ಚಾಮರಾಜನಗರ: ಸಮಗ್ರ ಕೃಷಿ ಅಭಿಯಾನದ ಮಾಹಿತಿಯನ್ನು ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಪ್ರತಿ ಹಳ್ಳಿಯ ಎಲ್ಲಾ ರೈತರಿಗೂ ಸಮರ್ಪಕವಾಗಿ ತಲುಪಿಸಬೇಕು ಎಂದು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಮಗ್ರ ಕೃಷಿ ಅಭಿಯಾನ, ಇಲಾಖೆಗಳ ನಡಿಗೆ, ರೈತರ ಮನೆ ಬಾಗಿಲಿಗೆ ಕಾರ್ಯಕ್ರಮದ ಜಿಲ್ಲಾ ಅನುಷ್ಠಾನ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಯೋಜನೆ ಸದ್ಬಳಕೆ ಆಗಲಿ: ಕೃಷಿ ಇಲಾಖೆ ಅಧಿಕಾರಿಗಳು ಸಮಗ್ರ ಕೃಷಿ ಅಭಿಯಾನದ ಮಾಹಿತಿಯನ್ನು ರೈತರಿಗೆ ನೀಡುವುದರ ಜೊತೆಗೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ರೈತರಿಗೆ ಸರ್ಕಾರದಿಂದ ದೊರಕುವ ಯೋಜನೆಗಳ ಬಗ್ಗೆ ಮಾಹಿತಿ ನೀಡಬೇಕು. ನರೇಗಾ ಯೋಜನೆ ಕರಪತ್ರ ಮುದ್ರಿಸಿ ರೈತರಿಗೆ ಮಾಹಿತಿ ನೀಡುವುದರ ಜೊತೆಗೆ ಯೋಜನೆ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಬೇಕು ಎಂದರು.
ನೆರವಿನ ಬಗ್ಗೆ ತಿಳಿಸಿಕೊಡಿ: ಹೋಬಳಿ ಮಟ್ಟದ ಸಮಗ್ರ ಕೃಷಿ ಅಭಿಯಾನದಲ್ಲಿ ಹೆಚ್ಚಿನ ರೈತರನ್ನು ಸೇರಿಸುವ ನಿಟ್ಟಿನಲ್ಲಿ ಕೃಷಿ ಇಲಾಖೆಯೊಂದಿಗೆ ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಪಶುಪಾಲನೆ, ಸಹಕಾರ, ಕಂದಾಯ ಇಲಾಖೆ ಅಧಿಕಾರಿಗಳೂ ಹೆಚ್ಚಿನ ಹೊಣೆ ಹೊತ್ತು ಶ್ರಮಿಸಬೇಕು. ಆಯಾ ಇಲಾಖೆಗಳಲ್ಲಿ ರೈತರಿಗೆ ದೊರಕಬಹುದಾದ ನೆರವುಗಳ ಬಗ್ಗೆ ತಿಳಿಸಿಕೊಡಬೇಕು ಎಂದು ಹೇಳಿದರು.
ರೈತರು ಬೆಳೆದ ಬೆಳೆಗಳಿಗೆ ವಿಮೆ ಮಾಡಿಸುವುದು, ಬಡ ಹಾಗೂ ಸಣ್ಣ ಪುಟ್ಟ ರೈತರಿಗೆ ಸಮಗ್ರ ಕೃಷಿ ಅಭಿಯಾನದ ಅಗತ್ಯತೆ ಮತ್ತು ಅನುಕೂಲ ತಿಳಿಸಬೇಕೆಂದು ಅನುಷ್ಠಾನ ಸಮಿತಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಸ್ವಾವಲಂಬಿ ಜೀವನ ನಡೆಸಿ: ಜಿಪಂ ಸಿಇಒ ಹಾಗೂ ಸಮಗ್ರ ಕೃಷಿ ಅಭಿಯಾನದ ಸಹ ಅಧ್ಯಕ್ಷೆ ಕೆ.ಎಸ್.ಲತಾ ಕುಮಾರಿ, ಸಮಗ್ರ ಕೃಷಿ ಅಭಿಯಾನವನ್ನು ರೈತರಿಗೆ ಸಮರ್ಪಕವಾಗಿ ತಲುಪಿಸಿದರೆ ರೈತರು ಸ್ವಾವಲಂಬನೆ ಜೀವನ ಮಾಡಲು ಸಹಕಾರಿಯಾಗುತ್ತದೆ ಎಂದರು.
ವಲಸೆ ತಡೆಗಟ್ಟಿ: ಅಭಿಯಾನಕ್ಕೆ ಸಂಬಂಧಪಟ್ಟ ವಿವಿಧ ಇಲಾಖೆಗಳಿಂದ ರೈತರಿಗೆ ಇರುವ ಅನುಕೂಲಗಳನ್ನು ಭಿತ್ತಿ ಪತ್ರಗಳಲ್ಲಿ ಮುದ್ರಿಸಿ ಹಂಚುವುದರಿಂದ ಮಾಹಿತಿ ತಲುಪಲಿದೆ. ನರೇಗಾ ಯೋಜನೆ ಬಗ್ಗೆ ಹೆಚ್ಚಾಗಿ ಬಳಸಿದರೆ ರೈತರು ಉದ್ಯೋಗಕ್ಕಾಗಿ ಬೇರೆ ಕಡೆ ವಲಸೆ ಹೋಗುವುದನ್ನು ತಡೆಗಟ್ಟಬಹುದು ಎಂದು ತಿಳಿಸಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ತಿರುಮಲೇಶ್, ಪವರ್‌ಪಾಯಿಂಟ್ ಮೂಲಕ ಸಮಗ್ರ ಕೃಷಿ ಅಭಿಯಾನದ ಮಾಹಿತಿಯನ್ನು ಅನುಷ್ಠಾನ ಸಮಿತಿ ಅಧಿಕಾರಿಗಳಿಗೆ ವಿವರಿಸಿದರು.