆಯರು ಹಾಗೂ ಇನ್ನಿತರರು ಇದ್ದರು.