Advertisement
ನಮ್ಗೆ ಪುಟ್ಪಾತೇ ಚೀಪ್ ಆ್ಯಂಡ್ ಬೆಸ್ಟ್– ಮಹೇಶ್ ಕೆ.
ಮಧ್ಯಾಹ್ನದ ಊಟ: ಸಂಜೆ 4.30 ಗಂಟೆ
ರಾತ್ರಿ ಊಟ: 11.30ರ ನಂತರ
ಬೆಳಗ್ಗೆ 6.30ಕ್ಕೆ ನಾನು ದೇವರ ಮುಖವನ್ನೇ ನೋಡಿರೋದಿಲ್ಲ. ಅದಾಗಲೇ ಗ್ರಾಹಕರ ಮುಂದೆ ನಿಂತಿರುತ್ತೇನೆ. ರಾತ್ರಿ 11.30ರ ವರೆಗೆ ನಾನ್‌ಸ್ಟಾಪ್ ಆಗಿ ಸಿಟಿ ಸುತ್ತುತ್ತೇನೆ. ಮೂಲತಃ ತುಮಕೂರಿನ ಶಿರಾದವನಾದ ನನಗೆ, ಆರಂಭದಲ್ಲಿ ಈ ಬೆಂಗಳೂರಿನ ಟ್ರಾಫಿಕ್ ನೋಡಿ, ಚಿಂತೆಯಾಗಿತ್ತು. ಸ್ವಿಗ್ಗಿಯಲ್ಲಿ ಡೆಲಿವರಿ ಬಾಯ್ ಆಗಿ ಸೇರಿಕೊಂಡ ಮೇಲೆ, ಕಳೆದ ಒಂದು ವರ್ಷದಿಂದ ಈ ಟ್ರಾಫಿಕ್ ಏನೂ ಮಹಾ ಅಲ್ಲ ಅಂತನ್ನಿಸಿಬಿಟ್ಟಿದೆ. ಒಮ್ಮೆ ಹೀಗಾಯ್ತು… ರಾತ್ರಿ 9 ಗಂಟೆಗೆ ಡೆಲಿವರಿ ಕೊಡಲು ಹೊರಟಿದ್ದೆ, ಇದ್ದಕ್ಕಿದ್ದಂತೆ ಬೈಕ್ ಪಂಕ್ಚರ್ ಆಯ್ತು. ಪಂಕ್ಚರ್ ಹಾಕ್ಕೊಂಡು, ಹೊರಡುವಷ್ಟರಲ್ಲಿ 2 ತಾಸು ತಡವಾಗಿತ್ತು. ಆರ್ಡರ್ ಮಾಡಿದವರಿಗೆ ನನ್ನ ಸಮಸ್ಯೆ ಹೇಳಿಕೊಂಡಾಗ, ಅವರು ಏಕ್‌ದಂ ರೇಗಾಡಿಬಿಟ್ಟರು. ಮೌನವಾಗಿ ಕೇಳಿಸಿಕೊಂಡೆ. “ಕಂಪ್ಲೇಂಟ್ ಮಾಡ್ತೀನಿ’ ಅಂತಲೂ ಹೇಳಿದರು. ಅನೇಕ ಸಲ ನಮಗೇ ಊಟ ಮಾಡೋದಿಕ್ಕೆ ಟೈಮ್ ಇರೋದಿಲ್ಲ. ಅಂಥ ಟೈಮಲ್ಲಿ ಸ್ನ್ಯಾಕ್ಸ್ ತಿಂದು ಹೊಟ್ಟೆ ತುಂಬಿಸಿಕೊಳ್ತೀವಿ. ರಾತ್ರಿ ಹೊತ್ತಲ್ಲಂತೂ ಬೇರೆಲ್ಲರಿಗೂ ಊಟ ತಲುಪಿಸುತ್ತೇವೆ. ವಾಪಸು ಬರುವಾಗ ನಮಗೇ ಊಟ ಇರೋಲ್ಲ. ಫುಟ್‌ಪಾತ್ ಊಟವೇ ನನಗೆ ಚೀಪ್ ಆ್ಯಂಡ್ ಬೆಸ್ಟ್.
– ಗುರುನಾಥ್ ಎನ್.
ಮಧ್ಯಾಹ್ನದ ಊಟ: ಸಂಜೆ 5 ಗಂಟೆ
ರಾತ್ರಿ ಊಟ: 12 ಗಂಟೆ
ಆಂಧ್ರಪ್ರದೇಶದ ನಾನು, ಬಡತನದ ಕಾರಣದಿಂದ ಓದನ್ನು ಅರ್ಧಕ್ಕೇ ಬಿಟ್ಟು, ಬೆಂಗಳೂರು ಸೇರಿಕೊಂಡೆ. ಸ್ವಿಗ್ಗಿಯಲ್ಲಿ ಕೆಲಸ ಸಿಕ್ಕಿ ಒಂದೂವರೆ ವರ್ಷವಾಯಿತು. ಇಲ್ಲಿ ಒಂದೊಂದು ದಿನವೂ ಹತ್ತಾರು ಅನುಭವ. ಇನ್ನೇನು ಸರಿಯಾದ ಪಾಯಿಂಟ್ ಮುಟ್ಟಿದೆವು ಎಂಬ ಖುಷಿಯಲ್ಲಿದ್ದಾಗ, ಲೆಕ್ಕಾಚಾರವೇ ಉಲ್ಟಾ ಆಗಿದ್ದೂ ಇದೆ. ನನ್ನ ಒಂದು ಆರ್ಡರ್ ಕತೆಯೂ ಹಾಗೆಯೇ ಆಗಿತ್ತು… ಅವತ್ತು ಹರಿಶ್ಚಂದ್ರ ಘಾಟ್ ಪಕ್ಕದ ಬಡಾವಣೆಗೆ ಡೆಲಿವರಿ ಇತ್ತು. ಅಲ್ಲಿಗೆ ಹೋಗಿ ಕರೆಮಾಡಿದಾಗ, ಆರ್ಡರ್ ಮಾಡಿದ್ದ ಪಾರ್ಟಿ, “ರಾಜಾಜಿನಗರದಲ್ಲಿದ್ದೀನಿ. ಇಲ್ಲಿಗೇ ಆರ್ಡರ್ ತಲುಪಿಸಿ’ ಅಂದ್ರು. ಲೊಕೇಶನ್ ಪಾಯಿಂಟ್‌ಗಿಂತ ತುಸು ದೂರವೇ ಆದರೂ, ಅಲ್ಲಿಗೆ ಹೋದಾಗ, ಆ ಪಾರ್ಟಿ ಸಿಗಲೇ ಇಲ್ಲ. ಅವತ್ತು ಅರ್ಧ ಸಮಯ ಅವರನ್ನು ಹುಡುಕೋದರಲ್ಲೇ ಕಳೆದುಹೋಯ್ತು. ಪೆಟ್ರೋಲ್ ಖರ್ಚು ನನ್ನ ಅಂದಾಜು ಮೀರಿತ್ತು. ಅವತ್ತು ಇಡೀ ದಿನ ಆರ್ಡರ್‌ಗಳೂ ಕಡಿಮೆಯಾಗಿ, ನಷ್ಟವಾಯ್ತು. ರಾಂಗ್ ಲೊಕೇಶನ್, ನಮಗೆ ದೊಡ್ಡ ತಲೆನೋವು. ಸಮಯಕ್ಕೆ ಸರಿಯಾಗಿ ತಲುಪದೇ ಇದ್ದಾಗ, ಕಂಪ್ಲೇಂಟ್ ಮಾಡ್ತೀನಿ, ಕೇಸ್ ಹಾಕ್ತೀನಿ ಎನ್ನುವ ಮಾತುಗಳು ತುಂಬಾ ದುಃಖ ತರಿಸುತ್ತವೆ. ಮನೆಯ ಬಾಗಿಲು ತಟ್ಟೋವಾಗ,ಆ ಮಕ್ಕಳ ಊಟ ಮುಗಿದಿತ್ತು!
– ರಾಜೇಶ್
ಮಧ್ಯಾಹ್ನದ ಊಟ: ಸಂಜೆ 4.30- 5 ಗಂಟೆ
ರಾತ್ರಿ ಊಟ: 12 ಗಂಟೆ
ನಾನು ಆಂಧ್ರಪ್ರದೇಶದ ಅಮರಾಪುರದಲ್ಲಿದ್ದಾಗ (ಹುಟ್ಟೂರು), ಮಳೆಗಾಲದಲ್ಲಿ ಬಹಳ ಖುಷಿಪಡುತ್ತಿದ್ದೆ. ಮಳೆಯಲ್ಲಿ ಕಾಲ ಕಳೆಯುವುದೇ ಒಂದು ಚೆಂದವಿತ್ತು. ಆದರೆ, ಬೆಂಗಳೂರಿನಲ್ಲಿ ಸ್ವಿಗ್ಗಿ ಡೆಲಿವರಿ ಬಾಯ್ ಆದ ಮೇಲೆ, ಇಲ್ಲಿನ ಮಳೆ ನನಗೆ ನೀಡಿದ ಅನುಭವಗಳೇ ಬೇರೆ. ರಸ್ತೆಯಲ್ಲಿ ನೀರು ತುಂಬಿಕೊಂಡು, ಟ್ರಾಫಿಕ್ ಜಾಸ್ತಿಯಾದಾಗ, ನಮಗೆ ದಾರಿಗಳೇ ಇರುವುದಿಲ್ಲ. ಎಷ್ಟೋ ಸಲ ಮಳೆಯನ್ನು ಲೆಕ್ಕಿಸದೇ, ಡೆಲಿವರಿ ಕೊಟ್ಟಿದ್ದೇನೆ. ಅವತ್ತೂಂದು ದಿನ, ಜೋರು ಮಳೆ ಸುರಿಯುತ್ತಿತ್ತು. ಒಂದೇ ರೀತಿಯ ಅಡ್ರೆಸ್‌ಗಳಿಂದ ಗಲಿಬಿಲಿಗೊಂಡು, ಡೆಲಿವರಿ ಕೊಡೋದು ತಡವಾಯ್ತು. ನಾನು ಆ ಮನೆಯ ಬಾಗಿಲು ತಟ್ಟುವಷ್ಟರಲ್ಲಿ, ಇಬ್ಬರು ಮಕ್ಕಳ ಊಟ ಮುಗಿದಿತ್ತು. ನನಗೇ ಬೇಸರ ಆಗಿತ್ತು. ರಾತ್ರಿ ನಿದ್ರೆ ಬಂದಿರಲಿಲ್ಲ. ನನ್ನ ಊಟ ನಿತ್ಯವೂ, ತಡರಾತ್ರಿಯ ಬಳಿಕವೇ. ಎಷ್ಟೋ ಸಲ ಊಟ ಸಿಗದೇ ಇದ್ದಾಗ, ರೂಮ್‌ನಲ್ಲಿ ಊಟ ಸಿದ್ಧ ಮಾಡಿ, ಮಲಗುವಷ್ಟರಲ್ಲಿ ರಾತ್ರಿ ಒಂದೂವರೆ ದಾಟಿರುತ್ತೆ. ಮತ್ತೆ ಬೆಳಗ್ಗೆ 6 ಗಂಟೆಗೆ ಅಲರಾಂ ಬಡಿದುಕೊಳ್ಳುತ್ತೆ, ಬೈಕ್ ವ್ರೂಂ ವ್ರೂಂ ಅನ್ನುತ್ತೆ!
Related Articles
– ರಮೇಶ್
ಮಧ್ಯಾಹ್ನ ಊಟ: ಸಂಜೆ 4 ಗಂಟೆ
ರಾತ್ರಿ ಊಟ: 12.30
ಒಮ್ಮೆ ಪಿ.ಜಿ. ಹುಡುಗರು, ಅವರ ಫ್ರೆಂಡ್ ಒಬ್ಬರಿಗೆ ಬರ್ತ್‌ಡೇ ಪಾರ್ಟಿ ಇಟ್ಕೊಂಡಿದ್ರು. ಬರ್ತ್ ಡೇ ಐಟಮ್ಸ್, ನನಗೆ ಬುಕ್ಕಿಂಗ್ ಆಗಿತ್ತು. ಅದನ್ನು ತೆಗೆದುಕೊಂಡು, ವಿಜಯನಗರದ ಲೊಕೇಶನ್‌ಗೆ ಹೋಗಿದ್ದೆ. ಅಲ್ಲಿಗೆ ಹೋಗಿ ಕಾಲ್ ಮಾಡಿದರೆ, ಅವರು ಬೇರೆ ವಿಳಾಸ ಕೊಟ್ಟು, ಅಲ್ಲಿಗೆ ಬರುವಂತೆ ಸೂಚಿಸಿದರು. ಸರಿ ಅಂತ, ಅವರು ಹೇಳಿದ್ದಲ್ಲಿಗೆ ಹೋಗಿ ಕರೆ ಮಾಡಿದರೆ ಪಾರ್ಟಿ, ಕಾಲ್ ರಿಸೀವ್ ಮಾಡಲೇ ಇಲ್ಲ. ಅವರ ಹುಡುಗಾಟಿಕೆಯಿಂದ ನನಗೆ ಅವತ್ತಿನ ಆರ್ಡರ್‌ಗಳೇ ತಪ್ಪಿಹೋದವು. ಪೆಟ್ರೋಲ್ ಖರ್ಚೂ ಹೊರೆ ಆಯಿತು. ಝೊಮೇಟೋ ಸರ್ವಿಸ್ ಕೊಡುವಾಗ, ಇಂಥ ಅನುಭವಗಳು ಸಾಕಷ್ಟಾಗುತ್ತವೆ. ಕಚೇರಿಗಳಿಗೆ ಊಟ ಆರ್ಡರ್ ಮಾಡಿದವರೂ, ಕೆಲವೊಮ್ಮೆ ಹೀಗೆಯೇ ಸತಾಯಿಸುವುದುಂಟು. ಬೆಂಗಳೂರಿನಲ್ಲಿ ಹುಟ್ಟಿದ ನನಗೆ ಇಲ್ಲಿನ ಏರಿಯಾಗಳು ಹೊಸತಲ್ಲ. ಆದರೆ, ತಪ್ಪು ವಿಳಾಸ, ಹುಸಿ ಆರ್ಡರ್‌ಗಳಿಂದ ಕೊಂಚ ತಬ್ಬಿಬ್ಟಾಗುತ್ತೇನೆ. ಡೆಲಿವರಿ ಕೆಲಸದಿಂದ ನನಗೆ ಹಣಕ್ಕೇನೂ ತೊಂದರೆಯಿಲ್ಲ. ನಿತ್ಯ ಕನಿಷ್ಠ 5 ಗಂಟೆ ನಿದ್ದೆ. ಮಧ್ಯಾಹ್ನ- ರಾತ್ರಿಯ ಊಟ ಮಾತ್ರ, ಹದ್ದುಮೀರುತ್ತದೆ. ಏನ್ ಮಾಡೋದು ಸ್ವಾಮಿ, ಹೊಟ್ಟೆಪಾಡು! ನಗುತ್ತಾ ಸೇವೆ ಮಾಡುವುದೇ ನನ್ನ ಧರ್ಮ.
Advertisement