ಸ್ಟೇಟ್‌ಬ್ಯಾಂಕ್: ರೈತರು ಸಹಕಾರಿ ಸಂಘಗಳಿಂದ ಮತ್ತು ರಾಷ್ಟ್ರೀಕೃತ ಬ್ಯಾಂಕು ಗಳಿಂದ ಪಡೆದಿರುವ ಎಲ್ಲ ಸಾಲಗಳನ್ನು ಮನ್ನಾ ಮಾಡ ಬೇಕು ಎಂದು ಆಗ್ರ ಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಘಟಕದ ವತಿಯಿಂದ ಸೋಮವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಯಿತು.
ಸಂಘದ ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಕಾರ್ಯದರ್ಶಿ ರವಿಕಿರಣ್ ಪುಣಚ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಭಟ್ ಕೊಜಂಬೆ, ಸಂಚಾಲಕ ರೂಪೇಶ್ ರೈ ಅವರು ಪ್ರತಿಭಟನ ಸಭೆಯನ್ನುದ್ದೇಶಿಸಿ ಮಾತನಾಡಿದರು.
ರೈತರು ಸಹಕಾರಿ ಸಂಘಗಳಿಂದ ಪಡೆದ 50,000 ರೂ. ವರೆಗಿನ ಸಾಲ ಮನ್ನಾ ಮಾಡುವ ರಾಜ್ಯ ಸರಕಾರದ ತೀರ್ಮಾನ ಸ್ವಾಗತಾರ್ಹ. ಆದರೆ ಕೇಂದ್ರ ಸರಕಾರ ಕೂಡ ರೈತರು ವಾಣಿಜ್ಯ ಬ್ಯಾಂಕ್ ಗಳಿಂದ ಪಡೆದಿರುವ ಸಾಲವನ್ನು ಮನ್ನಾ ಮಾಡ ಬೇಕು ಎಂದು ರವಿಕಿರಣ್ ಆಗ್ರಹಿಸಿದರು.
ಪ್ರಭಾವಿ ಕೋಟ್ಯಧಿಪತಿಗಳ 6 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿರು ವುದಕ್ಕೆ ಹೋಲಿಸಿದರೆ ರಾಜ್ಯದ ರೈತರ 52,000 ಕೋಟಿ ರೂ. ಸಾಲ ಏನೇನೂ ಅಲ್ಲ. ಆದ್ದರಿಂದ ರೈತರ ಈ ಸಂಪೂರ್ಣ ಸಾಲವನ್ನು ಮನ್ನಾ ಮಾಡಬೇಕು. ಜತೆಗೆ ಕರಾವಳಿಯ ಬೆಳೆಗಳಾದ ಅಡಿಕೆ, ತೆಂಗು, ಕೊಕ್ಕೋ, ಕಾಳು ಮೆಣಸು, ರಬ್ಬರ್ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಪಡಿಸಿ, ಖರೀದಿ ಕೇಂದ್ರಗಳನ್ನು ತತ್‌ಕ್ಷಣ ಆರಂಭಿಸಬೇಕು ಎಂದು ಆಗ್ರ ಹಿಸಿದರು.
“ರೈತರ ಸಾಲ ಮನ್ನಾ ಮಾಡ ಬೇಕೆಂಬ ರೈತರ ಬೇಡಿಕೆಯು ಒಂದು ಫ್ಯಾಶನ್ ಆಗಿದೆ’ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು ನೀಡಿರುವ ಹೇಳಿಕೆಯನ್ನು ತೀವ್ರವಾಗಿ ಟೀಕಿಸಿದರು. “ರೈತರು ನಪುಂಸಕತೆಯಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ’ ಎಂಬುದಾಗಿ ಇನ್ನೋರ್ವ ಕೇಂದ್ರ ಸಚಿವರು ಹೇಳಿಕೆ ನೀಡಿರುವುದಕ್ಕೆ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಸಂಘದ ಇತರ ಪದಾಧಿಕಾರಿಗಳಾದ ತಾರಾನಾಥ ಗೌಡ, ಪ್ರಸಾಧ್ಯ ಶೆಟ್ಟಿ ಪೆರಾಬೆ, ಮಂಜುನಾಥ ರೈ ಪರಾರಿ, ಹರ್ಷ ಭಟ್ ಪುದುವೆಟ್ಟು, ರೋನಿ ಮೆಂಡೋನ್ಸಾ, ನಾರಾಯಣ ರಾವ್ ಕೊಲ್ಲಾಜೆ, ಸತ್ಯ ಶಂಕರ ಭಟ್ ಪಿಜಕೊಡಂಗೆ, ರಮೇಶ್ ಗೌಡ ನೆರಿಯ, ಸೀತಾರಾಮ ಮಡಿವಾಳ, ಸುಧಾಕರ ಜೈನ್ ನಾರಾವಿ, ಪ್ರೇಮನಾಥ ಶೆಟ್ಟಿ ಬಾಳ್ತಿಲ, ರತ್ನ ಕುಮಾರ್ ಮುಂತಾದವರು ಭಾಗವಹಿಸಿದ್ದರು.
ಪ್ರತಿಭಟನೆಯ ಬಳಿಕ 16 ವಿವಿಧ ಬೇಡಿಕೆಗಳ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಸಲ್ಲಿಸಲಾಯಿತು.