ಚಿಕ್ಕೋಡಿ: ಕೋವಿಡ್-19ರ ಲಾಕ್ ಡೌನ್‌ದಲ್ಲಿ ನಷ್ಟ ಅನುಭವಿಸಿದ ರೈತರ ನೆರವಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಧಾವಿಸಿದ್ದು, ಗೋವಿನಜೋಳ, ಹೂ, ತರಕಾರಿ ಹಾಗೂ ಹಣ್ಣು ಬೆಳೆದ ರೈತರನ್ನು ಗುರುತಿಸಿ ಪರಿಹಾರ ಕೊಡುವ ವ್ಯವಸ್ಥೆ ಮಾಡಬೇಕು ಎಂದು ವಿಧಾನ ಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಹೇಳಿದರು.
ತಾಲೂಕಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಘೋಷಣೆಯಾದ ಪರಿಹಾರದ ಹಣವನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕೆಲಸವನ್ನು ಅಧಿಕಾರಿಗಳು ಪ್ರಾಮಾಣಿಕವಾಗಿ ಮಾಡಬೇಕು. ಚಿಕ್ಕೋಡಿ ತಾಲೂಕಿನಲ್ಲಿ 17 ಸಾವಿರ ಜನ ರೈತರು ಗೋವಿನಜೋಳ ಬೆಳೆಗಾರರಿದ್ದು, ಅವರಿಗೆ ಮುಖ್ಯಮಂತ್ರಿ ಪರಿಹಾರಧನ ನೀಡಬೇಕಾಗಿದೆ. ಯಾವ ರೈತರಿಗೂ ಅನ್ಯಾಯವಾಗದಂತೆ ಸಮರ್ಪಕವಾಗಿ ಸೇವಾ ಸಿಂಧು ಪೋರ್ಟಲ್‌ದಲ್ಲಿ ಅರ್ಜಿ ಸಲ್ಲಿಸಿ ಗ್ರಾಮ ಮಟ್ಟದಲ್ಲಿ ಡಂಗುರ ಸಾರಿ ರೈತರ ಪಟ್ಟಿಯ ಯಾದಿ ಓದಿ ತಿಳಿಸಿ ಅಂತಿಮವಾಗಿ ಪರಿಹಾರ ನೀಡಬೇಕು ಎಂದು ಸಲಹೆ ನೀಡಿದರು.
ಗಡಿ ಭಾಗ ಹಾಗೂ ಚಿಕ್ಕೋಡಿ ನಗರದ ಸುತ್ತಮುತ್ತ ಪ್ರದೇಶದಲ್ಲಿ ಕೈಮಗ್ಗ ಮತ್ತು ನೇಕಾರರಿದ್ದು, ಇವರಿಗೂ ಮುಖ್ಯಮಂತ್ರಿ ಕೈಮಗ್ಗ ಹಾಗೂ ನೇಕಾರ ಸಮ್ಮಾನ ಯೋಜನೆ ಮೂಲಕ ಪರಿಹಾರ ಘೋಷಣೆ ಮಾಡಲಾಗಿದೆ. ತಾಲೂಕಿನ 1079 ಜನರಿಗೆ ಯೋಜನೆ ಅನ್ವಯವಾಗಲಿದೆ ಎಂದರು.
ಉದ್ಯೋಗ ಖಾತ್ರಿ ಯೋಜನೆಯಡಿ ತಾಲೂಕಿನಲ್ಲಿ 3416 ಫಲಾನುಭವಿಗಳು ಉದ್ಯೋಗದ ಲಾಭ ಪಡೆದುಕೊಂಡಿದ್ದಾರೆ. ಇನ್ನೂ ಹೆಚ್ಚಿನ ಜನರನ್ನು ಉದ್ಯೋಗ ಖಾತ್ರಿ ಕೆಲಸ ಮಾಡಲು ಪ್ರೋತ್ಸಾಹ ನೀಡಬೇಕು ಎಂದು ಸೂಚಿಸಿದರು. ಕೋವಿಡ್ ನಿಯಂತ್ರಿಸುವಲ್ಲಿ ಎಲ್ಲ ಸ್ತರದ ಅಧಿಕಾರಿಗಳು ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ತಹಶೀಲ್ದಾರ್ ಸುಭಾಷ ಸಂಪಗಾವಿ, ತಾಪಂ ಇಒ ಕೆ.ಎಸ್. ಪಾಟೀಲ, ಮುಖ್ಯಾಧಿಕಾರಿ ಡಾ| ಸುಂದರ ರೋಗಿ, ಟಿಎಚ್‌ಒ ಡಾ| ವಿಠಲ ಶಿಂಧೆ, ಸಿಡಿಪಿಒ ದೀಪಾ ಕಾಳೆ ಇದ್ದರು.