Advertisement

ಕಟೀಲಿನಲ್ಲಿ ಹೊರಠಾಣೆ, ಸಿಸಿ ಕೆಮರಾಕ್ಕೆ ಆಗ್ರಹ

02:00 AM Jul 11, 2017 | Karthik A |

ಕಟೀಲು: ಕಟೀಲು – ಉಲ್ಲಂಜೆ ರಸ್ತೆಯ ಕೊಂಡೇಲದಲ್ಲಿ ಮೋರಿ ಕುಸಿಯುವ ಸ್ಥಿತಿಯಲ್ಲಿದೆ. ಸಮೀಪದ ಚರಂಡಿಗೆ ಕೊಳೆತ ಮಾಂಸ, ಕೋಳಿ ತ್ಯಾಜ್ಯವನ್ನು ಬಿಸಾಡಲಾಗುತ್ತಿದೆ. ಇದರ ವಿರುದ್ಧ ಕಠಿನ ಕ್ರಮ ಕೈಗೊಳ್ಳಬೇಕು ಎಂದು ಸೋಮವಾರ ಗ್ರಾಮ ಪಂಚಾಯತ್‌ ಅಧ್ಯಕ್ಷೆ  ಗೀತಾ ಪೂಜಾರಿ ಅಧ್ಯಕ್ಷತೆಯಲ್ಲಿ ಜರಗಿದ ಕಟೀಲು ಗ್ರಾಮ ಪಂಚಾಯತ್‌ ಗ್ರಾಮಸಭೆಯಲ್ಲಿ ಆಗ್ರಹಿಸಿದರು. ಕಟೀಲು ಗ್ರ್ಯಾಂಡ್‌ ಸಭಾಭವನದಲ್ಲಿ ಜರಗಿದ ಸಭೆಯಲ್ಲಿ ಗ್ರಾಮಸ್ಥರು ವಿವಿಧ ವಿಷಯಗಳ ಕುರಿತು ಅಧಿಕಾರಿಗಳ ಗಮನ ಸೆಳೆದಿದರು. ಕ‌ಟೀಲು ರಥಬೀದಿಯಲ್ಲಿ ಸಿಸಿ ಕೆಮರಾ ಆಳವಡಿಸಬೇಕು, ಕಟೀಲಿನ ಸಿತ್ಲ ಅಣೆಕಟ್ಟಿಗೆ ಹಲಗೆ ಹಾಕಬೇಕು, ಮಿತ್ತಬೈಲು ಕುಡಿಯವ ನೀರಿನಲ್ಲಿ ಕೊಳಚೆ ಸಂಗ್ರಹವಾಗಿ ಸಮೀಪದ ನಿವಾಸಿಗಳು ವಿವಿಧ ರೀತಿಯ ಜ್ವರದಿಂದ ಬಳಲುವಂತಾಗಿದೆ ಎಂದು ಗ್ರಾಮಸ್ಥರು ದೂರಿದರು.

Advertisement

ಉದಯವಾಣಿ ವರದಿ ಪ್ರತಿಧ್ವನಿ
ಕೊಂಡೇಲ ಬಳಿಯ ಮೋರಿ ಸಮಸ್ಯೆಯನ್ನು ಸರಿಪಡಿಸಬೇಕು, ಎದ್ದು ಹೋಗಿರು ರಸ್ತೆಯ ಇಂಟರ್‌ಲಾಕ್‌ಗಳನ್ನು ಸರಿಪಡಿಸಬೇಕು ಹಾಗೂ ತ್ಯಾಜ್ಯ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದರು. ಈ ಬಗ್ಗೆ ಉದಯವಾಣಿ ಸುದಿನದಲ್ಲಿ ಪ್ರಕಟವಾಗಿರುವ ವರದಿಗಳ ಬಗ್ಗೆಯೂ ಗ್ರಾಮಸ್ಥರಾದ ಲೋಕಯ್ಯ ಕೊಂಡೇಲ ಹಾಗೂ ಚಂದ್ರ ಶೆಟ್ಟಿ ಸಭೆಯ ಗಮನ ಸೆಳೆದರು. ಇದಕ್ಕೆ ಉತ್ತರಿಸಿದ ಎಂಜಿನಿಯರ್‌ ವಿಭಾಗದ ಅಧಿಕಾರಿ ಪ್ರಶಾಂತ್‌ ಆಳ್ವ, ಇದು ಜಿಲ್ಲಾ ಪಂಚಾಯತ್‌ ರಸ್ತೆ ಆಗಿದ್ದು, ಸಮಸ್ಯೆಗೆ ಅಲ್ಲಿಂದಲೇ ಸಮಸ್ಯೆಗೆ ಪರಿಹಾರ ಸಿಗಬೇಕು. ನಾವು ಇದರ ಬಗ್ಗೆ ಅಂದಾಜು ಪಟ್ಟಿ ಮಾಡಲು ಸಾಧ್ಯವಿಲ್ಲ ಎಂದರು.

ಕಟೀಲಿನಲ್ಲಿ ಹೊರಠಾಣೆ ಅಗತ್ಯ
ಕಟೀಲು ದೇವಸ್ಥಾನದ ಪರಿಸರದಲ್ಲಿ ದಿನನಿತ್ಯ ಟ್ರಾಫಿಕ್‌ ಜಾಮ್‌  ಉಂಟಾಗುತ್ತಿದೆ ಹಾಗೂ ಕುದುರು ಮುಂತಾದೆಡೆಗಳಲ್ಲಿ ಗಾಂಜಾ ದಂಧೆ ನಡೆಯುತ್ತಿರುವುದರಿಂದ ಕಟೀಲಿಗೆ ಶಾಶ್ವತವಾಗಿ ಹೊರಠಾಣೆ ಅಗತ್ಯವಿದೆ. ಜತೆಗೆ ಪರಿಸರದಲ್ಲಿ ಸಿ. ಸಿ. ಕೆಮರಾ ಅಳವಡಿಸಬೇಕು ಎಂದು ಗ್ರಾಮಸ್ಥರಾದ ಚಂದ್ರ ಹಾಗೂ ಸಂಜೀವ ಮಡಿವಾಳ ಆಗ್ರಹಿಸಿದರು.

ಅದಕ್ಕೆ ಸ್ಪಂದಿಸಿದ ಬಜಪೆ ರಾಣೆಯ ಎಸ್‌.ಐ. ರಾಜರಾಮ  ಅವರು, ಪೊಲೀಸ್‌ ಇಲಾಖೆ ಎಲ್ಲವನ್ನು ಮಾಡಲು ಸಾಧ್ಯವಿಲ್ಲ,  ಕೆಲವು ವಿಷಯಗಳಲ್ಲಿ ಜನರ ಸಹಕಾರ ತುಂಬಾ ಅಗತ್ಯ. ಹೊರ ಠಾಣೆ ಬೇಡಿಕೆ ಬಗ್ಗೆ ಸರಕಾರಕ್ಕೆ  ಮನವಿ ಸಲ್ಲಿಸಬೇಕು ಎಂದು ಹೇಳಿದರು. ಮಿತ್ತಬೈಲು ಪರಿಸರದಲ್ಲಿ ನಳ್ಳಿಯಲ್ಲಿ ಕೊಳಚೆ ನೀರು ಬರುತ್ತಿದೆ. ಇದರಿಂದ ವೆಂಕಟೇಶ ಎಂಬವರ ಮನೆಮಂದಿ ಜ್ವರದಿಂದ ಬಳಲುತ್ತಿದ್ದಾರೆ ಎಂಬ ದೂರಿಗೆ, ನಳ್ಳಿ ವ್ಯವಸ್ಥೆಯನ್ನು ಸರಿಪಡಿಸಲಾಗುವುದು ಎಂಬ ಉತ್ತರ ಸಿಕ್ಕಿತು. ಕಟೀಲು ಬಸ್‌ ನಿಲ್ದಾಣದ ಹಿಂಬದಿಯ ಶೌಚಾಲಯದ ಮಲಿನ ನೀರು ರಸ್ತೆಯಲ್ಲಿ ಹರಿಯುತ್ತಿದೆ ಎಂಬ ಸಂಜೀವ ಮಡಿವಾಳ ಅವರ ದೂರಿಗೆ  ಸ್ಪಂದಿಸಿದ ದೇಗುಲದ ಪ್ರಬಂಧಕ ತಾರಾನಾಥ ಶೆಟ್ಟಿ,  ಅದನ್ನು ಸಕ್ಕಿಂಗ್‌ ಯಂತ್ರದ ಮೂಲಕ ವಿಲೇವಾರಿ ಮಾಡಲಾಗುತ್ತಿದೆ ಎಂದು ಹೇಳಿದರು.

ಸಿತ್ಲಬೈಲಿನಲ್ಲಿನ ಅಣೆಕಟ್ಟಿಗೆ ಹಲಗೆ ಹಾಕದ ಸಮಸ್ಯೆ ಬಗ್ಗೆ ಕೃಷಿಕ ಜಗನ್ನಾಥ ಶೆಟ್ಟಿ  ಸಭೆಯ ಗಮನ ಸೆಳೆದರು. ಕೊಂಡೇಲದ ಬಳಿ ಡಾಮರು ರಸ್ತೆ ಅಗೆದು ಪೈಪ್‌ಲೈನ್‌ ಹಾಕಲಾಗಿದೆ. ಆದರೆ ಅಲ್ಲಿ ಹೊಂಡ ಬಿದ್ದು ಸಂಚಾರಕ್ಕೆ ತೊಂದರೆ ಆಗಿದೆ. ಮಿತ್ತಬೈಲಿನಲ್ಲಿ ವಿದ್ಯುತ್‌ ತಂತಿಗಳಿಗೆ ಪೊದೆಗಳು  ಆವರಿಸಿಕೊಂಡಿದ್ದು, ಸರಿಪಡಿಸುವಂತೆ ಆಗ್ರಹಿಸಲಾಯಿತು. ತೋಟಗಾರಿಕೆ ಇಲಾಖೆಯ ಸುಕುಮಾರ್‌ ಹೆಗ್ಡೆ ನೋಡಲ್‌ ಅಧಿಕಾರಿಯಾಗಿದ್ದರು. ಕಂದಾಯ ಇಲಾಖೆಯ ಪ್ರದೀಪ್‌ ಶೆಣೈ, ಮೆಸ್ಕಾಂ ಅಧಿಕಾರಿ ಚಂದ್ರಹಾಸ್‌, ಪಶುಸಂಗೋಪನ ಇಲಾ ಖೆಯ ಸತ್ಯ ಶಂಕರ್‌, ಸಮಾಜ ಕಲ್ಯಾಣ ಇಲಾಖೆಯ ಶೀಲಾವತಿ, ಆರೋಗ್ಯ ಇಲಾಖೆಯ ಡಾ| ಭಾಸ್ಕರ ಕೋಟ್ಯಾನ್‌ ಮಾಹಿತಿ ನೀಡಿದರು. ತಾ. ಪಂ. ಸದಸ್ಯ ಸುಕುಮಾರ್‌,  ಗ್ರಾ. ಪಂ.ಉಪಾಧ್ಯಕ್ಷ ಕಿರಣ್‌ ಕುಮಾರ್‌ ಶೆಟ್ಟಿ ಉಪಸ್ಥಿತರಿದ್ದರು. ಪಿಡಿಒ ಗಣೇಶ್‌ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next