ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣೆ ನೀತಿ ಸಂಹಿತೆ ಮುಗಿದಿರುವ ಹಿನ್ನಲೆಯಲ್ಲಿ ಕೂಡಲೇ ಜಿಲ್ಲಾಡಳಿತ ರೈತರಿಗೆ ಬಗರ್‌ಹುಕುಂ ಸಾಗುವಳಿ ಚೀಟಿಗಳ ವಿತರಣೆಗೆ ಕ್ರಮ ವಹಿಸಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಕಚೇರಿ ಅಧೀಕ್ಷಕರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಬಿ.ಎನ್.ಕೃಷ್ಣಪ್ಪ ನೇತೃತ್ವದಲ್ಲಿ ಜಿಲ್ಲಾಡಳಿತದ ಭವನದ ಎದುರು ಪ್ರತಿಭಟನೆ ನಡೆಸಿದ ಪ್ರಾಂತ ರೈತ ಸಂಘದ ಕಾರ್ಯಕರ್ತರು, ಬಗರ್‌ಹುಕುಂ ಸಾಗುವಳಿದಾರರು ಮಂಜೂರಾತಿಗಾಗಿ ಸಲ್ಲಿಸಿರುವ ಫಾರಂ ನಂ. 57, 53 ಮತ್ತು 50ರ ಅರ್ಜಿಗಳನ್ನು ಪರಿಶೀಲಿಸಿ ಸಾಗುವಳಿ ಚೀಟಿ ನೀಡಲು ಭೂ ಮಂಜೂರಾತಿ ಸಮಿತಿಗಳನ್ನು ರಚಿಸಬೇಕೆಂದು ಆಗ್ರಹಿಸಿ ಘೋಷಣೆ ಕೂಗಿದರು.
ಪರಿಹಾರಕ್ಕೆ ಆಗ್ರಹ: ಗೋಮಾಳ ಹಾಗೂ ಅರಣ್ಯ ಜಮೀನುಗಳಲ್ಲಿ ಉಳುಮೆ ಮಾಡುತ್ತಿರುವ ರೈತರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು. ಜಿಲ್ಲೆಯಲ್ಲಿ ಬರ ಹಾಗೂ ನೆರೆಯಿಂದ ಹಾನಿಗೀಡಾದ ಬೆಳೆಗಳಿಗೆ ತಕ್ಷಣ ಪರಿಹಾರ ವಿತರಿಸಬೇಕೆಂದ ಪ್ರತಿಭಟನಾನಿರತ ರೈತರು ಆಗ್ರಹಿಸಿದರು.
600 ರೂ. ಕೂಲಿ ನೀಡಲಿ: ಬರಗಾಲದ ಹಿನ್ನಲೆಯಲ್ಲಿ ಪಡಿತರ ಪ್ರಮಾಣವನ್ನು ಹೆಚ್ಚಳ ಮಾಡಿ ಜಿಲ್ಲೆಯ ರೈತರಿಗೆ ಹಾಗೂ ಜಾನುವಾರುಗಳಿಗೆ ಸಮರ್ಪಕವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕೆಂದರು. ಉದ್ಯೋಗ ಖಾತ್ರಿ ಯೋಜನೆಯಡಿ ಕನಿಷ್ಠ ವರ್ಷಕ್ಕೆ 300 ದಿನ ಕೆಲಸ ಹಾಗೂ ದಿನಕ್ಕೆ 600 ರೂ. ಕೂಲಿ ಹಣ ನೀಡಬೇಕೆಂದು ಒತ್ತಾಯಿಸಿದರು. ಉದ್ಯೋಗ ಖಾತ್ರಿ ಯೋಜನೆಯಡಿ ಸಾಕಷ್ಟು ಅಕ್ರಮಗಳು ನಡೆದಿದ್ದು, ಅಧಿಕಾರಿಗಳು ಕೂಡ ಶಾಮೀಲಾಗಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಸಂಘದ ಜಿಲ್ಲಾಧ್ಯಕ್ಷ ಬಿ.ಎನ್.ಮುನಿಕೃಷ್ಣಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೆನ್ನರಾಯಪ್ಪ, ಜಿಪಂ ಸದಸ್ಯರಾದ ರವಿಚಂದ್ರರೆಡ್ಡಿ, ಆರ್.ಚಂದ್ರಶೇಖರರೆಡ್ಡಿ, ಎ.ಎಂ.ಶ್ರೀರಾಮಪ್ಪ, ಆರ್.ಎನ್.ರಾಜು, ಎಚ್.ಎನ್.ಚಂದ್ರಶೇಖರ ರೆಡ್ಡಿ, ಎಲ್.ವೆಂಕಟೇಶ್, ವೆಂಕಟರೆಡ್ಡಿ, ಹೇಮಚಂದ್ರ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ರೈತ ಸಂಘದ ಕಾರ್ಯಕರ್ತರು ಭಾಗವಹಿಸಿದ್ದರು.
ಹೋಬಳಿಗೊಂದು ಗೋಶಾಲೆ ತೆರೆಯಿರಿ: ಜಿಲ್ಲೆಯಲ್ಲಿ ಬರಗಾಲದ ಪರಿಣಾಮ ಮೇವು ಸಿಗುತ್ತಿಲ್ಲ. ಹೈನೋದ್ಯಮ ನಂಬಿರುವ ರೈತರಿಗೆ ಸಂಕಷ್ಟು ಎದುರಾಗಿದ್ದು, ಪಶು ಆಹಾರ ಬೆಲೆ ಮಾರುಕಟ್ಟೆಯಲ್ಲಿ ಗಗನಕ್ಕೇರಿದೆ. ಆದ್ದರಿಂದ ಸರ್ಕಾರ ಕೂಡಲೇ ಜಿಲ್ಲೆಗೊಂದು ಗೋಶಾಲೆ ತೆರೆಯಬೇಕು. ಉಚಿತವಾಗಿ ಮೇವು ವಿತರಿಸಬೇಕು. ಪಶು ಆಹಾರವನ್ನು ಕ್ವಿಂಟಲ್‌ಗೆ ಶೇ.50 ರಷ್ಟು ರಿಯಾಯಿತಿ ದರದಲ್ಲಿ ವಿತರಿಸಬೇಕೆಂದು ಜಿಲ್ಲಾಡಳಿತ ಮೂಲಕ ರಾಜ್ಯ ಸರ್ಕಾರಕ್ಕೆ ಪ್ರಾಂತ ರೈತ ಸಂಘದ ಕಾರ್ಯಕರ್ತರು ಮನವಿ ಸಲ್ಲಿಸಿದರು.