Advertisement

ವಸತಿ ನಿಲಯಗಳಿಗೆ ಸೌಲಭ್ಯ ಒದಗಿಸಲು ಆಗ್ರಹ

12:01 PM Dec 11, 2018 | |

ಮಾನ್ವಿ: ಜಿಲ್ಲೆಯ ಎಲ್ಲ ವಸತಿ ನಿಲಯಗಳ ಮೂಲ ಸೌಕರ್ಯ ಒದಗಿಸುವುದು ಸೇರಿ ತಾಲೂಕಿನಲ್ಲಿರುವ ವಿವಿಧ ಸಮಸ್ಯೆ ನಿವಾರಿಸಲು ಆಗ್ರಹಿಸಿ ದಲಿತಪರ ಸಂಘಟನೆಗಳ ಒಕ್ಕೂಟ ಹಾಗೂ ಮೇಜರ್‌ ಶಹನವಾಜ್‌ ಖಾನ್‌ ಹೈದರಾಬಾದ್‌ ಕರ್ನಾಟಕ ಸಂಘದ ಕಾರ್ಯಕರ್ತರು ಸೋಮವಾರದಿಂದ ಪಟ್ಟಣದ ಶಾಸಕರ ಭವನ ಆವರಣದಲ್ಲಿ ಆಮರಣ ಉಪವಾಸ ಸತ್ಯಾಗ್ರಹ ಆರಂಭಿಸಿದರು.

Advertisement

ಜಿಲ್ಲೆಯಲ್ಲಿನ ವಸತಿ ನಿಲಯಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಬೇಕು. ವಸತಿ ನಿಲಯಗಳಿಗೆ ಆಹಾರ ಪದಾರ್ಥಗಳ ಸರಬರಾಜು ಟೆಂಡರ್‌ ಪಡೆದು ಈಗ ಸರಬರಾಜು ನಿಲ್ಲಿಸಿರುವ ಪದ್ಮಾವತಿ ಎಂಟರ್‌ಪ್ರೈಸಿಸ್‌ ಮಾಲೀಕ ಸಾಗರ್‌ ಮಂಟು ವಿರುದ್ಧ ಕ್ರಮ ಜರುಗಿಸಬೇಕು. ವಸತಿ ನಿಲಯಗಳಿಗೆ ಸ್ವಂತ ಕಟ್ಟಡ ನಿರ್ಮಾಣ, ಶುದ್ಧ ನೀರು ಸರಬರಾಜು, ಗ್ರಂಥಾಲಯ ವ್ಯವಸ್ಥೆ, ಪ್ರವಾಸ ಭತ್ಯೆ ನೀಡುವ ವ್ಯವಸ್ಥೆಯಾಗಬೇಕು. ವಿದ್ಯಾರ್ಥಿನಿಯರ ವಸತಿ ನಿಲಯಗಳಲ್ಲಿ ಅಗತ್ಯಕ್ಕೆ ಅನುಗುಣವಾಗಿ ಶೌಚಾಲಯ, ಸ್ನಾನಗೃಹಗಳನ್ನು ನಿರ್ಮಿಸಬೇಕೆಂದು ಆಗ್ರಹಿಸಿದರು.

ತಾಲೂಕಿನ ರೈತರು, ಕೃಷಿ ಕಾರ್ಮಿಕರು ಗುಳೆ ಹೋಗುವುದನ್ನು ತಪ್ಪಿಸಬೇಕು. ಉದ್ಯೋಗ ಖಾತ್ರಿ ಯೋಜನೆ ಸರಿಯಾಗಿ ಅನುಷ್ಠಾನಗೊಳಿಸಬೇಕು.
ತಾಲೂಕಿನ ಕರೆಗುಡ್ಡದ ಹತ್ತಿರ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ತಡೆಯಬೇಕು. ತಾಲೂಕಿನಾದ್ಯಂತ ತನಿಖೆ ನಡೆಸಿ ವಕ್ಫ್ ಮಂಡಳಿ ಭೂಮಿಯನ್ನು ವಶಪಡಿಸಿಕೊಳ್ಳಬೇಕು. ಗ್ರಾಮ ಪಂಚಾಯತಿಗಳ 14ನೇ ಹಣಕಾಸು ಯೋಜನೆ ಅನುದಾನದ ದುರ್ಬಳಕೆ ತಡೆಯಬೇಕು. ಮಹಿಳಾ ಮತ್ತು
ಮಕ್ಕಳ ಕಲ್ಯಾಣ ಇಲಾಖೆಯ ಮೊಟ್ಟೆ ಖರೀದಿಯಲ್ಲಿ ನಡೆಯುತ್ತಿರುವ ಅಕ್ರಮ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಸ್ಥಳಕ್ಕೆ ಭೇಟಿ ನೀಡಿದ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಶಶಿಕಾಂತ ಶಿವಪುರೆ ಪ್ರತಿಭಟನಾಕಾರರ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದರು. ಬೇಡಿಕೆಗಳಿಗೆ ಸಂಬಂಧಿಸಿದಂತೆ ಆಯಾ ಇಲಾಖೆ ಅಧಿಕಾರಿಗಳನ್ನು ಪ್ರತಿಭಟನಾ ಸ್ಥಳಕ್ಕೆ ಕರೆಯಿಸಿ ಕ್ರಮಕ್ಕೆ ಸೂಚಿಸಲಾಗುವುದು. ಕೆಲ ಬೇಡಿಕೆಗಳನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.

ದಲಿತಪರ ಸಂಘಟನೆಗಳ ಒಕ್ಕೂಟ ಪ್ರಭುರಾಜ ಕೊಡ್ಲಿ, ಮೇಜರ್‌ ಶಹನವಾಜ್‌ ಖಾನ್‌ ಹೈದರಾಬಾದ್‌ ಕರ್ನಾಟಕ ಸಂಘದ ಸಂಸ್ಥಾಪಕ ಅಧ್ಯಕ್ಷ ಎಸ್‌.ಎಂ.ಶಾನವಾಜ್‌, ಸಂಚಾಲಕರಾದ ರಮೇಶ ಕರೇಗುಡ್ಡ, ಹೊಳೆಯಪ್ಪ ಉಟಕನೂರು, ಕರಿಯಪ್ಪ ನಕ್ಕುಂದಿ, ಯಲ್ಲಪ್ಪ, ಆಂಜನೇಯ,
ಹುಲಿಗೆಪ್ಪ ಚಿಮ್ಲಾಪುರ, ಕೃಷ್ಣ ಜಿನೂರು, ಹನುಮಂತ ಅಮರಾವತಿ, ದೇವೇಂದ್ರಪ್ಪ, ಪರಶುರಾಮ ಸಂಗಾಪುರ, ಮೌನೇಶ ತಡಕಲ್‌, ಜಗದೀಶ ಪೋತ್ನಾಳ, ಮರಿಸ್ವಾಮಿ ಮಾನ್ವಿ, ಈರಣ್ಣ ಗವಿಗಟ್‌ ಪಾಲ್ಗೊಂಡಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next