ಪಣಜಿ: ಮಹಾರಾಷ್ಟ್ರದಲ್ಲಿ ಡೆಲ್ಟಾಪ್ಲಸ್ ಕೋವಿಡ್ ರೂಪಾಂತರಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಿಂದ ಗೋವಾ ಪ್ರವೇಶಿಸುವ ಪ್ರಯಾಣಿಕರಿಗೆ ಗಡಿಯಲ್ಲಿ ರ್ಯಾಪಿಡ್ ಟೆಸ್ಟ್ ಕಡ್ಡಾಯಗೊಳಿಸಲಾಗಿದ್ದು ಗಡಿಯಲ್ಲಿಯೇ ತಪಾಸಣಾ ಕೇಂದ್ರ ಸ್ಥಾಪಿಸಲಾಗಿದೆ. ಗೋವಾ ರಾಜ್ಯ ಆರೋಗ್ಯ ಇಲಾಖೆ, ಉತ್ತರ ಗೋವಾ ಜಿಲ್ಲಾಡಳಿತ ಇವರು ಜಂಟಿಯಾಗಿ ಗಡಿಯಲ್ಲಿ ತಪಾಸಣೆ ನಡೆಸಲಾಗುತ್ತಿದೆ.
ಮಹಾರಾಷ್ಟ್ರದಿಂದ ಗೋವಾ ರಾಜ್ಯ ಪ್ರವೇಶಿಸಬೇಕಾದರೆ ಗಡಿಯಲ್ಲಿ ಕೋವಿಡ್ ತಪಾಸಣೆಗೆ ಒಳಗಾಗುವುದು ಕಡ್ಡಾಯವಾಗಿದೆ. ಒಂದು ವೇಳೆ ಕೋವಿಡ್ ಸೋಂಕು ದೃಢಪಟ್ಟರೆ ಕ್ವಾರಂಟೈ ಅಥವಾ ಆಸ್ಪತ್ರೆಗೆ ದಾಖಲಾಗುವುದು ಅನಿವಾರ್ಯವಾಗಿದೆ.
ಗೋವಾ ರಾಜ್ಯದಲ್ಲಿ ಇದುವರೆಗೂ ಡೆಲ್ಟಾ ಪ್ಲಸ್ ಕೋವಿಡ್ ರೂಪಾಂತರಿ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಗೋವಾಕ್ಕೆ ಈ ರೂಪಾಂತರಿ ತಳಿ ಹರಡದಂತೆ ತಡೆಯಲು ಗೋವಾ ಸರ್ಕಾರ ಗೋವಾ ರಾಜ್ಯದ ಗಡಿಗಳಲ್ಲಿ ತಪಾಸಣೆ ಕಡ್ಡಾಯಗೊಳಿಸಿದೆ.
ಮುಖ್ಯಮಂತ್ರಿ ಪ್ರಮೋದ ಸಾವಂತ್ ಪ್ರತಿಕ್ರಿಯೆ ನೀಡಿ- ರಾಜ್ಯದಲ್ಲಿ ಸದ್ಯ ನಡೆಯುತ್ತಿರುವ ಮೂರನೇಯ ಹಂತದ ಟೀಕಾ ಉತ್ಸವಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪ್ರತಿದಿನ ಸುಮಾರು 20,000 ಜನರಿಗೆ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ರಾಜ್ಯದ ಕೋವಿಡ್ ಪರಿಸ್ಥಿತಿ ಸುಧಾರಣೆಯಾಗುತ್ತಿದ್ದರೂ ಕೂಡ ಆತಂಕ ಕಡಿಮೆಯಾಗಿಲ್ಲ. ಕೋವಿಡ್ ಮೂರನೇಯ ಅಲೆಯ ಭೀತಿಯ ಹಿನ್ನೆಲೆಯಲ್ಲಿ ಸರ್ಕಾರ ಪರಿಸ್ಥಿತಿ ಎದುರಿಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ದೇಶದಲ್ಲಿಯೇ ಗೋವಾ ರಾಜ್ಯವು ಪ್ರಪ್ರಥಮವಾಗಿ ಸಂಪೂರ್ಣ ಲಸಿಕೆ ಪೂರ್ಣಗೊಂಡಿರುವ ರಾಜ್ಯವನ್ನಾಗಿಸಲು ಸರ್ಕಾರ ಹೆಚ್ಚಿನ ಲಕ್ಷ್ಯವಹಿಸಿದೆ ಎಂದು ಮುಖ್ಯಮಂತ್ರಿ ಸಾವಂತ್ ನುಡಿದರು.